India vs Nepal: ಜೈಸ್ವಾಲ್, ರಿಂಕು ಸಿಂಗ್ ಅಬ್ಬರ, ನೇಪಾಳ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ಏಷ್ಯನ್ ಗೇಮ್ಸ್ 2023 ರ ಪುರುಷರ ಕ್ರಿಕೆಟ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ನೇಪಾಳ ತಂಡದ ವಿರುದ್ಧ 22 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ.
ಚೀನಾ ಹ್ಯಾಂಗ್ ಝೌ ನ ಪಿಂಗ್ ಫೆಂಗ್ ಮೈದಾನದಲ್ಲಿ ನಡೆದ ನಡೆದ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಭಾರತ ಶುಭಾರಂಭ ಮಾಡಿದೆ.

ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು, ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ನೇಪಾಳ ಬೌಲರ್ ಗಳನ್ನು ದಂಡಿಸಿದರು, ಕೇವಲ 49 ಎಸೆತಗಳಲ್ಲಿ 8 ಬೌಂಡರಿ 7 ಸಿಕ್ಸರ್ ಸಹಿತ 100 ರನ್ ಗಳಿಸಿದರು, ಭರ್ಜರಿ ಶತಕ ಗಳಿಸುವ ಮೂಲಕ ಭಾರತ ಬೃಹತ್ ಮೊತ್ತ ಕಲೆ ಹಾಕಲು ಕಾರಣವಾದರು.
ರುತುರಾಜ್ ಗಾಯಕ್ವಾಡ್ 25 ರನ್, ತಿಲಕ್ ವರ್ಮಾ 2, ಜಿತೇಶ್ ಶರ್ಮಾ 5 ರನ್ ಗಳಿಸಿದರು. ನಂತರ ಬಂದ ಶಿವಂ ದುಬೆ 19 ಎಸೆತಗಳಲ್ಲಿ ಅಜೇಯ 25 ರನ್ ಗಳಿಸಿದರೆ, ರಿಂಕು ಸಿಂಗ್ ಕೇವಲ 15 ಎಸೆತಗಳಲ್ಲಿ 2 ಬೌಂಡರಿ 4 ಸಿಕ್ಸರ್ ಸಹಿತ 35 ರನ್ ಗಳಿಸಿ ಮಿಂಚಿದರು. ಅಂತಿಮವಾಗಿ ಭಾರತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 202 ರನ್ ಗಳಿಸಿತು.
ಭಾರತದ ಉತ್ತಮ ಬೌಲಿಂಗ್
ಈ ಸವಾಲಿನ ಮೊತ್ತವನ್ನು ಬೆನ್ನತ್ತಿದ ನೇಪಾಳ ತಂಡ ಹೋರಾಟ ನೀಡಿದರೂ ಅಂತಿಮವಾಗಿ ಸೋಲೊಪ್ಪಿಕೊಂಡಿತು. ಕುಶಾಲ್ ಮಲ್ಲ 22 ಎಸೆತಗಳಲ್ಲಿ 29 ರನ್ ಗಳಿಸಿದರೆ, ದೀಪೇಂದ್ರ ಸಿಂಗ್ 15 ಎಸೆತಗಳಲ್ಲಿ 4 ಸಿಕ್ಸರ್ ಸಹಿತ 32 ರನ್ ಗಳಿಸಿದರು.
ಭಾರತದ ಪರ ಆವೇಶ್ ಖಾನ್ ಮತ್ತು ರವಿ ಬಿಷ್ಣೋಯ್ ತಲಾ 3 ವಿಕೆಟ್ ಪಡೆದು ಮಿಂಚಿದರು. ಅರ್ಷದೀಪ್ ಸಿಂಗ್ 2 ವಿಕೆಟ್ ಪಡೆದರೆ, ರವಿಶ್ರೀನಿವಾಸ್ ಸಾಯಿ ಕಿಶೋರ್ ಒಂದು ವಿಕೆಟ್ ಪಡೆದರು.
ಈ ಗೆಲುವಿನೊಂದಿಗೆ ಭಾರತ ಸೆಮಿಫೈನಲ್ ಗೆ ಪ್ರವೇಶ ಪಡೆದುಕೊಂಡಿದೆ. ಭಾರತ, ಶ್ರೀಲಂಕಾ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ ಗೆ ಅರ್ಹತೆ ಪಡೆದುಕೊಂಡಿದ್ದವು.












Click it and Unblock the Notifications