ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಅವರ 30 ನಿಮಿಷಗಳ ನಿಯಮ ಭಾರಿ ವೈರಲ್
Smriti Mandhana: ಕಳೆದ ಕೆಲ ದಿನಗಳ ಹಿಂದೆಯಷ್ಟೇ ಭಾರತ ಮಹಿಳಾ ತಂಡವು ಟಿ20 ಏಷ್ಯಾಕಪ್ 2026 ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಇದರ ಬೆನ್ನಲ್ಲೇ ಇದೀಗ ಟೀಮ್ ಇಂಡಿಯಾ ಉಪನಾಯಕಿ ರಾಜ್ ಶಮಾನಿ ಅವರ ಪಾಡ್‌ಕಾಸ್ಟ್‌ನಲ್ಲಿ ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ '30 ನಿಮಿಷಗಳ ನಿಯಮ'ದ ಬಗ್ಗೆ ಪ್ರಸ್ತಾಪ ಮಾಡಿದ್ದು, ಇದು ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹಾಗಾದ್ರೆ ಇದರ ಹಿಂದಿನ ಅರ್ಥವೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂಧಾನ ಅವರು ರಾಜ್ ಶಮಾನಿ ಅವರ ಪಾಡ್‌ಕಾಸ್ಟ್‌ನಲ್ಲಿ ತಮ್ಮ ಜೀವನದ ಅತ್ಯಂತ ಕಠಿಣ ಕ್ಷಣಗಳು, ಸೋಲು ಮತ್ತು ಒತ್ತಡವನ್ನು ಎದುರಿಸುವ ವಿಧಾನದ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಮೈದಾನದಲ್ಲಿ ಹಾಗೂ ವೈಯಕ್ತಿಕ ಜೀವನದಲ್ಲಿ ಭಾವನೆಗಳನ್ನು ಹೇಗೆ ಸಮತೋಲನದಲ್ಲಿಡಬೇಕು ಎಂಬುದಕ್ಕೆ ಅವರು ನೀಡಿದ ಉತ್ತರ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ. ಇದೇ ವೇಳೆ '30 ನಿಮಿಷಗಳ ನಿಯಮ'ದ ಬಗ್ಗೆಯೂ ಮಾತನಾಡಿ ಗಮನ ಸೆಳೆದಿದ್ದಾರೆ.

'ಅಪರೂಪಕ್ಕೊಮ್ಮೆ ನನ್ನೊಳಗಿನ ಭಾವನಾತ್ಮಕ ಜೀವಿ ಹೊರಬರುತ್ತದೆ'
'ನಾನು ಅತಿಯಾಗಿ ಭಾವುಕಳಾಗುವ ವ್ಯಕ್ತಿಯಲ್ಲ. ನನ್ನ ಸುತ್ತಲಿರುವ ಜನರು ಹೆಚ್ಚು ಭಾವನಾತ್ಮಕವಾಗಿ ಯೋಚಿಸಿದಾಗ, ನಾನು ತೀರಾ ಪ್ರಾಯೋಗಿಕವಾಗಿ ಆಲೋಚಿಸುತ್ತೇನೆ. ಆದರೆ ಅಪರೂಪಕ್ಕೊಮ್ಮೆ ನನ್ನೊಳಗಿನ ಭಾವನಾತ್ಮಕ ಜೀವಿಯೂ ಹೊರಬರುತ್ತದೆ. ಅಂತಹ ಸಂದರ್ಭಗಳಲ್ಲಿ ನಾನು '30 ನಿಮಿಷಗಳ ನಿಯಮ'ವನ್ನು ಅನುಸರಿಸುತ್ತೇನೆ,' ಎಂದರು.
'30 ನಿಮಿಷಗಳ ನಿಯಮ'ದ ಅರ್ಥವೇನು?
'ಆಟದಲ್ಲಿ ಅಥವಾ ಜೀವನದಲ್ಲಿ ಸೋಲಾದಾಗ ಅಥವಾ ತಪ್ಪುಗಳಾದಾಗ ಕೋಪ, ನಿರಾಶೆ, ದುಃಖವಾಗುವುದು ಸಹಜ. ಆದರೆ ಹಿನ್ನಡೆಯಾದಾಗ ಆ ದುಃಖ ಅಥವಾ ನಿರಾಶೆಯನ್ನು ಅನುಭವಿಸಲು ಕೇವಲ 30 ನಿಮಿಷಗಳು ಸಾಕು. ಆ ಸಮಯ ಮುಗಿದ ತಕ್ಷಣ, ನಿರಾಶೆಯಿಂದ ಹೊರಬಂದು ಮುಂದೇನು ಮಾಡಬೇಕು ಎಂಬುದರ ಕಡೆಗೆ ಗಮನಹರಿಸುವೆ. ತಪ್ಪುಗಳನ್ನೇ ನೆನೆದು ಅಳುತ್ತಾ ಕುಳಿತರೆ ಯಾವುದೇ ಸುಧಾರಣೆ ಸಾಧ್ಯವಿಲ್ಲ,' ಎಂದು ಹೇಳಿದ್ದಾರೆ.
'ಕಷ್ಟದಲ್ಲಿರುವವರಿಗೆ ಎದ್ದು ನಿಲ್ಲಲು ಜಾಗ ನೀಡಬೇಕು'
'ಸಂಕಷ್ಟ ಅಥವಾ ಹಿನ್ನಡೆ ಎದುರಾದಾಗ ಜನರು ತೋರಿಸುವ ಅತಿಯಾದ ಅನುಕಂಪ ಸಹಾಯ ನಮ್ಮನ್ನು ಇನ್ನಷ್ಟು ದುರ್ಬಲರನ್ನಾಗಿ ಮಾಡುತ್ತದೆ. ನನಗೆ ನೋವಾಗಿದೆ ಎಂದ ತಕ್ಷಣ ನನ್ನನ್ನು ಯಾರೋ ಬಂದು ರಕ್ಷಿಸಬೇಕು ಎಂದರ್ಥ ಅಲ್ಲ. ಸಮಾಜವು ಕಷ್ಟದಲ್ಲಿರುವವರಿಗೆ ನೆರವಾಗುವ ಬದಲು, ಅವರು ತಮ್ಮ ಸ್ವಯಂ ಶಕ್ತಿಯಿಂದ ಮತ್ತೆ ಎದ್ದು ನಿಲ್ಲಲು ಜಾಗ ನೀಡಬೇಕು,' ಎಂದು ಹೇಳಿ ಗಮನ ಸೆಳೆದಿದ್ದಾರೆ.


Click it and Unblock the Notifications
