Women Asia Cup 2026: ಭಾರತ Vs ಪಾಕಿಸ್ತಾನ, ಪ್ಲೇಯಿಂಗ್ 11, ಪಿಚ್ ರಿಪೋರ್ಟ್, ಸಮಯದ ವಿವರ
India Vs Pakistan: ಭಾರತ ಹಾಗೂ ಪಾಕಿಸ್ತಾನ ತಂಡಗಳು ಮತ್ತೊಮ್ಮೆ ಕ್ರಿಕೆಟ್ ಅಂಗಳದಲ್ಲಿ ಕಾದಾಟಕ್ಕೆ ಸಜ್ಜಾಗಿವೆ. ಶನಿವಾರ (ಸೆಪ್ಟೆಂಬರ್ 5) ನಡೆಯಲಿರುವ ಮಹಿಳಾ ಟಿ20 ಏಷ್ಯಾಕಪ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಹಾಗಾದ್ರೆ ಪ್ಲೇಯಿಂಗ್ 11, ಪಿಚ್ ರಿಪೋರ್ಟ್, ಸಮಯ ಹಾಗೂ ಸ್ಥಳದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಮಹಿಳಾ ಟಿ20 ಏಷ್ಯಾಕಪ್ 2026ರ ಟೂರ್ನಿಯ ಬಹುನಿರೀಕ್ಷಿತ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಸೆಪ್ಟೆಂಬರ್ 5ರಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದ್ದು, ಈ ಸಮರಕ್ಕಾಗಿ ಎರಡೂ ತಂಡಗಳು ಭರ್ಜರಿ ಸಿದ್ಧತೆ ನಡೆಸಿವೆ.

ಉತ್ತಮ ಫಾರ್ಮ್‌ನಲ್ಲಿರುವ ಟೀಮ್ ಇಂಡಿಯಾ
ಈ ಟೂರ್ನಿಯಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಇದುವರೆಗೂ ಸೋಲನ್ನೇ ಕಾಣದೆ ಮುನ್ನಡೆಯುತ್ತಿರುವುದು ವಿಶೇಷ. ಟೂರ್ನಿಯ ತಮ್ಮ ಮೊದಲ ಎರಡು ಪಂದ್ಯಗಳಲ್ಲಿ ಥೈಲ್ಯಾಂಡ್ ಮತ್ತು ಹಾಂಗ್ ಕಾಂಗ್ ಮಹಿಳಾ ತಂಡಗಳ ವಿರುದ್ಧ ಭರ್ಜರಿ ಜಯ ಬಾರಿಸಿರುವ 'ವುಮೆನ್ ಇನ್ ಬ್ಲೂ' ಪಡೆಯು, ಇದೀಗ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧವೂ ಅದೇ ರೀತಿಯ ಉತ್ತಮ ಪ್ರದರ್ಶನವನ್ನು ಮುಂದುವರಿಸುವ ನಿರೀಕ್ಷೆಯಲ್ಲಿದೆ.
ಪಾಕಿಸ್ತಾನಕ್ಕೆ ಗೆಲುವು ಅನಿವಾರ್ಯ
ಮತ್ತೊಂದೆಡೆ ಪಾಕಿಸ್ತಾನ ಮಹಿಳಾ ತಂಡವು ಟೂರ್ನಿಯಲ್ಲಿ ಇದುವರೆಗೆ ಕೇವಲ ಒಂದು ಪಂದ್ಯವನ್ನಷ್ಟೇ ಆಡಿದೆ. ಫಾತಿಮಾ ಸನಾ ನಾಯಕತ್ವದ ಪಾಕ್ ಪಡೆ ತನ್ನ ಮೊದಲ ಪಂದ್ಯದಲ್ಲಿ ಥೈಲ್ಯಾಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದು, ಇದೀಗ ಭಾರತದ ವಿರುದ್ಧದ ಮಹತ್ವದ ಕಾದಾಟಕ್ಕೂ ಮುನ್ನ ಅದೇ ಗೆಲುವಿನ ಲಯವನ್ನು ಕಾಯ್ದುಕೊಳ್ಳುವ ಭರವಸೆಯಲ್ಲಿದೆ.
ದುಬೈ ಪಿಚ್ ರಿಪೋರ್ಟ್
ಮಹತ್ವದ ಸಮರಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿರುವ ಈ ಪಂದ್ಯದಲ್ಲಿ ಪಿಚ್ ಹೇಗೆ ವರ್ತಿಸಲಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಪಿಚ್ ಬ್ಯಾಟರ್‌ಗಳು ಮತ್ತು ಬೌಲರ್‌ಗಳು ಇಬ್ಬರಿಗೂ ಸಮಾನ ನೆರವು ನೀಡುವ ಸಮತೋಲಿತ ಗುಣಲಕ್ಷಣವನ್ನು ಹೊಂದಿದೆ.
ಈ ಪಿಚ್ ಯಾರಿಗೆ ಅನುಕೂಲ?
ಪಂದ್ಯದ ಆರಂಭದಲ್ಲಿ ಬೌಲರ್‌ಗಳಿಗೆ ಪಿಚ್‌ನಿಂದ ಸ್ವಲ್ಪ ಸ್ವಿಂಗ್ ದಾಳಿಗೆ ಅನುಕೂಲ ಆಗುವುದರಿಂದ ಬ್ಯಾಟರ್‌ಗಳು ತಾಳ್ಮೆಯಿಂದ ಆಡುವುದು ಉತ್ತಮ. ಒಂದು ವೇಳೆ ಕ್ರೀಸ್‌ನಲ್ಲಿ ತುಂಬಾ ಸಮಯ ನೆಲೆಯೂರಿ ತಾಳ್ಮೆ ಕಾಯ್ದುಕೊಂಡರೆ, ಪಂದ್ಯದ ನಂತರದ ಹಂತಗಳಲ್ಲಿ ಬ್ಯಾಟರ್‌ಗಳು ಹೆಚ್ಚಿನ ರನ್ ಗಳಿಸಲು ಉತ್ತಮ ಅವಕಾಶ ಸಿಕ್ಕಂತಾಗಲಿದೆ ಅಂತಲೇ ಹೇಳಬಹುದು.
ಒಟ್ಟಿನಲ್ಲಿ ಹೇಳುವುದಾದರೆ ಇಂದಿನ ರೋಚಕ ಹಣಾಹಣಿಯು ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆಯಲಿದ್ದು, ಈ ಕ್ಷಣಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಸೋನಿ ಸ್ಪೋರ್ಟ್ಸ್, ಸೋನಿ ಲೈವ್ ಚಾನೆಲ್‌ಗಳಲ್ಲಿ ನೇರಪ್ರಸಾರವನ್ನು ವೀಕ್ಷಣೆ ಮಾಡಬಹುದಾಗಿದೆ.
ಭಾರತ ಹಾಗೂ ಪಾಕಿಸ್ತಾನ ತಂಡಗಳು
ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧನಾ (ಉಪನಾಯಕಿ), ಶಫಾಲಿ ವರ್ಮಾ, ಭಾರತಿ ಫುಲ್ಮಾಲಿ, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಜಿ ಕಮಲಿನಿ (ವಿಕೆಟ್ ಕೀಪರ್), ಅರುಂಧತಿ ರೆಡ್ಡಿ, ಪ್ರೇಮಾ ರಾವತ್, ರಾಧಾ ಯಾದವ್, ಶ್ರೀ ಚರಣಿ, ರೇಣುಕಾ ಠಾಕೂರ್, ನಂದಿನಿ ಶರ್ಮಾ, ಕ್ರಾಂತಿ ಗೌಡ್ ಮತ್ತು ಪ್ರತಿಕಾ ರಾವಲ್.
ಪಾಕಿಸ್ತಾನ ತಂಡ: ಫಾತಿಮಾ ಸನಾ (ನಾಯಕಿ), ಆಯೆಷಾ ಜಾಫರ್, ಇಮಾನ್ ನಸೀರ್, ಐಮನ್ ಫಾತಿಮಾ, ಗುಲ್ ಫಿರೋಜಾ, ಮೊಮಿನಾ ರಿಯಾಸತ್, ಮುನೀಬಾ ಅಲಿ ಸಿದ್ದಿಕಿ (ವಿಕೆಟ್ ಕೀಪರ್), ಸದಾಫ್ ಶಮಾಸ್, ನಶ್ರಾ ಸುಂಧು, ಸಾದಿಯಾ ಇಕ್ಬಾಲ್, ಸೈರಾ ಜಬೀನ್, ಶವ್ವಾಲ್ ಜುಲ್ಫಿಕರ್, ತುಬಾ ಹಸನ್, ಉಮ್-ಎ-ಹಾನಿ ಮತ್ತು ವಹೀದಾ ಅಖ್ತರ್.


Click it and Unblock the Notifications
