Virat Kohli: ಐಪಿಎಲ್ ಬಳಿಕ ಟಿ20 ವಿಶ್ವಕಪ್‌ನಲ್ಲೂ ಹಲವು ದಾಖಲೆ ಬರೆಯಲು ಸಜ್ಜಾದ ವಿರಾಟ್ ಕೊಹ್ಲಿ
ಇನ್ನೇನು ಎರಡು ದಿನಗಳಲ್ಲಿ ಟಿ20 ವಿಶ್ವಕಪ್ ಆರಂಭವಾಗಲಿದೆ. ಎಲ್ಲ ತಂಡಗಳು ಈ ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ನೀಡಲು ತಯಾರಿ ನಡೆಸಿವೆ. 20 ತಂಡಗಳು ಟ್ರೋಫಿ ಮೆಲೆ ಕಣ್ಣು ನೆಟ್ಟಿದ್ದು, ಭಾರತ ಸಹ ಕಪ್ ಗೆಲ್ಲುವ ಹಾಟ್ ಫೆವರೀಟ್ ತಂಡವಾಗಿದೆ. ಈಗಾಗಲೇ ಟೀಮ್ ಇಂಡಿಯಾ ಅಮೆರಿಕಾ ತಲುಪಿದ್ದು ಅಭ್ಯಾಸವನ್ನು ಆರಂಭಿಸಿದೆ. ಇನ್ನು ಕೆಲವು ಆಟಗಾರರು ಅಮೆರಿಕಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
ಉತ್ತಮ ತಂಡವನ್ನು ಹೊಂದಿರುವ ಟೀಮ್ ಇಂಡಿಯಾ ಲೀಗ್ ಹಂತದಲ್ಲಿ ನಾಲ್ಕು ಪಂದ್ಯಗಳನ್ನು ಆಡಲಿದೆ. ಟೂರ್ನಿಯಲ್ಲಿ ಈ ಬಾರಿ ಎಲ್ಲರ ಚಿತ್ತ ಸಹ ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ಅವರ ಮೇಲೆ ಇರುತ್ತದೆ. ವಿರಾಟ್ ಕೊಹ್ಲಿ ಭಾರತದಲ್ಲಿ ನಡೆದಿದ್ದ ಐಪಿಎಲ್‌ನಲ್ಲಿ ಗರಿಷ್ಠ ರನ್ ಬಾರಿಸಿ ಅಬ್ಬರಿಸಿದ್ದರು. ಅಲ್ಲದೆ ತಮ್ಮ ಮೇಲಿನ ಟೀಕೆಗಳಿಗೆ ವಿರಾಟ್ ಬ್ಯಾಟ್ ನಿಂದಲೇ ಉತ್ತರವನ್ನು ನೀಡಿದ್ದರು. ಹೀಗಾಗಿ ಈ ಬಾರಿಯ ಐಪಿಎಲ್‌ನಲ್ಲಿ ವಿರಾಟ್ ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ವಿರಾಟ್ ಕೊಹ್ಲಿ ಐಪಿಎಲ್ ಫಾರ್ಮ್‌ನ್ನೇ ಮುಂದುವರೆಸುವ ಲೆಕ್ಕಾಚಾರವನ್ನು ಹಾಕಿಕೊಂಡಿದ್ದಾರೆ. ಈ ಫಾರ್ಮ್‌ನ್ನೇ ಮುಂದುವರೆಸಿದ್ದೇ ಆದಲ್ಲಿ ಎದುರಾಳಿಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ನಿರ್ಮಿಸಬಹುದಾದ ಮೂರು ದಾಖಲೆಗಳ ಮಾಹಿತಿ ಇಲ್ಲಿದೆ.
ಗರಿಷ್ಠ ಬೌಂಡರಿ ದಾಖಲೆ
ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ನಲ್ಲಿ ಇದುವರೆಗೆ 103 ಬೌಂಡರಿಗಳನ್ನು ಬಾರಿಸಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಬೌಂಡರಿಗಳನ್ನು ಬಾರಿಸಿದ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆ ವಿರಾಟ್ ಅವರದ್ದಾಗಿದೆ. ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿದ ಶ್ರೇಯ, ಶ್ರೀಲಂಕಾದ ದಿಗ್ಗಜ ಮಹೇಲಾ ಜಯವರ್ಧನ್ ಅವರಿಗೆ ಸಲ್ಲುತ್ತದೆ. ಇವರು ಮೆಗಾ ಟೂರ್ನಿಯಲ್ಲಿ 111 ಬೌಂಡರಿಗಳನ್ನು ಬಾರಿಸಿದ್ದಾರೆ. ಈ ಟೂರ್ನಿಯಲ್ಲಿ ವಿರಾಟ್ 9 ಬೌಂಡರಿ ಬಾರಿಸಿದರೆ, ಜಯವರ್ಧನ್ ರಿಕಾರ್ಡ್ ಪೀಸ್ ಪೀಸ್ ಆಗುತ್ತದೆ.

ತಮ್ಮದೇ ದಾಖಲೆ ಉತ್ತಮ ಪಡಿಸಿಕೊಳ್ಳುವ ಅವಕಾಶ
ವಿರಾಟ್ ಕೊಹ್ಲಿ ಒಂದೇ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ. ಇವರು 2014ರ ಟಿ20 ವಿಶ್ವಕಪ್‌ನಲ್ಲಿ ಆಡಿದ 6 ಪಂದ್ಯಗಳ 6 ಇನ್ನಿಂಗ್ಸ್‌ಗಳಲ್ಲಿ 106.33 ಸರಾಸರಿ ಮತ್ತು 129.14 ಸ್ಟ್ರೈಕ್ ರೇಟ್ ನಲ್ಲಿ 319 ರನ್ ಬಾರಿಸಿದ್ದಾರೆ. ಇದರಲ್ಲಿ 4 ಅರ್ಧಶತಕ ಸೇರಿವೆ. 2024ರ ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ತಮ್ಮದೇ ದಾಖಲೆಯನ್ನು ಮುರಿಯಬಹುದು.
ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆ ವಿರಾಟ್ ಕೊಹ್ಲಿ ಅವರಿಗೆ ಸಲ್ಲುತ್ತದೆ. ಟಿ20 ವಿಶ್ವಕಪ್‌ನಲ್ಲಿ ಇದುವರೆಗೆ ವಿರಾಟ್ 27 ಪಂದ್ಯಗಳ, 25 ಇನ್ನಿಂಗ್ಸ್‌ಗಳಲ್ಲಿ 81.50 ಸರಾಸರಿ ಮತ್ತು 131.30 ಸ್ಟ್ರೈಕ್ ರೇಟ್‌ನಲ್ಲಿ 1141 ರನ್ ಗಳಿಸಿದ್ದಾರೆ. ಈ ಟೂರ್ನಿಯಲ್ಲಿ ಇವರು 359 ರನ್ ಗಳಿಸಿದ್ದೇ ಆದಲ್ಲಿ, ಟಿ20 ವಿಶ್ವಕಪ್‌ನಲ್ಲಿ 1500 ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಆಗುವ ಅವಕಾಶ ಕೊಹ್ಲಿಗೆ ಇದೆ.












Click it and Unblock the Notifications