World Cup 2023 Schedule: ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಭಾರತ-ಪಾಕಿಸ್ತಾನ ಪಂದ್ಯ ಯಾವಾಗ?
ಮುಂಬೈ, ಜೂನ್ 27: ಬಹು ನಿರೀಕ್ಷಿತ ಏಕದಿನ ವಿಶ್ವಕಪ್ ಪಂದ್ಯಾವಳಿಯ ವೇಳಾಪಟ್ಟಿ ಬಿಡಗಡೆಯಾಗಿದೆ. ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಐಸಿಸಿ, ಬಿಸಿಸಿಐ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಕ್ಟೋಬರ್ 5ರಂದು ಪಂದ್ಯಾವಳಿಗೆ ಚಾಲನೆ ಸಿಗಲಿದ್ದು, ನವೆಂಬರ್ 19ರಂದು ಫೈನಲ್ ಪಂದ್ಯ ನಡೆಯಲಿದೆ.
ಉದ್ಘಾಟನಾ ಪಂದ್ಯ ಮತ್ತು ಫೈನಲ್ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ವಿಶ್ವದ ಅತಿ ದೊಡ್ಡ ಕ್ರೀಡಾಂಗಣದಲ್ಲಿ ಈ ಬಾರಿ ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿವೆ. ಅಕ್ಟೋಬರ್ 15ರಂದು ಈ ಬಹು ನಿರೀಕ್ಷಿತ ಪಂದ್ಯ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯವನ್ನು ಆಡುವುದಿಲ್ಲ, ಪಂದ್ಯದ ಸ್ಥಳವನ್ನು ಬದಲಾಯಿಸಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕಿರಿಕ್ ಮಾಡಿತ್ತಾದರೂ, ಐಸಿಸಿ ಮತ್ತು ಬಿಸಿಸಿಐ ಇದಕ್ಕೆ ಕ್ಯಾರೆ ಎನ್ನದ ಕಾರಣ ಪಾಕಿಸ್ತಾನ ಅಂತಿಮವಾಗಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಡಲು ಒಪ್ಪಿಕೊಂಡಿದೆ.
ಮತ್ತೊಂದು ವಿಶ್ವದಾಖಲೆ ನಿರ್ಮಾಣ?
ನರೇಂದ್ರ ಮೋದಿ ಕ್ರೀಡಾಂಗಣ 1,30,000 ಆಸನ ಸಾಮರ್ಥ್ಯ ಹೊಂದಿದ್ದು, ಸ್ಟೇಡಿಯಂ ಭರ್ತಿಯಾಗುವುದಂತೂ ನಿಶ್ಚಿತವಾಗಿದೆ. 2022 ರ ಐಪಿಎಲ್ ಫೈನಲ್ ಪಂದ್ಯ ಈ ಸ್ಟೇಡಿಯಂನಲ್ಲಿ ನಡೆದಿತ್ತು, ಗುಜರಾತ್-ರಾಜಸ್ಥಾನ ರಾಯಲ್ಸ್ ತಂಡಗಳ ನಡುವಿನ ಪಂದ್ಯವನ್ನು ವೀಕ್ಷಿಸಲು 1,01,566 ಜನ ಹಾಜರಾಗಿದ್ದು ಗಿನ್ನೆಸ್ ದಾಖಲೆ ಸೇರಿದೆ. ಈ ದಾಖಲೆ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಮುರಿಯುವುದು ನಿಶ್ಚಿತವಾಗಿದೆ.
ಅಕ್ಟೋಬರ್ 5ರಂದು ಐಸಿಸಿ ಏಕದಿನ ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್ ಅಪ್ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಇನ್ನು ಅಕ್ಟೋಬರ್ 8ರಂದು ಭಾರತ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಚೆನ್ನೈನ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.
ಭಾರತದ ಪಂದ್ಯಗಳು ಎಲ್ಲೆಲ್ಲಿ?
ಅಕ್ಟೋಬರ್ 8ರಂದು ಭಾರತ ಚೆನ್ನೈನಲ್ಲಿ ವಿಶ್ವಕಪ್ ಪಂದ್ಯಾವಳಿಯ ತಮ್ಮ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಅಕ್ಟೋಬರ್ 11 ರಂದು ಆಫ್ಘಾನಿಸ್ತಾನದ ವಿರುದ್ಧ ಸೆಣೆಸಲಿದ್ದು ಈ ಪಂದ್ಯ ದೆಹಲಿಯಲ್ಲಿ ನಡೆಯಲಿದೆ.
ಅಕ್ಟೋಬರ್ 15ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಡಾಂಗಣದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಆಡಲಿದೆ. ಅಕ್ಟೋಬರ್ 19ರಂದು ಪುಣೆಯಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತದ ಪಂದ್ಯ ನಡೆಯಲಿದೆ. ಅಕ್ಟೋಬರ್ 22ರಂದು ಧರ್ಮಶಾಲಾದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಸೆಣೆಸಲಿದೆ.
ಅಕ್ಟೋಬರ್ 29ರಂದು ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ನವೆಂಬರ್ 2ರಂದು ಮುಂಬೈನಲ್ಲಿ ಭಾರತ ಕ್ವಾಲಿಫೈಯರ್ 2 ತಂಡದ ಜೊತೆ ಸೆಣೆಸಲಿದೆ. ನವೆಂಬರ್ 5ರಂದು ಕೋಲ್ಕತ್ತಾದ ಈಡನ್ ಗಾರ್ಡನ್ ಅಂಗಳದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಆಡಲಿದೆ. ಏಕದಿನ ವಿಶ್ವಕಪ್‌ನ ಲೀಗ್ ಹಂತದ ಭಾರತ ತಂಡದ ಕೊನೆಯ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದ್ದು, ಕ್ವಾಲಿಫೈಯರ್ 1 ತಂಡದ ವಿರುದ್ಧ ಆಡಲಿದೆ.












Click it and Unblock the Notifications