ನನ್ ಕಲೆ ನೋಡಿ ಅವ್ರಿಗೆ ಹೊಟ್ಟೆಕಿಚ್ಚು: ಆರ್‌ಸಿಬಿ ಟಗರುಪುಟ್ಟಿ, ಕನ್ನಡತಿ ಶ್ರೇಯಾಂಕಾ ಪಾಟೀಲ್ ಹಿಂಗ್ ಹೇಳಿದ್ಯಾರಿಗೆ?
Shreyanka Patil: ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟರ್ ಹಾಗೂ ಆರ್‌ಸಿಬಿ 'ಟಗರು ಪುಟ್ಟಿ' ಎಂದೇ ಹೆಸರಾಗಿರುವ ಕನ್ನಡತಿ ಶ್ರೇಯಾಂಕಾ ಪಾಟೀಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಅದರಲ್ಲೂ ಇತ್ತೀಚೆಗಷ್ಟೇ ಬಾಲಿವುಡ್ ಹಾಡಿಗೆ ಹೆಜ್ಜೆ ಹಾಕಿ, ಆ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ಟ್ರೋಲ್ ಆಗಿದ್ದರು. ಇದೀಗ ಶ್ರೇಯಾಂಕಾ ತಮ್ಮದೇ ದಾಟಿಯಲ್ಲಿ ಟ್ರೋಲಿಗರಿಗೆ ಮುಟ್ಟಿನೋಡಿಕೊಳ್ಳುವ ಹಾಗೆ ತಿರುಗೇಟು ನೀಡಿದ್ದಾರೆ.
ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ರೀಲ್ಸ್ ಮಾಡಿದ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ಎದುರಿಸಿದ ಟ್ರೋಲಿಂಗ್ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಇದು ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಟೀಕೆಗಳಿಗೆ ಶ್ರೇಯಾಂಕಾ ಪಾಟೀಲ್ ತಿರುಗೇಟು
ಡಬ್ಲ್ಯೂಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಆಡುವ ಈ ಆಲ್ ರೌಂಡರ್, ಬಾಲಿವುಡ್‌ನ 'ಶೂಟೌಟ್ ಎಟ್ ವಡಾಲ' ಚಿತ್ರದ 'ಬಬ್ಲಿ ಬದ್ಮಾಶ್ ಹೈ' ಹಾಡಿಗೆ ತಾವು ನೃತ್ಯ ಮಾಡಿದ ವೀಡಿಯೊವನ್ನು ಹಂಚಿಕೊಂಡಿದ್ದರು. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲಿಂಗ್‌ಗೆ ಕಾರಣವಾಗಿತ್ತು. ಇದೀಗ ಈ ಕುರಿತು ಪ್ರತಿಕ್ರಿಯಿಸಿರುವ ಶ್ರೇಯಾಂಕಾ, ಇಂತಹ ಮಾತುಗಳು ಅಥವಾ ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳುವ ಮೂಲಕ ತಿರುಗೇಟು ಕೊಟ್ಟರು.
'ಕಮೆಂಟ್‌ಗಳನ್ನ ನಕಾರಾತ್ಮಕವಾಗಿ ಪರಿಗಣಿಸುವುದಿಲ್ಲ'
ಇಂಡಿಯಾ ಟುಡೇ ಆಯೋಜಿಸಿದ್ದ 'ಕರ್ನಾಟಕ ರೌಂಡ್‌ಟೇಬಲ್' ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೇಯಾಂಕಾ ಪಾಟೀಲ್ ಅವರು, 'ತಮಗೆ ಬರುತ್ತಿರುವ ಕಮೆಂಟ್‌ಗಳನ್ನ ನಕಾರಾತ್ಮಕವಾಗಿ ಪರಿಗಣಿಸುವುದಿಲ್ಲ. ಅಲ್ಲದೆ, ಪ್ರಶಂಸೆ ಹಾಗೂ ವಿಮರ್ಶೆ ಎರಡೂ ಸಿಗುತ್ತಿರುವುದು ತಾವು ಜನರ ನಡುವೆ ಚರ್ಚೆಯ ವಸ್ತುವಾಗಿ ಉಳಿದಿರುವುದನ್ನು ತೋರಿಸುತ್ತದೆ,' ಎಂದು ಅವರು ಹೇಳಿದರು.
ಶ್ರೇಯಾಂಕಾ ಪಾಟೀಲ್ ಪ್ರೀತಿಸುವ ವಿಷಯಗಳು
'ನಾನು ಇದನ್ನ ನಕರಾತ್ಮಕವಾಗಿ ಕಾಣದೆ, ಧನತ್ಮಕವಾಗಿ ಸ್ವೀಕರಿಸುತ್ತಿದ್ದೇನೆ. ಜನರು ನನ್ನನ್ನು ನೋಡಿ, 'ಓಹ್, ಆಕೆ ತುಂಬಾ ಚೆನ್ನಾಗಿ ರೀಲ್ಟ್ ಮಾಡುತ್ತಿದ್ದಾಳೆ,' ಎಂದು ಹೇಳುತ್ತಿದ್ದಾರೆ. ನೀವು ನನ್ನನ್ನು ಟ್ರೋಲ್ ಮಾಡಿ, ವಿಮರ್ಶಿಸಿ ಅಥವಾ ಪ್ರಶಂಸಿಸಿ. ಅದೆಲ್ಲವೂ ನನ್ನ ಒಳ್ಳೆಯದಕ್ಕೇ ಎಂದು ಭಾವಿಸುತ್ತೇನೆ. ಟ್ರೋಲ್‌ಗಳನ್ನು ನಾನು ಟ್ರೋಲ್‌ಗಳಾಗಿ ನೋಡುವುದಿಲ್ಲ, ಏಕೆಂದರೆ ಮಾಡುತ್ತಿರುವ ಕೆಲಸವನ್ನು ನಾನು ಪ್ರೀತಿಸುತ್ತೇನೆ. ನನಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸಕ್ರಿಯವಾಗಿರುವುದು, ನೃತ್ಯ ಮಾಡುವುದು ಮತ್ತು ಇಷ್ಟವಾದ ಉಡುಪುಗಳನ್ನು ಧರಿಸುವುದೆಂದರೆ ತುಂಬಾ ಇಷ್ಟ,' ಎಂದು ಶ್ರೇಯಾಂಕಾ ಪಾಟೀಲ್ ಅವರು ಹೇಳಿದರು.
'ಸಂತೋಷ ನೀಡುವ ವಿಷಯಗಳತ್ತ ಗಮನಹರಿಸುವೆ'
ಮುಂದುವರಿದು ಮಾತನಾಡಿದ ಶ್ರೇಯಾಂಕಾ ಪಾಟೀಲ್ ಅವರು, 'ನನ್ನ ಆಯ್ಕೆಗಳ ವಿಷಯದಲ್ಲಿ ನನಗೆ ಸಂಪೂರ್ಣ ಸಮಾಧಾನ ಇದೆ. ಯಾವುದೇ ಕಾಮೆಂಟ್‌ಗಳಿಂದ ಯಾವ ಪ್ರಭಾವವೂ ಬೀರುವುದಿಲ್ಲ. ನನ್ನ ಭಾವನೆಗಳನ್ನು ಮತ್ತು ಇಷ್ಟಗಳನ್ನು ವ್ಯಕ್ತಪಡಿಸುವುದನ್ನು ಮುಂದುವರಿಸುತ್ತೇನೆ. ಹೀಗೆ ನನಗೆ ಸಂತೋಷ ನೀಡುವ ವಿಷಯಗಳತ್ತ ಮಾತ್ರ ಗಮನಹರಿಸಲು ಆದ್ಯತೆ ನೀಡುವೆ,' ಎಂದು ಹೇಳಿದರು.
ಟ್ರೋಲಿಗರಿಗೆ ಶ್ರೇಯಾಂಕಾ ಕ್ಲಾಸ್
'ನನ್ನ ಮೇಲೆ ನನಗೆ ಸಂಪೂರ್ಣ ಆತ್ಮವಿಶ್ವಾಸವಿದೆ, ಆದ್ದರಿಂದ ಈ ಮಾತನ್ನು ಹೇಳಲು ನನಗೇನೂ ನಾಚಿಕೆ ಇಲ್ಲ. ಯಾವುದೇ ಹಾಡಿಗೆ ನೃತ್ಯ ಮಾಡಲು ಮತ್ತು ಸಂತೋಷ ನೀಡುವ ಕೆಲಸವನ್ನು ಮಾಡಲು ಇಷ್ಟಪಡುತ್ತೇನೆ. ನಾನು ಪ್ರೀತಿಸುವ ಕೆಲಸವನ್ನು ಮಾಡಲು ನನಗೆ ಇಷ್ಟ ಮತ್ತು ಟ್ರೋಲ್ ಮಾಡುವವರು ಟ್ರೋಲ್‌ಗಳಾಗಿಯೇ ಉಳಿಯುತ್ತಾರೆ. ಚೆನ್ನಾಗಿ ಬೆಳೆಯುತ್ತಿರುವುದನ್ನು ನೋಡಿ ಬಹುಶಃ ಅವರಿಗೆ ಅಸೂಯೆ ಆಗಿರಬಹುದು ಅಷ್ಟೇ,' ಎಂದು ಹೇಳುವ ಮೂಲಕ ಶ್ರೇಯಾಂಕಾ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
ಶ್ರೇಯಾಂಕಾ ಪಾಟೀಲ್ ಅವರು ಕಳೆದ ಕೆಲ ತಿಂಗಳುಗಳಿಂದ ಆಟದಿಂದ ದೂರ ಉಳಿದಿದ್ದಾರೆ. ಗಾಯದ ಕಾರಣದಿಂದಾಗಿ ಮುಂಬರುವ ಮಹಿಳಾ ಏಷ್ಯಾ ಕಪ್‌ಗೂ ಗೈರಾಗಲಿದ್ದಾರೆ. ಆದರೂ ಸಹ 2026ರ ಏಷ್ಯನ್ ಗೇಮ್ಸ್‌ಗಾಗಿ ಪ್ರಕಟಿಸಲಾದ ಭಾರತೀಯ ತಂಡದಲ್ಲಿ ಅವರ ಹೆಸರನ್ನು ಸೇರಿಸಲಾಗಿದೆ. ಆದ್ದರಿಂದ ಅಷ್ಟರೊಳಗೆ ಚೇತರಿಸಿಕೊಂಡರೆ ಅವರು ಮತ್ತೆ ಕಣಕ್ಕಿಳಿಯುವ ಸಾಧ್ಯತೆಯಿದೆ ಎಂದು ಹಳಲಾಗುತ್ತಿದೆ.


Click it and Unblock the Notifications
