Team India: ರೋಹಿತ್, ಪಾಂಡ್ಯ ಅಲ್ಲ ನಾವು ಟಿ20 ವಿಶ್ವಕಪ್ ಗೆಲ್ಲಲು ಈತ ಕಾರಣ ಎಂದ ವಿರಾಟ್ ಕೊಹ್ಲಿ
ಟಿ20 ವಿಶ್ವಕಪ್ ಗೆದ್ದು ಭಾರತಕ್ಕೆ ಬಂದಿರುವ ರೋಹಿತ್ ಶರ್ಮಾ ಪಡೆಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ಮರೀನ್ ಡ್ರೈವ್‌ನಲ್ಲಿ ಜನಸಾಗರದ ನಡುವೆ ತೆರೆದ ವಾಹನದಲ್ಲಿ ವಾಂಖೆಡೆ ಕ್ರೀಡಾಂಗಣಕ್ಕೆ ಬಂದ ಭಾರತ ತಂಡದ ಆಟಗಾರರು, ಕುಣಿದು ಕುಪ್ಪಳಿಸಿ ನೆರೆದಿದ್ದ ಜನರಿಗೆ ಧನ್ಯವಾದ ಅರ್ಪಿಸಿದರು.
ವಾಂಖೆಡೆ ಕ್ರೀಡಾಂಗಣದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು. ಜಸ್ಪ್ರೀತ್ ಬುಮ್ರಾ ಅವರ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿದ ವಿರಾಟ್ ಕೊಹ್ಲಿ, ಮನಸಾರೆ ಹೊಗಳಿದರು.

"ನನಗೆ ಖಚಿತವಾಗಿದೆ, ಈ ಕ್ರೀಡಾಂಗಣದಲ್ಲಿರುವ ಪ್ರತಿಯೊಬ್ಬರಿಗೂ ಹಾಗೇ ಅನ್ನಿಸಿದೆ. ನಮ್ಮನ್ನು ಪಂದ್ಯಾವಳಿಯಲ್ಲಿ ಉಳಿಸಿದ್ದು, ನಾವು ಚಾಂಪಿಯನ್ ಆಗುವಂತೆ ಮಾಡಿದ್ದು ಜಸ್ಪ್ರೀತ್ ಬುಮ್ರಾ, ಅವರಿಗಾಗಿ ದೊಡ್ಡ ಮಟ್ಟದ ಚಪ್ಪಾಳೆ ಬರಲಿ" ಎಂದು ಕೇಳಿದರು.
ಬುಮ್ರಾ ಭಾರತ ತಂಡದಲ್ಲಿ ಆಡುತ್ತಿರುವುದು ನಮ್ಮ ಅದೃಷ್ಟ, ಅನೇಕ ಪಂದ್ಯಗಳಲ್ಲಿ ನಮ್ಮನ್ನು ಗೆಲುವಿನ ಕಡೆಗೆ ಕರೆತಂದಿದ್ದು ಆತ ಎಂದು ವಿರಾಟ್ ಕೊಹ್ಲಿ ಹೇಳಿದರು.
ಬ್ರಾಡ್‌ಕಾಸ್ಟರ್ ಗೌರವ್ ಕಪೂರ್ ಅವರು ಜಸ್ಪ್ರೀತ್ ಬುಮ್ರಾ ಅವರನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಲು ಮನವಿಯನ್ನು ತಮಾಷೆಯಾಗಿ ಸೂಚಿಸಿದರು. ವಿರಾಟ್ ಕೊಹ್ಲಿ, "ಈಗಲೇ ಅದಕ್ಕೆ ಸಹಿ ಹಾಕುತ್ತೇನೆ" ಎಂದು ಬುಮ್ರಾ ಮೇಲರಿವ ಗೌರವವನ್ನು ತೋರಿಸಿದರು.
ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ ಹಾಗೂ ಬುಮ್ರಾ ಮಿಂಚಿದ್ದರು. ಕೊಹ್ಲಿ ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗಳಿಸಿದರೆ, ಪಂದ್ಯಾವಳಿಯುದ್ದಕ್ಕೂ ಬುಮ್ರಾ ಅವರ ಸ್ಥಿರವಾದ ಪ್ರತಿಭೆಯು ಪಂದ್ಯಾವಳಿಯ ಆಟಗಾರರಾಗಿ ಪ್ರಶಸ್ತಿ ಪಡೆದರು.
Great gesture by Kohli. Bumrah deserves all the praises...!!!pic.twitter.com/fSuXC9gjQI
— Mr Sinha (@MrSinha_) July 4, 2024
ಬುಮ್ರಾಗೆ ವಿಶೇಷ ಧನ್ಯವಾದ
ಟಿ20 ಕ್ರಿಕೆಟ್ ಎಂದರೆ ಬರಿ ಹೊಡಿ ಬಡಿ ಆಟ, ಅದು ಬ್ಯಾಟರ್ ಗಳ ಆಟ ಎನ್ನುವಂತೆಯೇ ಬಿಂಬಿಸಲಾಗುತ್ತದೆ. ಬುಮ್ರಾ ಎಂತಹ ಅದ್ಭುತ ಬೌಲರ್ ಆದರೂ ಅವರಿಗೆ ಬ್ಯಾಟರ್ ನಂತೆ ಸ್ಟಾರ್ ಆಟಗಾರನ ಪಟ್ಟ ಸಿಕ್ಕಿಲ್ಲ ಎನ್ನುವ ದೂರು ನಿಜವಾದ ಕ್ರಿಕೆಟ್ ಪ್ರೇಮಿಗಳದ್ದಾಗಿದೆ. ಆದರೆ ಇಂದು ವಿರಾಟ್ ಕೊಹ್ಲಿ, ಬುಮ್ರಾ ಅವರೇ ಪಂದ್ಯಾವಳಿ ಗೆಲ್ಲಲು ಕಾರಣ ಎಂದು ಹೇಳಿದ್ದು ನಿಜಕ್ಕೂ ವಿಶೇಷವಾಗಿದೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಟಿ20 ವಿಶ್ವಕಪ್ ಗೆದ್ದ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.
ವಿಶ್ವಕಪ್ ಗೆದ್ದು ಬಂದ ಭಾರತ ತಂಡಕ್ಕೆ ಅಭೂತಪೂರ್ವ ಸ್ವಾಗತ ಸಿಕ್ಕಿದೆ. ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಭಾರತ ತಂಡ, ಬಳಿಕ ಅಲ್ಲಿಂದ ಮುಂಬೈಗೆ ಬಂದಿಳಿಯಿತು. ವಿಮಾನ ನಿಲ್ದಾಣದಲ್ಲಿ ಕೂಡ ವಾಟರ್ ಸಲ್ಯೂಟ್ ಮೂಲಕ ಭಾರತ ತಂಡಕ್ಕೆ ವಿಶೇಷ ಗೌರವ ಸಲ್ಲಿಸಲಾಯಿತು.












Click it and Unblock the Notifications