Virat Kohli: ಕನ್ನಡಿಗ ಕೆ.ಎಲ್.ರಾಹುಲ್ 'ಕಾಂತಾರ ಸಂಭ್ರಮಾಚರಣೆ' ಶೈಲಿ ಅನುಕರಿಸಿದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ
ಐಪಿಎಲ್ 2025ರ ಸೀಸನ್ ವೇಳೆ ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ನಡೆದ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಗೆಲ್ಲಿಸಿ ಕನ್ನಡಿಗ ಕೆಎಲ್ ರಾಹುಲ್ ಅವರು ಕಾಂತಾರ ಶೈಲಿಯಲ್ಲಿ ಸಂಭ್ರಮಿಸಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಕೂಡ ಮಾಡಿತ್ತು. ಆದರೆ ಇದೀಗ ಇದನ್ನೇ ವಿರಾಟ್ ಹಾಗೂ ರೋಹಿತ್ ಶರ್ಮಾ ಅವರು ಮಾಡಿ ಗಮನ ಸೆಳೆದಿದ್ದಾರೆ.
ಭಾರತೀಯ ಕ್ರಿಕೆಟ್‌ನ ಇಬ್ಬರು ದಿಗ್ಗಜರಾಜ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೈದಾನಕ್ಕೆ ಇಳಿದರೆಂದರೆ ಹಬ್ಬದ ವಾತಾವರಣವೇ ಸೃಷ್ಟಿಯಾಗುತ್ತದೆ. ಈ ಜೋಡಿಯನ್ನು ಅಭಿಮಾನಿಗಳು ಪ್ರೀತಿಯಿಂದ 'ರೋ-ಕೊ' ಅಂತಲೇ ಕರೆಯುತ್ತಿದ್ದು, ಈಗ ಈ ಹೆಸರೇ ಒಂದು ಪ್ರಸಿದ್ಧ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. ಇದೀಗ ಶ್ರೀಲಂಕಾ ವಿರುದ್ಧದ ಮುಂಬರುವ ಏಕದಿನ ಸರಣಿಯ ಹಿನ್ನೆಲೆ ಬಿಡುಗಡೆಯಾಗಿರುವ 'ಜಿಯೋಸ್ಟಾರ್' ಹೊಸ ಜಾಹೀರಾತಿನಲ್ಲಿ ಇವರಿಬ್ಬರ ಆಪ್ತ ಸ್ನೇಹ ಮತ್ತು ಹಾಸ್ಯದ ಜುಗಲ್ಬಂದಿ ಧಮಾಕಾ ಎಬ್ಬಿಸಿದೆ.

ವಿರಾಟ್-ರೋಹಿತ್ ತಮಾಷೆ
ಅಭಿಮಾನಿಗಳು ತಮಗೆ ಇಟ್ಟಿರುವ 'ರೋ-ಕೊ' ಹೆಸರಿನ ಬಗ್ಗೆ ಕೊಹ್ಲಿ ಮತ್ತು ರೋಹಿತ್ ಇಬ್ಬರೂ ಹಿಂದೆ ತಮಾಷೆಯಾಗಿ ಮಾತನಾಡಿದ್ದರು. 'ಈ ಹೆಸರು ಕೇಳಲು ಮಜವಾಗಿದೆ, ಜನರು ಇದನ್ನು ಭಾರಿ ಎಂಜಾಯ್ ಮಾಡುತ್ತಿದ್ದಾರೆ,' ಎಂದು ವಿರಾಟ್ ಹೇಳಿದ್ದರೆ, 'ಜನರಿಗೆ ಮಸಾಲಾ ಸುದ್ದಿ ಬೇಕು. ನಾವಿಬ್ಬರೂ ಈ ವಿಶ್ಲೇಷಣೆಗಳನ್ನು ನೋಡಿ ಆನಂದಿಸುತ್ತೇವೆ,' ಎಂದು ರೋಹಿತ್ ಪ್ರತಿಕ್ರಿಯಿಸಿದ್ದರು. ಇದೇ ಪರಿಕಲ್ಪನೆಯನ್ನು ಇಟ್ಟುಕೊಂಡು ತಯಾರಿಸಲಾದ ನೂತನ ಜಾಹೀರಾತಿನಲ್ಲಿ ಇಬ್ಬರೂ ಪರಸ್ಪರ ಕಾಲೆಳೆದುಕೊಳ್ಳುತ್ತಾ ಅಭಿಮಾನಿಗಳನ್ನು ರಂಜಿಸಿದ್ದಾರೆ.
ತಮಾಷೆಯ ಸಂಭಾಷಣೆ ಭಾರಿ ವೈರಲ್
ಜಾಹೀರಾತಿನಲ್ಲಿ ರೋಹಿತ್, 'ಬ್ರೋ, ಎಷ್ಟು ವರ್ಷಗಳಾದವು,' ಎಂದು ಮಾತು ಆರಂಭಿಸಿದಾಗ, 'ಆದರೆ ಮಜಾ ಮಾತ್ರ ಈಗಲೂ ಹಾಗೆಯೇ ಇದೆ,' ಎಂದು ಕೊಹ್ಲಿ ಉತ್ತರಿಸುತ್ತಾರೆ. ಮುಂದುವರಿದು ಕೊಹ್ಲಿ, 'ನಮ್ಮ ಹುಡುಗರು ಕೂಡ ತುಂಬಾ ಉತ್ಸಾಹದಲ್ಲಿದ್ದಾರೆ,' ಎಂದಾಗ, ರೋಹಿತ್ ತಮ್ಮ ಹಳೆಯ ಮರೆವಿನ ಅಭ್ಯಾಸದಂತೆ ಸಹ ಆಟಗಾರರ ಹೆಸರು ನೆನಪಾಗದೆ,' ಎಂದು ಹೇಳುತ್ತಾರೆ. ರೋಹಿತ್ ಅವರಿಗೆ ತಕ್ಷಣಕ್ಕೆ ಹೆಸರುಗಳು ನೆನಪಾಗದೆ ಪ್ರತಿಯೊಂದಕ್ಕೂ 'ವೋ' ಎಂದು ಬಳಸುವ ಅಭ್ಯಾಸವನ್ನು ಕೊಹ್ಲಿ ಇಲ್ಲಿ ಹಾಸ್ಯಮಯವಾಗಿ ಬಿಂಬಿಸಿದ್ದಾರೆ.
ನಂತರ ಇಬ್ಬರೂ ಸೇರಿ ತಮ್ಮ ಸಹ-ಆಟಗಾರರ ವಿಶಿಷ್ಟ ಸಂಭ್ರಮಾಚರಣೆ ಶೈಲಿಯನ್ನು ಅಣಕಿಸಿದ್ದಾರೆ. ಕೆ.ಎಲ್.ರಾಹುಲ್ ಅವರ ಕಾಂತಾರ ಶೈಲಿ, ರವೀಂದ್ರ ಜಡೇಜಾರ ಖಡ್ಗ ಝಳಪಿಸುವ ಭಂಗಿ ಮತ್ತು ಶುಭಮನ್ ಗಿಲ್ ಅವರ ಹ್ಯಾಟ್ಸ್-ಆಫ್ ಶೈಲಿಯನ್ನು ತಮಾಷೆಯಾಗಿ ಅನುಕರಿಸುತ್ತಾ, 'ನಮ್ಮ ಹುಡುಗರೆಲ್ಲಾ ಸಿದ್ಧರಾಗಿದ್ದಾರೆ. ಈ ಬಾರಿ ಇಡೀ ದೇಶವೇ ನಮ್ಮ ಮೇಲೆ ನಿರೀಕ್ಷೆ ಇಟ್ಟುಕೊಂಡಿದೆ,' ಎಂದು ಹಾಸ್ಯದ ಚಟಾಕಿ ಹಾರಿಸಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ರೊ-ಕೊ ಮಿಂಚಿಂಗ್
2024ರ ಟಿ20 ವಿಶ್ವಕಪ್ ಗೆಲುವಿನ ಬಳಿಕ ಟಿ20 ಮಾದರಿ ಹಾಗೂ 2025ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಈ ದಿಗ್ಗಜ ಆಟಗಾರರು ಪ್ರಸ್ತುತ ಏಕದಿನ ಮಾದರಿಯಲ್ಲಿ ಮಾತ್ರ ಭಾರತ ತಂಡವನ್ನು ಪ್ರತಿನಿಧಿಸುತ್ತಿದೆ. ಇತ್ತೀಚೆಷ್ಟೇ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಅಜೇಯ 139 ರನ್ ಗಳಿಸಿ ತಮ್ಮ 55ನೇ ಏಕದಿನ ಶತಕದೊಂದಿಗೆ 15,000 ರನ್ ಪೂರೈಸಿದ್ದರು. ಮತ್ತೊಂದೆಡೆ ರೋಹಿತ್ ಶರ್ಮಾ 101 ಮತ್ತು 92 ರನ್‌ಗಳ ಸ್ಫೋಟಕ ಇನಿಂಗ್ಸ್ ಆಡಿ ತಂಡಕ್ಕೆ 2-1 ಅಂತರದ ಸರಣಿ ಗೆಲುವು ತಂದುಕೊಟ್ಟಿದ್ದರು.
ಶ್ರೀಲಂಕಾ ಸರಣಿಗೂ ಮುನ್ನ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲೂ ಈ ಜೋಡಿ ಮೈದಾನಕ್ಕಿಳಿಯಲಿದೆ. ಅಂಕಿಅಂಶಗಳ ಪ್ರಕಾರ, 39 ವರ್ಷದ ರೋಹಿತ್ ಶರ್ಮಾ 291 ಏಕದಿನ ಪಂದ್ಯಗಳಿಂದ 12,120 ರನ್ ಗಳಿಸಿದ್ದರೆ, 37 ವರ್ಷದ ವಿರಾಟ್ ಕೊಹ್ಲಿ 317 ಪಂದ್ಯಗಳಿಂದ 15,109 ರನ್ ಪೇರಿಸಿದ್ದಾರೆ. ಭಾರತೀಯ ಕ್ರಿಕೆಟ್ ಅಭಿಮಾನಿಗಳ ಏಕೈಕ ಆಸೆಯೆಂದರೆ ಪ್ರಸ್ತುತ ಅದ್ಭುತ ಫಾರ್ಮ್‌ನಲ್ಲಿರುವ ಈ ಜೋಡಿ 2027ರ ಏಕದಿನ ವಿಶ್ವಕಪ್‌ನಲ್ಲೂ ಒಟ್ಟಾಗಿ ಆಡಿ ಭಾರತಕ್ಕೆ ಟ್ರೋಫಿ ತಂದುಕೊಡಲಿ ಎಂಬುದಾಗಿದೆ.
ಒಟ್ಟಿನಲ್ಲಿ ಹೇಳುವುದಾದರೆ ಈ ವಿಡಿಯೋದಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ಕೆಲ್ ರಾಹುಲ್ ಅವರ ಕಾಂತಾರ ಶೈಲಿ ಸಂಭ್ರಮಾಚರಣೆಯನ್ನು ಅನುಕರಿಸಿ ಗಮನ ಸೆಳೆದಿದ್ದಾರೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ಪರ ಕೆಎಲ್ ರಾಹುಲ್ ಅವರು ಅಜೇಯ 93 ರನ್ ಗಳಿಸಿ ಸಿಕ್ಸರ್ ಬಾರಿಸುವ ಮೂಲಕ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. ಗೆದ್ದ ತಕ್ಷಣವೇ ಅವರು ಮೈದಾನದ ಪಿಚ್ ಮೇಲೆ ತಮ್ಮ ಬ್ಯಾಟ್‌ನಿಂದ ವೃತ್ತ ಬರೆದು, ಮಧ್ಯದಲ್ಲಿ ಬ್ಯಾಟ್ ಅನ್ನು ಕುಟ್ಟಿ, 'ಇದು ನನ್ನದೇ ಜಾಗ' 'ನನ್ನದೆ ಆರ್ಭಟ' ಎಂಬ ಅರ್ಥದಲ್ಲಿ ಸಂಭ್ರಮಿಸಿದರು. ಈ ಸಂಭ್ರಮಾಚರಣೆಯು ಕಾಂತಾರ ಶೈಲಿಯನ್ನು ಹೋಲುವಂತಿದೆ.


Click it and Unblock the Notifications
