IPL 2025; ಮುಂಬೈ ಇಂಡಿಯನ್ಸ್ ಬಲಿಷ್ಠವೇ ಇರಬಹುದು ಆದರೆ ಈ ಬಾರಿ ಕಪ್ ಗೆಲ್ಲೋದು ಇವರೇ ಎಂದ ಗವಾಸ್ಕರ್
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಶನಿವಾರ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ 2025ರ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯವನ್ನು ಗೆದ್ದರೆ ಆರ್ ಸಿಬಿ ಪ್ಲೇಆಫ್ ಸ್ಥಾನ ಬಹುತೇಕ ಖಚಿತವಾಗಲಿದೆ. ತವರಿನಲ್ಲಿ ಸತತ ಮೂರು ಪಂದ್ಯಗಳನ್ನು ಸೋತ ಬಳಿಕ ಬೆಂಗಳೂರಿನಲ್ಲಿ ಕೊನೆಯ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಗೆಲುವು ಸಾಧಿಸಿತ್ತು. ತವರಿನ ಹೊರಗೆ ಸತತವಾಗಿ 6 ಪಂದ್ಯ ಗೆದ್ದು ತವರಿನಲ್ಲೂ ಗೆಲುವಿನ ಸರಣಿ ಮುಂದುವರೆಸುವ ವಿಶ್ವಾಸದಲ್ಲಿದೆ.
ಈಗ ಆಡಿರುವ 10 ಪಂದ್ಯಗಳಲ್ಲಿ 7 ಗೆಲುವಿನ ಮೂಲಕ 14 ಅಂಕಗಳನ್ನು ಹೊಂದಿದೆ. ಸಿಎಸ್‌ಕೆ ವಿರುದ್ಧ ಗೆದ್ದರೆ 16 ಅಂಕಗಳಾಗಲಿದ್ದು ಪ್ಲೇಆಫ್ ಸ್ಥಾನ ಬಹುತೇಕ ಖಚಿತವಾಗಲಿದೆ. ಆದರೆ ಉಳಿದ 4 ಪಂದ್ಯಗಳಲ್ಲಿ ಕನಿಷ್ಠ 3 ಪಂದ್ಯ ಗೆದ್ದು ಅಗ್ರ 2 ಸ್ಥಾನಗಳಲ್ಲಿ ಒಂದನ್ನು ಪಡೆದು ಪ್ಲೇಆಫ್ ಪ್ರವೇಶಿಸುವ ಲೆಕ್ಕಾಚಾರದಲ್ಲಿದೆ.

17 ವರ್ಷಗಳಿಂದ ಪ್ರಶಸ್ತಿಯ ಬರ ಎದುರಿಸುತ್ತಿರುವ ಆರ್ ಸಿಬಿ ಈ ಭಾರಿ ಬಲಿಷ್ಠ ತಂಡವಾಗಿ ಕಾಣಿಸುತ್ತಿದ್ದು ಕಪ್ ಗೆಲ್ಲುವ ವಿಶ್ವಾಸದಲ್ಲಿದೆ. ಭಾರತ ತಂಡದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಕೂಡ ಈ ಬಾರಿ ಆರ್ ಸಿಬಿ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ ಎಂದು ಹೇಳಿದ್ದಾರೆ. ಆರ್ ಸಿಬಿ ಎಲ್ಲಾ ವಿಭಾಗದಲ್ಲಿ ಬಲಿಷ್ಠವಾಗಿ ಕಾಣಿಸುತ್ತಿದ್ದು ಅವರಿಗೆ ಕಪ್ ಗೆಲ್ಲುವ ಅವಕಾಶ ಹೆಚ್ಚಾಗಿದೆ ಎಂದಿದ್ದಾರೆ.
ಇಂಡಿಯಾ ಟುಡೇ ಜೊತೆ ಮಾತನಾಡಿರುವ ಸುನಿಲ್ ಗವಾಸ್ಕರ್, ಮುಂಬೈ ಇಂಡಿಯನ್ಸ್ ಆರ್‌ಸಿಬಿಗೆ ಬಲವಾದ ಹೋರಾಟ ನೀಡಬಹುದು ಎಂದು ಹೇಳಿದ್ದಾರೆ ಆದರೆ ಆರ್ ಸಿಬಿ ತಂಡವೇ ಕಪ್ ಗೆಲ್ಲುವ ನೆಚ್ಚಿನ ತಂಡ ಎಂದು ಹೇಳಿದ್ದಾರೆ. "ರಾಯಲ್ ಚಾಲೆಂಜರ್ಸ್ ಬೆಂಗಳೂರು. ಅವರು ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದಾರೆ ಮತ್ತು ಅತ್ಯುತ್ತಮವಾಗಿ ಫೀಲ್ಡಿಂಗ್ ಮಾಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡ ಕೂಡ ಉತ್ತಮವಾಗಿದೆ, ಆದರೆ ಅವರು ತಮ್ಮ ದಾಳಿಯನ್ನು ಇದೀಗ ಪ್ರಾರಂಭಿಸಿದ್ದಾರೆ. ಅವರು ಅಗ್ರ ತಂಡಗಳ ವಿರುದ್ಧ ಮೂರು ಕಠಿಣ ಪಂದ್ಯಗಳನ್ನು ಎದುರಿಸುತ್ತಿರುವುದರಿಂದ ಅವರು ಅದೇ ಪ್ರದರ್ಶನ ಮುಂದುವರೆಸುತ್ತಾರೆಯೇ ಎನ್ನುವುದು ಮುಖ್ಯವಾಗುತ್ತದೆ. ಆರ್‌ಸಿಬಿ ಖಂಡಿತವಾಗಿಯೂ ಪ್ರಶಸ್ತಿಯ ನೆಚ್ಚಿನ ತಂಡವಾಗಿದೆ" ಎಂದು ಗವಾಸ್ಕರ್ ತಿಳಿಸಿದ್ದಾರೆ.
ಆರ್ ಸಿಬಿ ಮತ್ತು ಸಿಎಸ್‌ಕೆ ನಡುವಿನ ಪಂದ್ಯದ ಬಗ್ಗೆ ಮಾತನಾಡಿರುವ ಅವರು, ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಅವರನ್ನು ಮೈದಾನದಲ್ಲಿ ಕೊನೆಯ ಬಾರಿ ಒಟ್ಟಿಗೆ ನೋಡುವ ಸಾಧ್ಯತೆ ಇದೆ ಎಂದಿದ್ದಾರೆ.












Click it and Unblock the Notifications