Virat Kohli: ಟಿ20 ವಿಶ್ವಕಪ್‌ನಲ್ಲಿ ಎಂಎಸ್ ಧೋನಿ ದಾಖಲೆ ಮುರಿಯಲು ಸಜ್ಜಾದ 'ಕಿಂಗ್ ಕೊಹ್ಲಿ'
ಟಿ20 ವಿಶ್ವಕಪ್ 2024ರ ಪಂದ್ಯಾವಳಿ ಭಾನುವಾರದಿಂದ ಆರಂಭವಾಗಿದೆ. ಯುಎಸ್‌ಎ ಮತ್ತು ವೆಸ್ಟ್ ಇಂಡೀಸ್ ಈ ಬಾರಿ ವಿಶ್ವಕಪ್‌ಗೆ ಆತಿಥ್ಯ ವಹಿಸಿವೆ. ಟೀಂ ಇಂಡಿಯಾ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಪಂದ್ಯಾವಳಿಗೆ ಸಜ್ಜಾಗಿದೆ.
ಶನಿವಾರ ನಡೆದ ಬಾಂಗ್ಲಾದೇಶದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಣಕ್ಕಿಳಿಯಲಿಲ್ಲ. ಆದರೆ, ಅವರು ಜೂನ್ 5ರಂದು ನಡೆಯಲಿರುವ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಡಲಿದ್ದಾರೆ.

ಐಪಿಎಲ್ 2024ರ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿ ಆರೆಂಜ್ ಕ್ಯಾಪ್ ಗೆದ್ದಿರುವ ವಿರಾಟ್ ಕೊಹ್ಲಿ ಈಗ ಟಿ20 ವಿಶ್ವಕಪ್‌ನಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಅಲ್ಲದೆ ಈ ಬಾರಿ ವಿಶ್ವಕಪ್‌ನಲ್ಲಿ ಕೂಡ ಹಲವು ದಾಖಲೆಗಳನ್ನು ಮುರಿಯಲಿದ್ದಾರೆ.
ಧೋನಿ ದಾಖಲೆ ಮುರಿಯಲಿದ್ದಾರೆ ಕೊಹ್ಲಿ
ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಎರಡು ಬಾರಿ ಪಂದ್ಯಾವಳಿ ಶ್ರೇಷ್ಠ ಆಟಗಾರ ಪ್ರಶಸ್ತಿ ಗೆದ್ದಿದ್ದಾರೆ. 81.50 ರ ಅದ್ಭುತ ಸರಾಸರಿಯಲ್ಲಿ 1,141 ರನ್ ಗಳಿಸಿದ್ದಾರೆ.
ಕೊಹ್ಲಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಮತ್ತೊಂದು ಗಮನಾರ್ಹ ಸಾಧನೆಯ ತುದಿಯಲ್ಲಿ ನಿಂತಿದ್ದಾರೆ. ಟೂರ್ನಮೆಂಟ್‌ನ ಡೆತ್ ಓವರ್‌ಗಳಲ್ಲಿ (16-20 ಓವರ್‌ಗಳು) ಅತಿ ಹೆಚ್ಚು ರನ್ ಗಳಿಸಿದ ದಿಗ್ಗಜ ಫಿನಿಶರ್ ಎಂಎಸ್ ಧೋನಿ ಅವರನ್ನು ಹಿಂದಿಕ್ಕುವ ಅವಕಾಶವನ್ನು ಕೊಹ್ಲಿ ಹೊಂದಿದ್ದಾರೆ.
ಅವರ ಟಿ20 ವಿಶ್ವಕಪ್ ವೃತ್ತಿಜೀವನದಾದ್ಯಂತ, ಶಾಂತತೆಗೆ ಹೆಸರುವಾಸಿಯಾದ ಧೋನಿ, 33-ಪಂದ್ಯಗಳ ಅವಧಿಯಲ್ಲಿ ಡೆತ್ ಓವರ್‌ಗಳಲ್ಲಿ 311 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ 25 ಇನ್ನಿಂಗ್ಸ್‌ಗಳಲ್ಲಿ ಡೆತ್ ಓವರ್‌ಗಳಲ್ಲಿ ಆಕರ್ಷಕ 302 ರನ್ ಗಳಿಸಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಡೆತ್-ಓವರ್‌ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಧೋನಿ ದಾಖಲೆಯನ್ನು ಸರಿಗಟ್ಟಲು ವಿರಾಟ್ ಕೊಹ್ಲಿ ಇನ್ನು 10 ರನ್ ಮಾತ್ರ ಗಳಿಸಬೇಕಿದೆ.
ಕೊಹ್ಲಿ ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಜೊತೆ ಆರಂಭಿಕರಾಗಿ ಕಣಕ್ಕಿಳಿಯುತ್ತಾರಾ ಅಥವಾ ಮೂರನೇ ಕ್ರಮಾಂಕದಲ್ಲಿ ಆಡುತ್ತಾರಾ ಎನ್ನುವುದು ಇನ್ನೂ ಸ್ಪಷ್ಟವಿಲ್ಲ. ಜೂನ್ 5ರಂದು ನಡೆಯುವ ಮೊದಲ ಪಂದ್ಯದಲ್ಲಿ ಈ ಪ್ರಶ್ನೆಗೆ ಉತ್ತರ ಸಿಗಲಿದೆ.












Click it and Unblock the Notifications