Virat Kohli-Gautam Gambhir: ಜಗಳಕ್ಕೆ ಫುಲ್‌ಸ್ಟಾಪ್; ಕೊಹ್ಲಿ-ಗಂಭೀರ್ ಈಗ ಬೆಸ್ಟ್ ಫ್ರೆಂಡ್ಸ್!
ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಇಬ್ಬರೂ ಭಾರತ ಕ್ರಿಕೆಟ್ ಜಗತ್ತಿನ ಪ್ರಸಿದ್ಧ ಕ್ರಿಕೆಟಿಗರು. ವಿರಾಟ್ ಕೊಹ್ಲಿ ಸದ್ಯ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಬ್ಯಾಟರ್, ಗೌತಮ್ ಗಂಭೀರ್ ಈಗ ಭಾರತ ತಂಡದ ಮುಖ್ಯ ಕೋಚ್. ಇಬ್ಬರ ನಡುವೆ ಈ ಮೊದಲು ಸಾಕಷ್ಟು ಕಿತ್ತಾಟ ನಡೆದಿತ್ತು, ಮೈದಾನದಲ್ಲಿ ಮತ್ತು ಹೊರಗಡೆ ಇಬ್ಬರ ನಡುವೆ ವಾಗ್ವಾದ ನಡೆಯುತ್ತಲೇ ಇತ್ತು. ಆದರೆ ಇಬ್ಬರೂ ಈಗ ಜಗಳವನ್ನು ಮರೆತು, ಉತ್ತಮ ಸ್ನೇಹಿತರಾಗಿದ್ದಾರೆ.
2023ರ ಐಪಿಎಲ್ ವೇಳೆ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಆರ್ ಸಿಬಿ ಪಂದ್ಯದ ವೇಳೆ ಕೊಹ್ಲಿ ಮತ್ತು ಗಂಭೀರ್ ಮೈದಾನದಲ್ಲಿ ಜಗಳ ಆಡಿದ್ದರು. 2024ರಲ್ಲಿ ಗಂಭೀರ್ ಕೆಕೆಆರ್ ತಂಡದ ಮೆಂಟರ್ ಆಗಿದ್ದಾಗ, ಆರ್ ಸಿಬಿ ವಿರುದ್ಧದ ಪಂದ್ಯದ ವೇಳೆ ಇಬ್ಬರೂ ತಬ್ಬಿಕೊಳ್ಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದರು.

ಬಳಿಕ ಗಂಭೀರ್ ಭಾರತ ತಂಡದ ಮುಖ್ಯ ಕೋಚ್ ಆಗಿದ್ದಾರೆ. ನಾಳೆ (ಸೆಪ್ಟೆಂಬರ್ 19) ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯ ಆರಂಭವಾಗಲಿದ್ದು, ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಸಂದರ್ಶನದಲ್ಲಿ ತೊಡಗಿಸಿಕೊಂಡಿದ್ದು, ಎಲ್ಲಾ ವಿವಾದಗಳಿಗೆ ತೆರೆ ಎಳೆದಿದ್ದಾರೆ.
ವಿಡಿಯೋ ಹಂಚಿಕೊಂಡ ಬಿಸಿಸಿಐ
ಕೊಹ್ಲಿ ಮತ್ತು ಗಂಭೀರ್ ನಡುವಿನ ಸಂವಾದದ ಟೀಸರ್ ಸನ್ನು ಬಿಸಿಸಿಐ ಹಂಚಿಕೊಂಡಿದೆ. "ನಾವು ತುಂಬಾ ದೂರ ಬಂದಿದ್ದೇವೆ, ಎಲ್ಲಾ ಮಸಾಲಾ ಸುದ್ದಿಗಳಿಗೆ ಅಂತ್ಯ ಹಾಡಿದ್ದೇವೆ" ಎಂದು ವಿರಾಟ್ ಕೊಹ್ಲಿ ಹೇಳಿದರೆ, ಇದು ಸಂಭಾಷಣೆಗೆ ಉತ್ತಮ ಆರಂಭ ಎಂದು ಗಂಭೀರ್ ಪ್ರತಿಕ್ರಿಯೆ ನೀಡಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನೀವು ಉತ್ತಮ ಸರಣಿ ಹೊಂದಿದ್ದೀರಾ, ನೀವು ಅಲ್ಲಿ ದೊಡ್ಡ ಸ್ಕೋರ್ ಗಳಿಸಿದ್ದೀರಿ, ಅದು ನಿಮ್ಮ ಜನಪ್ರಿಯತೆಯನ್ನು ಹೆಚ್ಚಿಸಿತು. ನಾನು ನೇಪಿಯರ್‌ನಲ್ಲಿ ಆಡಿದಾಗಲೂ ಅದೇ ಆಗಿತ್ತು ಎಂದು ಗಂಭೀರ್ ಹೇಳಿದ್ದಾರೆ.
"ನೀವು ಬ್ಯಾಟಿಂಗ್ ಮಾಡುತ್ತಿರುವಾಗ ಎದುರಾಳಿಗಳ ಜೊತೆ ಚಾಟ್ ಮಾಡುವಾಗ, ಕೆಲವೊಮ್ಮೆ ಗೆರೆಯನ್ನು ದಾಟಿ ಹೊರಗೆ ಹೋಗುವುದನ್ನು ನೀವು ಮುಂದುವರಿಸಬಹುದು ಮತ್ತು ಕೆಲವೊಮ್ಮೆ ಔಟ್ ಆಗಬಹುದು ಅಥವಾ ಅದು ನಿಮ್ಮನ್ನು ಹೆಚ್ಚು ಪ್ರೇರಿತ ಜಾಗದಲ್ಲಿ ಇರಿಸಬಹುದು ಎಂದು ನೀವು ಎಂದಾದರೂ ಭಾವಿಸಿದ್ದೀರಾ? " ಎಂದು ಕೊಹ್ಲಿ ತಮ್ಮ ಕೋಚ್‌ಗೆ ಕೇಳಿದ್ದಾರೆ.
ಇದಕ್ಕೆ ಉತ್ತರ ನೀಡಿದ ಗಂಭೀರ್, "ನನಗಿಂತ ನೀವು ಹೆಚ್ಚು ವಾಗ್ವಾದಗಳನ್ನು ಮಾಡಿದ್ದೀರಿ, ಆ ಪ್ರಶ್ನೆಗೆ ನೀವು ನನಗಿಂತ ಉತ್ತಮವಾಗಿ ಉತ್ತರಿಸಬಹುದು" ಎಂದು ಗಂಭೀರ್ ನಗುತ್ತಾ ಹೇಳುತ್ತಾರೆ.
ಇಬ್ಬರು ನಗು ನಗುತ್ತಾ ತಮಾಷೆಯಾಗಿ ಹಲವು ವಿಚಾರಗಳನ್ನು ಮಾತನಾಡಿದ್ದಾರೆ. ಇಬ್ಬರು ಇದೀಗ ತಮ್ಮ ನಡುವಿನ ವೈಮನಸ್ಸು ಮರೆತು, ಉತ್ತಮ ಗೆಳೆಯರಾಗಿದ್ದಾರೆ. ಇಬ್ಬರು ಆಟಗಾರರ ಅಭಿಮಾನಿಗಳಿಗೆ ಇದು ಖುಷಿ ವಿಚಾರವಾಗಿದೆ.












Click it and Unblock the Notifications