SA vs Ban: ಬಾಂಗ್ಲಾ ವಿರುದ್ಧ 4 ರನ್‌ಗಳ ರೋಚಕ ಗೆಲುವು; ಸೂಪರ್ 8 ಹಂತಕ್ಕೆ ಲಗ್ಗೆಯಿಟ್ಟ ದಕ್ಷಿಣ ಆಫ್ರಿಕಾ
ಟಿ20 ವಿಶ್ವಕಪ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಬಾಂಗ್ಲಾದೇಶದ ವಿರುದ್ಧ 4 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಸೂಪರ್ 8 ಹಂತಕ್ಕೆ ಪ್ರವೇಶ ಪಡೆದ ಮೊದಲ ತಂಡ ಎನಿಸಿಕೊಂಡಿದೆ.
ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ದಕ್ಷಿಣ ಆಫ್ರಿಕಾ ಸ್ಫೋಟಕ ಬ್ಯಾಟರ್ ಗಳು ಬಾಂಗ್ಲಾದೇಶದ ಉತ್ತಮ ಬೌಲಿಂಗ್ ದಾಳಿಯ ಎದುರು ರನ್ ಗಳಿಸಲು ಪರದಾಡಿದರು. 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 113 ರನ್ ಗಳಿಸಿದರು.

ಕ್ವಿಂಟನ್ ಡಿ ಕಾಕ್ 11 ಎಸೆತಗಳಲ್ಲಿ 18 ರನ್ ಗಳಿಸಿದರೆ, ಹೆನ್ರಿಕ್ ಕ್ಲಾಸೆನ್ 44 ಎಸೆತಗಳಲ್ಲಿ 46 ರನ್ ಗಳಿಸಿದರು. ಡೇವಿಡ್ ಮಿಲ್ಲರ್ 38 ಎಸೆತಗಳಲ್ಲಿ 29 ರನ್ ಗಳಿಸಿದರು.
ತಂಜಿಮ್ ಹಸನ್ ಶಕೀಬ್ 4 ಓವರ್ ಗಳಲ್ಲಿ 18 ರನ್ ನೀಡಿ 3 ವಿಕೆಟ್ ಪಡೆದರು. ತಸ್ಕಿನ್ ಅಹ್ಮದ್ 4 ಓವರ್ ಗಳಲ್ಲಿ 19 ರನ್ ನೀಡಿ 2 ವಿಕೆಟ್ ಪಡೆದರೆ, ರಿಷಾದ್ ಹೊಸೈನ್ 1 ವಿಕೆಟ್ ಪಡೆದರು.
ರೋಚಕ ಪಂದ್ಯದಲ್ಲಿ ಗೆದ್ದ ದಕ್ಷಿಣ ಆಫ್ರಿಕಾ
ಈ ಸವಾಲಿನ ಮೊತ್ತವನ್ನು ಬೆನ್ನತ್ತಿದ ಬಾಂಗ್ಲಾದೇಶ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿತು. ಆದರೆ ಯಾವೊಬ್ಬ ಬ್ಯಾಟರ್ ಕೂಡ ದೊಡ್ದ ರನ್ ಗಳಿಸಲಿಲ್ಲ. ತಂಜಿದ್ ಖಾನ್ 9 ರನ್, ಶಾಂಟೊ 14 ರನ್, ಲಿಟ್ಟನ್ ದಾಸ್ 9 ರನ್, ಶಕೀಬ್ ಅಲ್ ಹಸನ್ 3 ರನ್ ಗಳಿಸಿದರು. ಟೋವಿದ್ ಹೃದೋಯ್
34 ಎಸೆತಗಳಲ್ಲಿ 37 ರನ್ ಗಳಿಸುವ ಮೂಲಕ ಬಾಂಗ್ಲಾದೇಶಕ್ಕೆ ಗೆಲುವಿನ ಆಸೆ ಮೂಡಿಸಿದ್ದರು. ಆದರೆ ದಕ್ಷಿಣ ಆಫ್ರಿಕಾ ಬೌಲರ್ ಗಳು ಅದಕ್ಕೆ ಅವಕಾಶ ಕೊಡಲಿಲ್ಲ.
ಮಹಮ್ಮದುಲ್ಲಾ 27 ಎಸೆತಗಳಲ್ಲಿ 20 ರನ್ ಗಳಿಸಿದರು, ಕೊನೆಯ ಓವರ್ ನಲ್ಲಿ ಸಿಕ್ಸರ್ ಬಾರಿಸಲು ಹೋಗಿ ಔಟಾದರು. ಅವರ ವಿಕೆಟ್ ಬೀಳುತ್ತಿದ್ದಂತೆ ಬಾಂಗ್ಲಾದೇಶದ ಸೋಲು ಖಚಿತವಾಯಿತು.
ಕೊನೆಯ ಓವರ್ ನಲ್ಲಿ ಬಾಂಗ್ಲಾದೇಶದ ಗೆಲುವಿಗೆ 11 ರನ್ ಬೇಕಿತ್ತು. ಅನುಭವಿ ಸ್ಪಿನ್ನರ್ ಕೇಶವ್ ಮಹಾರಾಜ್ 6 ರನ್ ಮಾತ್ರ ನೀಡಿ, ಎರಡು ವಿಕೆಟ್ ಪಡೆಯುವ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ 4 ರನ್‌ಗಳ ರೋಚಕ ಗೆಲುವ ತಂದುಕೊಟ್ಟರು.
ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಮೊತ್ತವನ್ನು ಡಿಫೆಂಡ್ ಮಾಡಿಕೊಂಡ ದಾಖಲೆಯನ್ನು ದಕ್ಷಿಣ ಆಫ್ರಿಕಾ ಬರೆದಿದೆ. ಭಾನುವಾರ ಇದೇ ಅಂಗಳದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ 118 ರನ್‌ಗಳನ್ನು ರಕ್ಷಣೆ ಮಾಡಿತ್ತು.












Click it and Unblock the Notifications