Ind vs Eng: ವಿರಾಟ್ ಕೊಹ್ಲಿ ವಾಪಸ್; ತಂಡಕ್ಕೆ ಬಂದ ಮಾರಕ ಬೌಲರ್!
ಭಾರತದ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದಿರುವ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ನಿರೀಕ್ಷೆಯಂತೆ ಭಾರತ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಇಂಗ್ಲೆಂಡ್ ತಂಡದಲ್ಲಿ ಮೂರು ಬದಲಾವಣೆ ಮಾಡಿದ್ದು ಎರಡೂ ತಂಡಗಳು ಗೆಲ್ಲಲೇಬೇಕೆನ್ನುವ ರಣತಂತ್ರ ರೂಪಿಸಿವೆ.
ಟಾಸ್ ಗೆದ್ದ ಬಳಿಕ ಮಾತನಾಡಿದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್, ನಾವು ಇಂದು ಮೊದಲು ಬ್ಯಾಟಿಂಗ್ ಮಾಡುತ್ತೇವೆ, ಪಿಚ್ ಬ್ಯಾಟಿಂಗ್‌ಗೆ ಅನುಕೂಲವಾಗುವಂತೆ ಕಾಣುತ್ತಿದೆ. ಇಂದು ನಾವು ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ. ತಂಡದಲ್ಲಿ ಮೂರು ಬದಲಾವಣೆ ಮಾಡಿದ್ದೇವೆ, ಮಾರ್ಕ್ ವುಡ್, ಜೇಮೀ ಓವರ್ಟನ್ ಮತ್ತು ಗಸ್ ಅಟ್ಕಿನ್‌ಸನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ ಎಂದರು.

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮಾತನಾಡಿ, ಮೊದಲನೇ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಕಪ್ಪು ಮಣ್ಣಿನ ಪಿಚ್ ಆಗಿದ್ದು ಒಂದು ಕಡೆ ನಿಧಾನಗತಿಯಲ್ಲಿ ಚೆಂಡು ಬರಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ತಂಡದಲ್ಲಿ ಎರಡು ಬದಲಾವಣೆ ಮಾಡಿದ್ದು ಯಶಸ್ವಿ ಜೈಸ್ವಾಲ್ ವಿರಾಟ್ ಕೊಹ್ಲಿಗೆ ಜಾಗ ಬಿಟ್ಟುಕೊಟ್ಟಿದ್ದಾರೆ. ಕುಲದೀಪ್ ಯಾದವ್‌ಗೆ ವಿಶ್ರಾಂತಿ ನೀಡಲಾಗಿದ್ದು ವರುಣ್ ಚಕ್ರವರ್ತಿ ಆಡಲಿದ್ದಾರೆ ಎಂದು ಹೇಳಿದರು.
ಕೊಹ್ಲಿ ನೋಡಲು ಅಭಿಮಾನಿಗಳ ಕಾತರ
ಮೊದಲ ಪಂದ್ಯದಲ್ಲೇ ವಿರಾಟ್ ಕೊಹ್ಲಿ ಕಣಕ್ಕಿಳಿಯುತ್ತಾರೆ ಎಂದೇ ಸಾವಿರಾರು ಅಭಿಮಾನಿಗಳು ಮೈದಾನಕ್ಕೆ ಬಂದಿದ್ದರು. ಆದರೆ ಮೊಣಕಾಲು ಊದಿಕೊಂಡಿದ್ದರಿಂದ ಕೊನೆ ಕ್ಷಣದಲ್ಲಿ ಅವರು ಪಂದ್ಯದಿಂದ ಹೊರಗುಳಿದರು.
ಈಗ ಕಟಕ್‌ನಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಕಣಕ್ಕಿಳಿಯುತ್ತಿದ್ದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಕೊಹ್ಲಿ ಫಾರ್ಮ್‌ಗೆ ಮರಳಿದರೆ ಭಾರತ ತಂಡದ ಬ್ಯಾಟಿಂಗ್ ಮತ್ತಷ್ಟು ಬಲಗೊಳ್ಳಲಿದ್ದು, ಕೊಹ್ಲಿ ಕೂಡ ತಮ್ಮ ವಿರುದ್ಧದ ಟೀಕೆಗಳಿಗೆ ಬ್ಯಾಟಿಂಗ್ ಮೂಲಕವೇ ಉತ್ತರ ಕೊಡಲು ಸಜ್ಜಾಗಿದ್ದಾರೆ.
ಟಿ20 ಸರಣಿಯಲ್ಲಿ ಇನ್ನಿಲ್ಲದಂತೆ ಕಾಡಿದ್ದ ಬೌಲರ್ ವರುಣ್ ಚಕ್ರವರ್ತಿ ಇದೀಗ ಏಕದಿನ ಪಂದ್ಯದಲ್ಲೂ ಇಂಗ್ಲೆಂಡ್ ಬ್ಯಾಟರ್ ಗಳನ್ನು ಕಾಡಲು ಸಜ್ಜಾಗಿದ್ದಾರೆ. ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದ ಎರಡನೇ ಹಿರಿಯ ಆಟಗಾರ ಎನಿಸಿಕೊಂಡರು. 36 ವರ್ಷದ ಫಾರೂಕ್ ಎಂಜಿನಿಯರ್ 1974 ರಲ್ಲಿ ಇಂಗ್ಲೆಂಡ್ ವಿರುದ್ಧ ಪದಾರ್ಪಣೆ ಮಾಡಿದ್ದು ಭಾರತದ ಪರ ಅತಿ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಈಗ ವರುಣ್ ಚಕ್ರವರ್ತಿ 33 ವರ್ಷ 164 ದಿನ ವಯಸ್ಸಿನಲ್ಲಿ ಪದಾರ್ಪಣಾ ಪಂದ್ಯ ಆಡಲು ಸಜ್ಜಾಗಿದ್ದಾರೆ.
ಉಭಯ ತಂಡಗಳ ಆಡುವ ಬಳಗ
ಭಾರತ: ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜ, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ
ಇಂಗ್ಲೆಂಡ್: ಫಿಲಿಪ್ ಸಾಲ್ಟ್(ವಿಕೆಟ್ ಕೀಪರ್), ಬೆನ್ ಡಕೆಟ್, ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜೇಮೀ ಓವರ್ಟನ್, ಗಸ್ ಅಟ್ಕಿನ್ಸನ್, ಆದಿಲ್ ರಶೀದ್, ಮಾರ್ಕ್ ವುಡ್, ಸಾಕಿಬ್ ಮಹಮೂದ್.












Click it and Unblock the Notifications