Rohit Sharma: ಹಿಟ್‌ಮ್ಯಾನ್ ಮೇಲೆ ಕಣ್ಣಿಟ್ಟಿರುವ ಪ್ರೀತಿ ಝಿಂಟಾ ಒಡೆತನದ ಫ್ರಾಂಚೈಸಿ!
ಐಪಿಎಲ್ 2025ರ ಮೆಗಾ ಹರಾಜಿಗಾಗಿ ಎಲ್ಲಾ ಐಪಿಎಲ್ ಫ್ರಾಂಚೈಸಿಗಳು ಸಿದ್ಧತೆ ಮಾಡಿಕೊಳ್ಳುತ್ತಿವೆ. ಪ್ರಮುಖ ಆಟಗಾರರು ತಂಡವನ್ನು ಬದಲಾಯಿಸುವ ಸಾಧ್ಯತೆ ಇದ್ದು, ಪ್ರಮುಖ ತಂಡಗಳು ದೊಡ್ಡ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿವೆ. ಪಂಜಾಬ್ ಕಿಂಗ್ಸ್ ತಂಡ ಕೂಡ ಈ ಬಾರಿ ಮೆಗಾಹರಾಜಿನಲ್ಲಿ ಪ್ರಮುಖ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಯೋಜನೆ ರೂಪಿಸಿದೆ.
ಐಪಿಎಲ್ ಇತಿಹಾಸದಲ್ಲಿ ಒಮ್ಮೆಯೂ ಕಪ್ ಗೆಲ್ಲದ ಪಂಜಾಬ್ ಕಿಂಗ್ಸ್ ಈ ಬಾರಿ ಪ್ರಮುಖ ಆಟಗಾರರ ಮೇಲೆ ಕಣ್ಣಿಟ್ಟಿದೆ. ಅದರಲ್ಲೂ ರೋಹಿತ್ ಶರ್ಮಾ ವಿಚಾರದಲ್ಲಿ ಪಂಜಾಬ್ ಕಿಂಗ್ಸ್ ಹೆಚ್ಚಿನ ಆಸಕ್ತಿ ತೋರುತ್ತಿದ್ದು, ಮುಂಬೈ ಇಂಡಿಯನ್ಸ್ ಏನಾದರೂ ಅವರನ್ನು ಬಿಡುಗಡೆ ಮಾಡಿದರೆ ದೊಡ್ಡ ಮೊತ್ತ ನೀಡಿಯಾದರೂ ಸರಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಿದೆ ಎನ್ನಲಾಗಿದೆ.

ಸಂಜಯ್ ಬಂಗಾರ್ ಹೇಳಿದ್ದೇನು?
ರೋಹಿತ್ ಶರ್ಮಾರನ್ನು ಪಂಜಾಬ್ ಕಿಂಗ್ಸ್ ತಂಡಕ್ಕೆ ಸೇರಿಸಿಕೊಳ್ಳುವ ಬಗ್ಗೆ ಫ್ರಾಂಚೈಸಿಯ ಕ್ರಿಕೆಟ್ ಅಭಿವೃದ್ಧಿಯ ಮುಖ್ಯಸ್ಥ ಸಂಜಯ್ ಬಂಗಾರ್ ಸುಳಿವುಕೊಟ್ಟಿದ್ದಾರೆ. ಆದರೆ ರೋಹಿತ್ ಶರ್ಮಾ ದೊಡ್ಡ ಮೊತ್ತಕ್ಕೆ ಹರಾಜಾಗಬಹುದು ಎಂದು ಅವರು ಹೇಳಿದ್ದಾರೆ.
ರೋಹಿತ್ ಶರ್ಮಾ ಏನಾದರೂ ಹರಾಜಿಗೆ ಬಂದರೆ, ಅವರನ್ನು ಖರೀದಿ ಮಾಡುವುದು ನಮ್ಮಲ್ಲಿ ಎಷ್ಟು ಹಣವಿದೆ ಎನ್ನುವುದರ ಮೇಲೆ ಅವಲಂಬಿತವಾಗಿದೆ. ಅವರು ಏನಾದರೂ ಹರಾಜಿಗೆ ನೋಂದಾಯಿಸಿಕೊಂಡರೆ ದೊಡ್ಡ ಮೊತ್ತಕ್ಕೆ ಹೋಗುತ್ತಾರೆ ಎಂದು ಸಂಜಯ್ ಬಂಗಾರ್ ಹೇಳಿದ್ದಾರೆ.
ಐಪಿಎಲ್‌ನ ಯಶಸ್ವಿ ನಾಯಕ
ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ಯಶಸ್ವಿ ನಾಯಕರಲ್ಲಿ ಒಬ್ಬರು. ಎಂಎಸ್ ಧೋನಿ ಮತ್ತು ರೋಹಿತ್ ಶರ್ಮಾ ಅತಿ ಹೆಚ್ಚು ಪ್ರಶಸ್ತಿ ಗೆದ್ದ ಯಶಸ್ವಿ ನಾಯಕರಾಗಿದ್ದಾರೆ. ಅವರ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ 2013, 2015, 2017, 2019 ಮತ್ತು 2020ರಲ್ಲಿ ಐದು ಬಾರಿ ಪ್ರಶಸ್ತಿ ಗೆದ್ದಿದೆ. 2024ರ ಐಪಿಎಲ್‌ಗೆ ಮುನ್ನ ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ನಾಯಕತ್ವದ ಜವಾಬ್ದಾರಿ ವಹಿಸಲಾಗಿದೆ.
ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ ತೊರೆದು ಮುಂಬೈ ಇಂಡಿಯನ್ಸ್ ತಂಡ ಸೇರಿಕೊಂಡಿದ್ದರು. ನಾಯಕತ್ವದಿಂದ ಕೆಳಗಿಳಿಸಿದ ಬಳಿಕ ರೋಹಿತ್ ಶರ್ಮಾ ಅವರಿಗೆ ಮುಂಬೈ ಇಂಡಿಯನ್ಸ್ ತಂಡದ ಜೊತೆಗೆ ಆಡುವುದು ಅದೇ ಕೊನೆಯ ಐಪಿಎಲ್ ಎನ್ನಲಾಗಿದೆ. ಈ ಬಾರಿ ಅವರು ಮುಂಬೈ ಇಂಡಿಯನ್ಸ್ ತೊರೆದು ಬೇರೆ ಫ್ರಾಂಚೈಸಿ ಸೇರುವ ಸಾಧ್ಯತೆ ಹೆಚ್ಚಾಗಿದೆ.
ಹಲವು ಫ್ರಾಂಚೈಸಿಗಳು ಈಗಾಗಲೇ ರೋಹಿತ್ ಶರ್ಮಾ ಮೇಲೆ ಕಣ್ಣಿಟ್ಟಿವೆ. ಮೆಗಾ ಹರಾಜಿಗೆ ಬಂದರೆ ಅವರು ದೊಡ್ಡ ಮೊತ್ತಕ್ಕೆ ಹರಾಜಾಗುವುದರಲ್ಲಿ ಯಾವುದೇ ಸಂಶಯ ಇಲ್ಲ, ಆದರೆ ಅವರನ್ನು ಮುಂಬೈ ಇಂಡಿಯನ್ಸ್ ತಂಡ ಬಿಡುಗಡೆ ಮಾಡುತ್ತದೆಯಾ ಇಲ್ಲ ಮನವೊಲಿಸಿ ತಂಡದಲ್ಲೇ ಮುಂದುವರೆಯಲು ಕೇಳುತ್ತದೆಯಾ ಎನ್ನುವುದನ್ನು ನೋಡಬೇಕಿದೆ.












Click it and Unblock the Notifications