WPL 2026 RCB: ಆರ್‌ಸಿಬಿ ವಿರುದ್ಧ ಮಂಡಿಯೂರಿದ ಯುಪಿ ವಾರಿಯರ್ಸ್: ಸ್ಮೃತಿ ಮಂಧಾನ ಬಳಗ ನೇರ ಫೈನಲ್ ಪ್ರವೇಶ
WPL 2026 RCB: ಡಬ್ಲ್ಯೂಪಿಎಲ್ 2026ರ ಲೀಗ್ ಹಂತದ ಅತ್ಯಂತ ನಿರ್ಣಾಯಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯುಪಿ ವಾರಿಯರ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ನೇರವಾಗಿ ಫೈನಲ್ ಪ್ರವೇಶಿಸಿದೆ. ಈ ಗೆಲುವಿನೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಖಚಿತಪಡಿಸಿಕೊಂಡು, ಎಲಿಮಿನೇಟರ್ ಹಂತವನ್ನು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಟೂರ್ನಿಯ ಆರಂಭದಲ್ಲೇ ಸತತ ಐದು ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಆರ್‌ಸಿಬಿ ಉತ್ತಮ ಆರಂಭ ಕಂಡಿತ್ತು. ಬಳಿಕ ಎರಡು ಪಂದ್ಯಗಳಲ್ಲಿ ಸೋಲು ಕಂಡರೂ, ಯುಪಿ ವಾರಿಯರ್ಸ್ ವಿರುದ್ಧದ ಈ ಮಹತ್ವದ ಪಂದ್ಯದಲ್ಲಿ ತಂಡ ಮತ್ತೆ ತನ್ನ ಉತ್ತಮ ಪ್ರದರ್ಶನ ತೋರಿ ಭರ್ಜರಿ ಗೆಲುವು ಕಂಡಿತು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ಸಮತೋಲನದ ಆಟವಾಡಿದ ಬೆಂಗಳೂರು ತಂಡ ಈ ಗೆಲುವು ಸಾಧಿಸಿತು.

ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ 18ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯುಪಿ ವಾರಿಯರ್ಸ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆದ ಈ ಮಹತ್ವದ ಪಂದ್ಯದಲ್ಲಿ ಆರ್‌ಸಿಬಿ ಸಂಪೂರ್ಣ ಪ್ರಾಬಲ್ಯ ಸಾಧಿಸಿತು.
ಈ ಜಯದೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ 12 ಅಂಕಗಳನ್ನು ಪಡೆದ ಆರ್‌ಸಿಬಿ, ಯಾವುದೇ ಲೆಕ್ಕಾಚಾರಗಳಿಲ್ಲದೆ ನೇರವಾಗಿ ಫೈನಲ್ ಪ್ರವೇಶಿಸಿದೆ. ಮತ್ತೊಂದೆಡೆ ಯುಪಿ ವಾರಿಯರ್ಸ್ ಪಾಲಿಗೆ ಈ ಸೋಲು ಸೀಸನ್‌ನಿಂದ ಹೊರಬೀಳುವಂತೆ ಮಾಡಿತು. ಇನ್ನೂ ಈ ಗೆಲುವು ಆರ್‌ಸಿಬಿಗೆ ಆತ್ಮವಿಶ್ವಾಸ ಹೆಚ್ಚಿಸುವುದರ ಜೊತೆಗೆ, ಪ್ರಶಸ್ತಿಗೆ ಗೆಲುವಿಗೆ ಮತ್ತೊಂದು ಹೆಜ್ಜೆ ಹತ್ತಿರ ಮಾಡಿದೆ.
ಆರ್‌ಸಿಗೆ ಭರ್ಜರಿ ಗೆಲುವು: ಟಾಸ್ ಸೋತು ಮೊದಲು ಬ್ಯಟ್ ಬೀಸಿದ ಯುಪಿ ವಾರಿಯರ್ಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 143 ರನ್‌ಗಳನ್ನು ಕಲೆಹಾಕಿ 144 ರನ್‌ಗಳ ಸಾಧಾರಣ ಗುರಿ ನೀಡಿತು. ಈ ಗುರಿ ಬೆನ್ನತ್ತಿದ ಆರ್‌ಸಿಬಿ 13.1 ಓವರ್‌ಗಳಿಗೆ 2 ವಿಕೆಟ್ ನಷ್ಟಕ್ಕೆ 147 ರನ್‌ಗಳನ್ನು ಬಾರಿಸಿ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಸ್ಮೃತಿ ಮಂಧಾನ ಬಳಗ ಎಲಿಮಿನೇಟರ್ ಪಂದ್ಯಗಳಿಂದ ತಪ್ಪಿಸಿಕೊಂಡು ನೇರವಾಗಿ ಫೈನಲ್ ಪ್ರವೇಶ ಮಾಡಿತು.
ಆರ್‌ಸಿಬಿ ಬೌಲರ್‌ಗಳ ದಾಳಿಗೆ ಯುಪಿ ವಾರಿಯರ್ಸ್ ತತ್ತರ: ಮೊದಲು ಬ್ಯಾಟಿಂಗ್ ಮಾಡಿದ ಯುಪಿ ವಾರಿಯರ್ಸ್ ತಂಡ ಆರ್‌ಸಿಬಿ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿದ್ದು, ನಿಗದಿತ ಓವರ್‌ಗಳಲ್ಲಿ ಕೇವಲ 143 ರನ್‌ಗಳನ್ನು ಕಲೆಹಾಕಲು ಮಾತ್ರ ಸಾಧ್ಯವಾಯಿತು. ಆರಂಭಿಕ ಹಂತದಲ್ಲೇ ವಿಕೆಟ್‌ಗಳು ಉರುಳಿದ ಕಾರಣ ಯುಪಿ ತಂಡ ದೊಡ್ಡ ಮೊತ್ತ ಕಲೆಹಾಕಲು ವಿಫಲವಾಯಿತು. ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ತುಸು ಬಿರುಸಿನ ಆಟ ಆಡಿದರೂ ಸಹ ಆರ್‌ಸಿಬಿ ಬೌಲರ್‌ಗಳ ದಾಳಿಯಿಂದ ದೊಡ್ಡ ಸ್ಕೋರ್ ಕಲೆಹಾಕಲು ಸಾಧ್ಯವಾಗಲಿಲ್ಲ.
ಯುಪಿ ವಾರಿಯರ್ಸ್ ಪರ ನಾಯಕಿ ಮೆಗ್ ಲ್ಯಾನಿಂಗ್ ಮತ್ತು ಆಲ್‌ರೌಂಡರ್ ದೀಪ್ತಿ ಶರ್ಮಾ ಮಾತ್ರ ತಂಡಕ್ಕೆ ಆಸರೆಯಾದರು. ಲ್ಯಾನಿಂಗ್ 41 ರನ್‌ಗಳ ಕೊಡುಗೆ ನೀಡಿದರೆ, ದೀಪ್ತಿ ಶರ್ಮಾ 55 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರು. ಆದರೆ, ಉಳಿದ ಬ್ಯಾಟರ್‌ಗಳು ಆರ್‌ಸಿಬಿ ಬೌಲರ್‌ಗಳ ಎದುರು ಹೆಚ್ಚು ಸಮಯ ಕ್ರೀಸ್‌ನಲ್ಲಿ ಉಳಿಯಲು ವಿಫಲರಾದರು. ಇದರ ಪರಿಣಾಮ ಯುಪಿ ತಂಡ ದೊಡ್ಡ ಮೊತ್ತ ಕಲೆಹಾಕಲು ವಿಫಲವಾಯಿತು.
ಸುಲಭವಾಗಿ ಗುರಿ ತಲುಪಿದ ಆರ್‌ಸಿಬಿ: ಇನ್ನು ಯುಪಿ ವಾರಿಯರ್ಸ್ ನೀಡಿದ 144 ರನ್‌ಗಳ ಗುರಿಯನ್ನು ಮುಟ್ಟುವಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯಶಸ್ವಿಯಾಯಿತು. ಕೇವಲ ಎರಡು ವಿಕೆಟ್ ಕಳೆದುಕೊಂಡು ಸುಲಭವಾಗಿ ಗುರಿ ತಲುಪಿತು. ಈ ಮೂಲಕ ಆರ್‌ಸಿಬಿ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಖಚಿತಪಡಿಸಿಕೊಳ್ಳುವುದಲ್ಲದೆ, ಫೈನಲ್‌ಗೆ ನೇರವಾಗಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿತು.
ಗ್ರೇಸ್ ಹ್ಯಾರಿಸ್, ಸ್ಮೃತಿ ಸ್ಫೋಟಕ ಬ್ಯಾಟಿಂಗ್: ಆರ್‌ಸಿಬಿ ಪರ ಆರಂಭಿಕ ಆಟಗಾರ್ತಿ ಗ್ರೇಸ್ ಹ್ಯಾರಿಸ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಮೂಲಕ ಕೇವಲ 37 ಎಸೆತಗಳಲ್ಲಿ 75 ರನ್‌ಗಳನ್ನು ಬಾರಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 13 ಬೌಂಡರಿಗಳು ಮತ್ತು ಎರಡು ಸಿಕ್ಸರ್‌ಗಳು ಸೇರಿವೆ. ನಾಯಕಿ ಸ್ಮೃತಿ ಮಂಧಾನ ಸಹ ಶಾಂತ ಹಾಗೂ ಆತ್ಮವಿಶ್ವಾಸದ ಆಟ ಪ್ರದರ್ಶಿಸಿ ಅಜೇಯ ಅರ್ಧಶತಕ ದಾಖಲಿಸಿದರು. ಈ ಇಬ್ಬರು ಆರಂಭಿಕರ ನಡುವೆ ಮೊದಲ ವಿಕೆಟ್‌ಗೆ 108 ರನ್‌ಗಳ ಭರ್ಜರಿ ಜೊತೆಯಾಟ ಆಡಿದರು.
ಹ್ಯಾರಿಸ್ ವಿಕೆಟ್ ಒಪ್ಪಿಸಿದ ಬಳಿಕವೂ ಸ್ಮೃತಿ ಮಂಧಾನ ತಂಡವನ್ನು ಸುಲಭವಾಗಿ ಗೆಲುವಿನ ದಡ ಮುಟ್ಟಿಸಿದರು. ಅಂತಿಮವಾಗಿ ಆರ್‌ಸಿಬಿ ಕೇವಲ 13.1 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ಗುರಿ ಮುಟ್ಟುವ ಮೂಲಕ ಸುಲಭ ಜಯ ದಾಖಲಿಸಿತು. ಈ ಜಯದೊಂದಿಗೆ ಆರ್‌ಸಿಬಿ ತಂಡ ನೇರವಾಗಿ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದು, ಯುಪಿ ವಾರಿಯರ್ಸ್ ಪ್ಲೇ ಆಫ್ ಪೈಪೋಟಿಯಿಂದ ಹೊರಬಿದ್ದಿದೆ.












Click it and Unblock the Notifications