RCB vs CSK: ಸಿಎಸ್‌ಕೆ ವಿರುದ್ಧದ ಪಂದ್ಯಕ್ಕಾಗಿ ಚೆನ್ನೈ ತಲುಪಿದ ಆರ್‌ಸಿಬಿ; ಪಂದ್ಯ ಯಾವಾಗ?
ಐಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಮೊದಲ ಪಂದ್ಯದಲ್ಲೇ ಭರ್ಜರಿ ಗೆಲುವಿನ ಬಳಿಕ ಎರಡನೇ ಪಂದ್ಯ ಆಡಲು ಚೆನ್ನೈಗೆ ಆಗಮಿಸಿದೆ. ಆರ್ ಸಿಬಿ ಮುಂದಿನ ಪಂದ್ಯದಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿ ಎನಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಸೋಮವಾರ ನಾಯಕ ರಜತ್ ಪಟಿದಾರ್, ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಆಟಗಾರರು ಚೆನ್ನೈಗೆ ಆಗಮಿಸಿದರು. ಮಂಗಳವಾರದಿಂದಲೇ ತಂಡದ ಆಟಗಾರರು ಅಭ್ಯಾಸ ಆರಂಭಿಸಲಿದ್ದು ಎರಡನೇ ಪಂದ್ಯಕ್ಕೆ ಸಜ್ಜಾಗಲಿದ್ದಾರೆ. ಮಾರ್ಚ್ 28 ರ ಶುಕ್ರವಾರ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.

ರೋಚಕ ಹಣಾಹಣಿ ನಿರೀಕ್ಷೆ
ಭಾನುವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ತಂಡದ ಸ್ಪಿನ್ ಬೌಲಿಂಗ್ ಬಲಿಷ್ಠವಾಗಿದ್ದು ಮುಂಬೈ ಇಂಡಿಯನ್ಸ್ ತಂಡವನ್ನು 155 ರನ್‌ಗಳಿಗೆ ಕಟ್ಟಿಹಾಕಿತು. ನೂರ್ ಅಹ್ಮದ್, ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನಿ ಚೆನ್ನೈನ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ.
ಎರಡೂ ತಂಡಗಳು ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು ಎರಡನೇ ಪಂದ್ಯಕ್ಕೆ ವಿಶ್ವಾಸದಿಂದಲೇ ಸಜ್ಜಾಗಲಿವೆ. ಆರ್ ಸಿಬಿ ತಂಡದಲ್ಲಿ ಕೂಡ ಉತ್ತಮ ಬೌಲಿಂಗ್ ಪಡೆ ಇದ್ದು, ಎರಡನೇ ಪಂದ್ಯದಲ್ಲಿ ಚೆನ್ನೈ ತಂಡವನ್ನು ತವರಿನಲ್ಲಿ ಸೋಲಿಸುವ ವಿಶ್ವಾಸದಲ್ಲಿದೆ. ಎರಡೂ ತಂಡಗಳು ಐಪಿಎಲ್‌ನಲ್ಲಿ ಈವರೆಗೆ 33 ಬಾರಿ ಮುಖಾಮುಖಿಯಾಗಿದ್ದು ಸಿಎಸ್‌ಕೆ 21 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಆರ್ ಸಿಬಿ 11 ಬಾರಿ ಗೆಲುವು ಸಾಧಿಸಿದೆ.
2008ರಲ್ಲಿ ಆರ್ ಸಿಬಿ ಚೆನ್ನೈನಲ್ಲಿ ಸಿಎಸ್‌ಕೆ ತಂಡವನ್ನು ಸೋಲಿಸಿತ್ತು, ಅಲ್ಲಿಂದ ಈವರೆಗೂ ಒಮ್ಮೆಯೂ ಚೆನ್ನೈನಲ್ಲಿ ಆರ್ ಸಿಬಿ ಸಿಎಸ್‌ಕೆ ವಿರುದ್ಧ ಗೆದ್ದಿಲ್ಲ, ಅದಾದ ಬಳಿಕ 8 ಪಂದ್ಯಗಳಲ್ಲಿ ಆರ್ ಸಿಬಿ ಸತತವಾಗಿ ಸೋಲು ಕಂಡಿದ್ದು, ಈ ಬಾರಿಯಾದರೂ ಗೆಲುವು ಸಾಧಿಸುತ್ತಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ಆರ್ ಸಿಬಿ ಈ ಬಾರಿ ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್‌ನಲ್ಲೂ ಬಲಿಷ್ಠವಾಗಿ ಕಾಣಿಸುತ್ತಿದೆ. ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಕಣಕ್ಕಿಳಿಯುವ ಸಾಧ್ಯತೆ ಇದ್ದು, ಬೌಲಿಂಗ್ ವಿಭಾಗ ಮತ್ತಷ್ಟು ಬಲಿಷ್ಠವಾಗಲಿದೆ. ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ನಾಯಕ ರಜತ್ ಪಟಿದಾರ್ ಉತ್ತಮ ಫಾರ್ಮ್‌ನಲ್ಲಿದ್ದು ತವರಿನಲ್ಲೇ ಚೆನ್ನೈಗೆ ಸೋಲುಣಿಸುವ ವಿಶ್ವಾಸದಲ್ಲಿದೆ.
2024ರ ಐಪಿಎಲ್‌ನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಆರ್ ಸಿಬಿ ಸಿಎಸ್‌ಕೆ ವಿರುದ್ಧ 27 ರನ್‌ಗಳ ರೋಚಕ ಗೆಲುವು ಸಾಧಿಸುವ ಮೂಲಕ ಸಿಎಸ್‌ಕೆ ತಂಡದ ಪ್ಲೇಆಫ್ ಕನಸು ನುಚ್ಚುನೂರು ಮಾಡಿತ್ತು. ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ಸಿಎಸ್‌ಕೆ ಸಜ್ಜಾಗುತ್ತಿದೆ.












Click it and Unblock the Notifications