Virat Kohli: ಇದು ಆರ್‌ಸಿಬಿಯ ಹೊಸ ಅಧ್ಯಾಯ; ಚಿನ್ನಸ್ವಾಮಿಯಲ್ಲಿ ಕನ್ನಡದಲ್ಲೇ ಮಾತನಾಡಿದ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಗಂಡು ಮಗುವಿನ ತಂದೆಯಾದ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಮಾರ್ಚ್ 19ರಂದು ಮಂಗಳವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಕೊಹ್ಲಿ ಕನ್ನಡದಲ್ಲಿ ಮಾತನಾಡುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (Bengaluru) ಎಂದು ಹೆಸರು ಬದಲಾವಣೆ ಮಾಡಲಾಗಿದೆ. ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಲಾಗಿದೆ. ಕಪ್ಪು-ಕೆಂಪು ಇದ್ದ ಜೆರ್ಸಿಯ ಬಣ್ಣ, ಈಗ ನೀಲಿ-ಕೆಂಪು ಬಣ್ಣಕ್ಕೆ ಬದಲಾಗಿದೆ. ಹೊಸ ಜೆರ್ಸಿಯಲ್ಲಿ ಇಡೀ ತಂಡ ಕಾಣಿಸಿಕೊಂಡಿತು.

ಅಭಿಮಾನಿಗಳ ಸಮ್ಮುಖದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ ಇದು ಆರ್‌ಸಿಬಿಯ ಹೊಸ ಅಧ್ಯಾಯ ಎಂದು ಹೇಳುವ ಮೂಲಕ ಕನ್ನಡಿಗರ ಮನಸೂರೆಗೊಂಡರು. ಮೊದಲ ಪಂದ್ಯ ಇನ್ನು ಎರಡು ದಿನ ಮಾತ್ರ ಇದ್ದು, ನಮಗೆ ಹೆಚ್ಚಿನ ಸಮಯ ಇಲ್ಲ ಎಂದು ಹೇಳಿದರು.
Virat Kohli speaking Kannada.
— Johns. (@CricCrazyJohns) March 19, 2024
- "THE NEW CHAPTER OF RCB" 👑pic.twitter.com/KQWk4Wdab8
ಹೊಸ ಅವತಾರದಲ್ಲಿ ಕೊಹ್ಲಿ
ಈ ಬಾರಿ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಹೊಸ ಅವತಾರದಲ್ಲಿ ಕಾಣಿಕೊಳ್ಳಲಿದ್ದಾರೆ. ಅವರ ಹೇರ್ ಸ್ಟೈಲ್ ಬದಲಾಗಿದ್ದು, ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಹೊಸ ಅವತಾರದ ಫೋಟೊ ಈಗಾಗಲೇ ಸಖತ್ ವೈರಲ್ ಆಗಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಸಂಪೂರ್ಣವಾಗಿ ಹೊರಗುಳಿದಿದ್ದ ಕೊಹ್ಲಿ, ಎರಡನೇ ಮಗುವಿನ ತಂದೆಯಾಗಿದ್ದಾರೆ. ಸೋಮವಾರ ತಂಡವನ್ನು ಸೇರಿಕೊಂಡ ಕೊಹ್ಲಿ ಈಗಾಗಲೇ ಅಭ್ಯಾಸ ಮಾಡುತ್ತಿದ್ದಾರೆ. ಈ ಬಾರಿ ಅವರು ಫಾಫ್ ಡು ಪ್ಲೆಸಿಸ್ ಜೊತೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ.
ಕಪ್ ಗೆದ್ದ ಮಹಿಳಾ ತಂಡಕ್ಕೆ ಗೌರವ
ಆರ್‌ಸಿಬಿ ಫ್ರಾಂಚೈಸಿಗೆ ಮೊದಲ ಬಾರಿಗೆ ಕಪ್ ಗೆದ್ದುಕೊಟ್ಟ ಮಹಿಳಾ ತಂಡಕ್ಕೆ ಪುರುಷರ ತಂಡ ಗಾರ್ಡ್ ಆಫ್ ಹಾನರ್ ಕೊಟ್ಟಿತು. ಇಡೀ ಮೈದಾನದ ತುಂಬಾ ಮಹಿಳಾ ತಂಡದ ಆಟಗಾರರು ಕಪ್ ಜೊತೆ ಸುತ್ತಾಡಿದ್ದಲ್ಲದೆ, ಅಭಿಮಾನಿಗಳಿಗೆ ಕಪ್ ತೋರಿಸಿ ಖುಷಿಪಟ್ಟರು.
ಕರ್ನಾಟಕ ತಂಡದ ಮಾಜಿ ನಾಯಕ, ಮಾಜಿ ಆರ್‌ಸಿಬಿ ಆಟಗಾರ ದಾವಣಗೆರೆ ಎಕ್ಸ್‌ಪ್ರೆಸ್ ವಿನಯ್ ಕುಮಾರ್ ಅವರಿಗೆ ಆರ್‌ಸಿಬಿ 'ಹಾಲ್ ಆಫ್ ಫೇಮ್' ಗೌರವ ನೀಡಿತು. ಕ್ರಿಸ್ ಗೇಲ್ ಮತ್ತು ಎಬಿ ಡಿ ವಿಲಿಯರ್ಸ್ ಬಳಿಕ ಈ ಗೌರವ ಪಡೆದ ಮೂರನೇ ಆರ್‌ಸಿಬಿ ಆಟಗಾರ ಎನಿಸಿಕೊಂಡರು.
ಮಾರ್ಚ್ 22ರಂದು ಐಪಿಎಲ್ 2024ರ ಪಂದ್ಯಾವಳಿ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಸಿಎಸ್‌ಕೆ ಮತ್ತು ಆರ್ ಸಿಬಿ ಮುಖಾಮುಖಿಯಾಗಲಿವೆ. ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.












Click it and Unblock the Notifications