ಮಣಿಪುರದಲ್ಲಿ 120 ಅಡಿ ಎತ್ತರದ ಪೋಲೋ ಪ್ರತಿಮೆ ಲೋಕಾರ್ಪಣೆಗೊಳಿಸಿದ ಅಮಿತ್ ಶಾ
ನವದೆಹಲಿ, ಜನವರಿ 06 : ಆಧುನಿಕ ಪೋಲೋ ಕ್ರೀಡೆಯ ಜನ್ಮ ಸ್ಥಳವಾದ ಮಣಿಪುರದಲ್ಲಿ ನೂತನವಾಗಿ ನಿರ್ಮಿಸಿರುವ 120 ಅಡಿ ಎತ್ತರದ ಮಾರ್ಜಿಂಗ್ ಪೋಲೋ ಪ್ರತಿಮೆಯನ್ನು ಶುಕ್ರವಾರದಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಾರ್ಪಣೆಗೊಳಿಸಿದರು.
ಮಣಿಪುರದ ಪೂರ್ವ ಇಂಫಾಲ್‌ನಲ್ಲಿರುವ ಮಾರ್ಜಿಂಗ್ ಕಾಂಪ್ಲೆಕ್ಸ್‌ನ ಆವರಣದಲ್ಲಿ ಸಾಗೋಲ್ ಕಾಂಗ್ಜೆಯಿ ಎಂದೂ ಕರೆಯಲ್ಪಡುವ ಪೋಲೋ ಕ್ರೀಡೆಯ ಧಾರ್ಮಿಕ ಮತ್ತು ಪೌರಾಣಿಕ ಮಹತ್ವವನ್ನು ಸಾರುವ ಹಿನ್ನೆಲೆಯಲ್ಲಿ ಈ ಪ್ರತಿಮೆಯನ್ನು ನಿರ್ಮಿಸಲಾಗಿತ್ತು. ಮಣಿಪುರದ ಪ್ರವಾಸ ಕೈಗೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಪೋಲೋ ಪ್ರತಿಮೆ ಅನಾವರಣಗೊಳಿಸುವುದರ ಜೊತೆಗೆ ರಾಜ್ಯದಲ್ಲಿ ಹಲವಾರು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಯುವಕರಿಗೆ ಪ್ರೇರಣೆಯಾಗಲಿ ಪ್ರತಿಮೆ !
ಪ್ರತಿಮೆ ಲೋಕಾರ್ಪಣೆಗೊಳಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಆಧುನಿಕವಾಗಿ ಪೋಲೋ ಎಂಬ ಹೆಸರಿನಿಂದ ಕರೆಯುವ ಸಾಗೋಲ್ ಕಾಂಗ್ಜೆಯು ಮಣಿಪುರದಲ್ಲಿ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ಇಂಫಾಲ್‌ನ ಮಾರ್ಜಿಂಗ್ ಪೋಲೋ ಕಾಂಪ್ಲೆಕ್ಸ್‌ನಲ್ಲಿ 122 ಅಡಿ ಎತ್ತರದ ಮಾರ್ಜಿಂಗ್‌ನಲ್ಲಿ ನಿರ್ಮಿಸಲಾಗಿರುವ ಪೋಲೋ ಪ್ರತಿಮೆ ಮುಂಬರುವ ಯುವ ಪೀಳಿಗೆಯನ್ನು ಆಟದ ಕಡೆಗೆ ಪ್ರೇರೇಪಿಸುತ್ತದೆ. ಅಷ್ಟೇ ಅಲ್ಲದೇ ಕ್ರೀಡಾ ಪರಂಪರೆಯನ್ನು ಖಂಡಿತವಾಗಿಯೂ ಮುಂದಕ್ಕೆ ಕೊಂಡೊಯ್ಯುತ್ತದೆ ಎಂದು ಟ್ವಿಟ್ ಮಾಡಿದ್ದಾರೆ.

ಪೋಲೋ ಪ್ರವಾಸೋದ್ಯಮದ ಉತ್ತೇಜನ !
ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಪೋಲೋ ಪ್ರವಾಸೋದ್ಯಮವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ಭಾಗದಲ್ಲಿ ಪ್ರವಾಸೋದ್ಯಮ ಇಲಾಖೆಯು ಪ್ರತಿ ವರ್ಷ ಪುರುಷರು ಮತ್ತು ಮಹಿಳೆಯರಿಗಾಗಿ ಅಂತರಾಷ್ಟ್ರೀಯ ಪೋಲೋ ಪಂದ್ಯಾವಳಿಗಳನ್ನು ಆಯೋಜಿಸುತ್ತದೆ. ಮುಂಬರುವ ದಿನಗಳಲ್ಲಿ ದೇಶ, ವಿದೇಶಗಳ ಕ್ರೀಡಾಳುಗಳು ಮತ್ತು ಪ್ರವಾಸಿಗರನ್ನು ಆಕರ್ಷಿಸಲು ವಿಶ್ವ ದರ್ಜೆಯ ಪೋಲೋ ಮೈದಾನ ನಿರ್ಮಿಸುವ ಯೋಜನೆ ರೂಪಿಸಲಾಗುತ್ತಿದೆ ಎಂದು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಹೇಳಿದರು.
ವಿವಿಧ ಯೋಜನೆಗೆಳಿಗೆ ಶಂಕು ಸ್ಥಾಪನೆ !
ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರು ವಿವಿಧ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಚುರಾಚಂದ್‌ಪುರ ವೈದ್ಯಕೀಯ ಕಾಲೇಜಿನ ಕಟ್ಟಡವನ್ನು ಉದ್ಘಾಟನೆ ಮಾಡಿದರು. ಮೊಯಿರಾಂಗ್‌ನಲ್ಲಿರುವ ಆಜಾದ್ ಹಿಂದ್ ಫೌಜ್ನ ಪ್ರಧಾನ ಕಛೇರಿಯಲ್ಲಿ ಈಶಾನ್ಯದಲ್ಲಿ ಅತಿ ಎತ್ತರದ 165 ಅಡಿ ಉದ್ದದ ತಿರಂಗವನ್ನು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಕೊಂತೌಜಂ ಗೋವಿಂದಾಸ್ ಸಿಂಗ್, ಆರೋಗ್ಯ ಮತ್ತು ಐಪಿಆರ್ ಸಚಿವ ಡಾ. ಸಪಂ ರಂಜನ್, ಶಿಕ್ಷಣ ಸಚಿವ ತೌನೊಜಮ್ ಬಸಂತ ಸಿಂಗ್, ಮೊಯಿರಾಂಗ್ ಶಾಸಕ ತೊಂಗಮ್ ಶಾಂತಿ ಸಿಂಗ್, ತೊಂಗಬ್ರಾಮ್ ರಾಬಿಂದ್ರೋ ಸಿಂಗ್, ಮುಖ್ಯ ಕಾರ್ಯದರ್ಶಿ ಡಾ. ರಾಜೇಶ್ ಕುಮಾರ್, ಡಿಜಿಪಿ ಪಿ ಡೌಂಗೆಲ್ ಸೇರಿದಂತೆ ಸರ್ಕಾರದ ಇತರ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications