ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್‌ಗೆ ಭಾರತ 'ಎ' ತಂಡ ಪ್ರಕಟ; ವೈಭವ್ ಸೂರ್ಯವಂಶಿಗೆ ಸ್ಥಾನ
Vaibhav Sooryavanshi: ಖತಾರ್‌ನ ದೋಹಾದಲ್ಲಿ ನವೆಂಬರ್ 19 ರಿಂದ 29ರ ವರೆಗೆ ನಡೆಯಲಿರುವ ಎಸಿಸಿ ಪುರುಷರ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ 2026 ಪಂದ್ಯಾವಳಿಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ ) 15 ಸದಸ್ಯರ ಭಾರತ 'ಎ' ತಂಡವನ್ನು ಪ್ರಕಟಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈ ಪ್ರಮುಖ ಸರಣಿಯಲ್ಲಿ ಭಾರತ 'ಎ' ತಂಡವನ್ನು ಯುವ ಆಟಗಾರ ತಿಲಕ್ ವರ್ಮಾ ಮುನ್ನಡೆಸಲಿದ್ದು, ಐಪಿಎಲ್ ಹಾಗೂ ದೇಶಿಯ ಕ್ರಿಕೆಟ್‌ನ ಅನುಭವಿ ಬ್ಯಾಟರ್ ರಜತ್ ಪಾಟೀದಾರ್ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ. ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವಿಗಳು ಮತ್ತು ಉದಯೋನ್ಮುಖ ಯುವ ಆಟಗಾರರ ಸಮ್ಮಿಶ್ರಣವನ್ನು ಈ ತಂಡದಲ್ಲಿ ಕಾಣಬಹುದಾಗಿದೆ.

ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ ಸೇರ್ಪಡೆ
ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಪ್ರಮುಖ ಆಕರ್ಷಣೆಯಾಗಿ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಹಾಗೂ ಯುವ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿ ಇದ್ದಾರೆ. ಫಿನಿಶರ್ ಪಾತ್ರದಲ್ಲಿ ರಿಂಕು ಸಿಂಗ್ ತಂಡದಲ್ಲಿದ್ದರೆ, ವಿಕೆಟ್ ಕೀಪರ್‌ಗಳಾಗಿ ಪ್ರಭ್‌ಸಿಮ್ರನ್ ಸಿಂಗ್ ಮತ್ತು ಕುಮಾರ್ ಕುಶಾಗ್ರ ಸ್ಥಾನ ಪಡೆದಿದ್ದಾರೆ.
ಸೂರ್ಯಾಂಶ್ ಶೇಡ್ಗೆ, ಶಹಬಾಜ್ ಅಹಮದ್, ಹರ್ಷ್ ದುಬೆ ಹಾಗೂ ವಿಪ್ರಜ್ ನಿಗಮ್ ಆಲ್‌ರೌಂಡರ್‌ಗಳಾಗಿ ತಂಡಕ್ಕೆ ಬಲ ತುಂಬಲಿದ್ದಾರೆ. ವೇಗದ ಬೌಲಿಂಗ್ ವಿಭಾಗವನ್ನು ಹರ್ಷಿತ್ ರಾಣಾ, ಪ್ರಿನ್ಸ್ ಯಾದವ್ ಮತ್ತು ಅರ್ಷದ್ ಖಾನ್ ಮುನ್ನಡೆಸಲಿದ್ದಾರೆ. ತನುಷ್ ಕೋಟ್ಯಾನ್ ಕೂಡ ಬೌಲಿಂಗ್ ವಿಭಾಗದಲ್ಲಿ ಸಾಥ್ ನೀಡಲಿದ್ದಾರೆ.
ಭಾರತ ತಂಡ ಯಾವೆಲ್ಲಾ ಟೀಮ್‌ಗಳನ್ನ ಎದುರಿಸಲಿದೆ?
ಈ ಪಂದ್ಯಾವಳಿಯಲ್ಲಿ ಭಾರತ 'ಎ' ತಂಡವನ್ನು ಬಿ ಗುಂಪಿನಲ್ಲಿ ಸೇರಿಸಲಾಗಿದ್ದು, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ 'ಎ', ಯುಎಇ ಮತ್ತು ನೇಪಾಳ ತಂಡಗಳನ್ನು ಭಾರತ ಎದುರಿಸಲಿದೆ. ಮತ್ತೊಂದೆಡೆ ಎ ಗುಂಪಿನಲ್ಲಿ ಬಾಂಗ್ಲಾದೇಶ 'ಎ', ಶ್ರೀಲಂಕಾ 'ಎ', ಅಫ್ಘಾನಿಸ್ತಾನ 'ಎ' ಹಾಗೂ ಹಾಂಗ್ ಕಾಂಗ್ ತಂಡಗಳಿವೆ.
ಟೂರ್ನಿಯ ಮುಖ್ಯ ದಿನಾಂಕಗಳು
ಎರಡೂ ಗುಂಪುಗಳಿಂದ ತಲಾ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ. ನವೆಂಬರ್ 26 ಮತ್ತು 27 ರಂದು ಸೆಮಿಫೈನಲ್ ನಡೆಯಲಿದ್ದು, ನವೆಂಬರ್ 29 ರಂದು ಫೈನಲ್ ಪಂದ್ಯ ನಡೆಯಲಿದೆ.
ಭಾರತ 'ಎ' ಸಂಪೂರ್ಣ ತಂಡ
ತಿಲಕ್ ವರ್ಮಾ (ನಾಯಕ), ರಜತ್ ಪಾಟಿದಾರ್ (ಉಪನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಪ್ರಭ್‌ಸಿಮ್ರನ್ ಸಿಂಗ್ (ವಿಕೆಟ್ ಕೀಪರ್), ರಿಂಕು ಸಿಂಗ್, ಕುಮಾರ್ ಕುಶಾಗ್ರ (ವಿಕೆಟ್ ಕೀಪರ್), ಸೂರ್ಯಾಂಶ್ ಶೆಡ್ಗೆ, ಶಹಬಾಜ್ ಅಹಮದ್, ವಿಪ್ರಜ್ ನಿಗಮ್, ಹರ್ಷ್ ದುಬೆ, ತನುಷ್ ಕೋಟ್ಯಾನ್, ಹರ್ಷಿತ್ ರಾಣಾ, ಪ್ರಿನ್ಸ್ ಯಾದವ್, ಅರ್ಷದ್ ಖಾನ್.


Click it and Unblock the Notifications
