'ನಿಮಗಾಗಿ ಈ ವಿಶ್ವಕಪ್ ಗೆಲ್ಲಿಸುತ್ತೇನೆ' ಎಂಬ ಮಾತು ಉಳಿಸಿಕೊಂಡ ಅಭಿಷೇಕ್ ಶರ್ಮಾ ಬಗ್ಗೆ ಸೂರ್ಯಕುಮಾರ್ ಯಾದವ್ ಮೆಚ್ಚುಗೆ
Suryakumar Yadav: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತವು ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿ ಟ್ರೋಫಿಗೆ ಮುತ್ತಿಟ್ಟಿತು. ಇದರ ಬೆನ್ನಲ್ಲೇ ಫೈನಲ್ ಪಂದ್ಯಕ್ಕೂ ಮುನ್ನ ಅಭಿಷೇಕ್ ಶರ್ಮಾ ಅವರು ನೀಡಿದ ದೃಢ ಸಂಕಲ್ಪದ ವಿಚಾರವನ್ನು ನಾಯಕ ಸೂರ್ಯಕುಮಾರ್ ಯಾದವ್ ಅವರು ಬಿಚ್ಚಿಟ್ಟಿದ್ದಾರೆ.
ಸೂರ್ಯಕುಮಾರ್ ಯಾದವ್ ಅವರು ಇತ್ತೀಚೆಗೆ ನಡೆದ ಟಿ20 ವಿಶ್ವಕಪ್ 2026ರ ಫೈನಲ್ ಪಂದ್ಯದ ಕುರಿತು ವಿಶೇಷ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ಫೈನಲ್ ಪಂದ್ಯಕ್ಕೂ ಮುನ್ನ ಯುವ ಆಟಗಾರ ಅಭಿಷೇಕ್ ಶರ್ಮಾ ಅವರು ನೀಡಿದ್ದ ಭರವಸೆಯನ್ನು ಅವರು ಬಹಿರಂಗಪಡಿಸಿದ್ದಾರೆ.

ಅಭಿಷೇಕ್ ಶರ್ಮಾ ಭರವಸೆಯ ಮಾತು
ಟೂರ್ನಿಯುದ್ದಕ್ಕೂ ಕಳಪೆ ಫಾರ್ಮ್‌ನಿಂದ ಪರದಾಡುತ್ತಿದ್ದ ಎಡಗೈ ಸ್ಪೋಟಕ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ, ಫೈನಲ್ ಪಂದ್ಯಕ್ಕೂ ಮುನ್ನವೇ "ನಾವು ಈ ವಿಶ್ವಕಪ್ ಗೆಲ್ಲುತ್ತೇವೆ" ಎಂದು ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಭರವಸೆ ನೀಡಿದ್ದರು. ತನ್ನ ಕಳಪೆ ಫಾರ್ಮ್‌ನ ಹೊರತಾಗಿಯೂ, ತಂಡದ ಗೆಲುವಿನ ಬಗ್ಗೆ ಅವರು ಅಚಲ ನಂಬಿಕೆಯನ್ನು ಹೊಂದಿದ್ದರು ಎಂದು ಸೂರ್ಯಕುಮಾರ್ ಯಾದವ್ ಅವರು ಹೇಳಿದ್ದಾರೆ.
ಆಕ್ರಮಣಕಾರಿ ಆಟದ ಮೂಲಕ ಗಮನ ಸೆಳೆದ ಅಭಿಷೇಕ್
"ಅತ್ಯಂತ ಮಹತ್ವದ ಫೈನಲ್ ಪಂದ್ಯದಲ್ಲಿ ಒತ್ತಡವಿದ್ದರೂ, ಅಭಿಷೇಕ್ ಶರ್ಮಾ ಅವರು ತಮ್ಮ ಆಕ್ರಮಣಕಾರಿ ಆಟದ ಮೂಲಕ ಗಮನ ಸೆಳೆದರು. ಕಳಪೆ ಫಾರ್ಮ್ ಸಮಸ್ಯೆಯಿಂದ ಹೊರಬಂದ ಅವರು, ನ್ಯೂಜಿಲೆಂಡ್ ವಿರುದ್ಧದ ಫೈನಲ್‌ನಲ್ಲಿ ಭರ್ಜರಿ 52 ರನ್‌ಗಳನ್ನು ಸಿಡಿಸಿ ತಂಡಕ್ಕೆ ನೆರವಾಗುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡರು," ಎಂದು ಸೂರ್ಯ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಸೂರ್ಯಕುಮಾರ್ ಯಾದವ್ ಹೇಳಿದ್ದೇನು?
ಪಿಟಿಐ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಭಾರತೀಯ ತಂಡದ ನಾಯಕ ಸೂರ್ಯಕುಮಾರ್ ಯಾದವ್, ಅಭಿಷೇಕ್ ಶರ್ಮಾ ಟಿ20 ವಿಶ್ವಕಪ್ 2026 ಫೈನಲ್‌ಗೆ ಮುನ್ನ ತಮಗೆ ಹೇಳಿದ್ದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಫೈನಲ್ ಪಂದ್ಯಕ್ಕೂ ಮುನ್ನ ಅಭಿಷೇಕ್ ಶರ್ಮಾ ತಮ್ಮ ಬಳಿ ಬಂದು, "ನಿಮಗಾಗಿ ಈ ವಿಶ್ವಕಪ್ ಗೆಲ್ಲಿಸುತ್ತೇನೆ. ನೀವು ನೆನಪಿಟ್ಟುಕೊಳ್ಳುವಂತಹ ಉತ್ತಮ ಇನ್ನಿಂಗ್ಸ್ ಆಡುತ್ತೇನೆ," ಎಂದು ಹೇಳಿದ್ದರು ಎಂದು ಸೂರ್ಯಕುಮಾರ್ ತಿಳಿಸಿದ್ದಾರೆ.
ಭರವಸೆಯಂತೆ ಅಬ್ಬರಿಸಿದ ಅಭಿಷೇಕ್
"ಆ ಯುವ ಆಟಗಾರ ಸದಾ ಸಕಾರಾತ್ಮಕ ಮನೋಭಾವದಿಂದ ಕೂಡಿದ್ದರು. ತಂಡದ ಪ್ರತಿಯೊಬ್ಬರು ಆತನ ಮೇಲೆ ನಂಬಿಕೆ ಇಟ್ಟಿದ್ದೆವು. ಅಭಿಷೇಕ್ ಅವರಿಂದ ಒಂದು ಉತ್ತಮ ಇನಿಂಗ್ಸ್ ಯಾವಾಗ ಬೇಕಾದರೂ ಬರಬಹುದು ಎಂಬ ವಿಶ್ವಾಸ ಇಟ್ಟಿದ್ದೆವು. ಅದಕ್ಕೆ ಫೈನಲ್ ಪಂದ್ಯಕ್ಕಿಂತ ಉತ್ತಮವಾದ ವೇದಿಕೆ ಮತ್ತೊಂದಿಲ್ಲ" ಎಂದು ಅಭಿಷೇಕ್ ಶರ್ಮಾ ಅವರ ಅಚಲ ವಿಶ್ವಾಸ ಮತ್ತು ಆಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ತಮ್ಮ ಭರವಸೆಯಂತೆ ಅಬ್ಬರಿಸಿದ ಅಭಿಷೇಕ್, ತಂಡಕ್ಕೆ ಅಮೂಲ್ಯವಾದ 52 ರನ್ ಕೊಡುಗೆ ನೀಡುವ ಮೂಲಕ ಭಾರತದ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಟಿ20 ವಿಶ್ವಕಪ್ 2026ರ ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ ಅವರ ಪ್ರದರ್ಶನವು ಏರಿಳಿತಗಳಿಂದ ಕೂಡಿದ್ದರೂ, ತಂಡದ ಮ್ಯಾನೇಜ್‌ಮೆಂಟ್ ತೋರಿದ ನಂಬಿಕೆ ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಟ್ಟಿದೆ. ಟೂರ್ನಿಯ ಆರಂಭದಲ್ಲಿ ಅಭಿಷೇಕ್ ಶರ್ಮಾ ಸತತವಾಗಿ ಮೂರು ಬಾರಿ ಶೂನ್ಯಕ್ಕೆ ಔಟಾಗುವ ಮೂಲಕ ಕಳಪೆ ಫಾರ್ಮ್‌ನಲ್ಲಿದ್ದರು. ಬಳಿಕ ಸೂಪರ್ 8 ಹಂತದಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ 55 ರನ್ ಗಳಿಸಿದ್ದು ಬಿಟ್ಟರೆ, ಟೂರ್ನಿಯ ಉಳಿದ ಪಂದ್ಯಗಳಲ್ಲಿ ಅವರಿಗೆ ಪ್ರದರ್ಶನ ಕಂಡುಬರಲಿಲ್ಲ.
VIDEO | PTI EXCLUSIVE: India T20 captain Suryakumar Yadav (@surya_14kumar) on the aggressive start of Sanju Samson and Abhishek Sharma in the first six overs of the T20 World Cup 2026 final says, "It spread a lot of positivity and also calmed everyone in the dugout. We know how… pic.twitter.com/w3WlTaWyRA
— Press Trust of India (@PTI_News) March 16, 2026
ಫೈನಲ್ ಪಂದ್ಯದಲ್ಲಿ ಅವರನ್ನು ತಂಡದಿಂದ ಕೈಬಿಡಬೇಕೆಂಬ ಮಾತುಗಳು ಕೇಳಿಬಂದಿದ್ದರೂ, ನಾಯಕ ಸೂರ್ಯಕುಮಾರ್ ಯಾದವ್ ಮತ್ತು ತಂಡದ ಆಡಳಿತ ಮಂಡಳಿ ಅವರ ಮೇಲೆ ವಿಶ್ವಾಸವನ್ನಿಟ್ಟಿತು. ಆ ನಂಬಿಕೆಯನ್ನು ಉಳಿಸಿಕೊಂಡ ಅಭಿಷೇಕ್, ಫೈನಲ್‌ನಂತಹ ನಿರ್ಣಾಯಕ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಸಿಡಿಸುವ ಮೂಲಕ ತಂಡದ ವಿಶ್ವಕಪ್ ಗೆಲ್ಲುವ ಕನಸನ್ನು ನನಸಾಗಿಸಿದರು.












Click it and Unblock the Notifications