ಕ್ರಿಕೆಟ್ ತೊರೆಯುವ ನಿರ್ಧಾರ.. ಟೀಮ್ ಇಂಡಿಯಾ ಸ್ಟಾರ್ ಆಟಗಾರ್ತಿ, ಕನ್ನಡತಿ ಶ್ರೇಯಾಂಕಾ ಪಾಟೀಲ್ ಅಚ್ಚರಿ ಮಾಹಿತಿ ರಿವೀಲ್
Shreyanka Patil: ಇತ್ತೀಚೆಗಷ್ಟೇ ಮಹಿಳಾ ಟಿ20 ವಿಶ್ವಕಪ್ 2026ರ ತನ್ನ ಉದ್ಘಾಟನಾ ಪಂದ್ಯದಲ್ಲೇ ಟೀಮ್ ಇಂಡಿಯಾವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾದ ವಿರುದ್ಧ ಗೆಲುವು ಸಾಧಿಸಿ ಭರ್ಜರಿ ಶುಭಾರಂಭ ಮಾಡಿದೆ. ಇದರ ಬೆನ್ನಲ್ಲೇ ಭಾರತ ತಂಡದ ಸ್ಟಾರ್ ಆಟಗಾರ್ತಿ, ಕನ್ನಡತಿ ಶ್ರೇಯಾಂಕಾ ಪಾಟೀಲ್ ಅವರು ಕ್ರಿಕೆಟ್ ಬಿಡುವ ಆಲೋಚನೆ ಕುರಿತು ಅಚ್ಚರಿ ಮಾಹಿತಿಯನ್ನು ರಿವೀಲ್ ಮಾಡಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಭಾನುವಾರ (ಜೂನ್ 14) ನಡೆದ ಮಹಿಳೆಯರ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ 64 ರನ್‌ಗಳ ಜಯ ಸಾಧಿಸಿತು. ಈ ಗೆಲುವಿಗೆ ಪ್ರಮುಖ ಕಾರಣ ಟೀಮ್ ಇಂಡಿಯಾ ತಂಡದ ಆಲ್‌ರೌಂಡರ್ ಪ್ರದರ್ಶನ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾವು ಉಪನಾಯಕಿ ಸ್ಮೃತಿ ಮಂದಾನ, ನಾಯಕಿ ಹರ್ಮನ್‌ಪ್ರೀತ್ ಕೌರ್ ರಿಚಾ ಘೋಷ್ ಆಕ್ರಣಕಾರಿ ಆಟದಿಂದ 170 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

ಶ್ರೇಯಾಂಕಾ ಹಿಡಿದ ಕ್ಯಾಚ್ ವಿಡಿಯೋ ವೈರಲ್
ಟೀಮ್ ಇಂಡಿಯಾ ನೀಡಿದ 171 ರನ್‌ಗಳ ಬೃಹತ್ ಗುರಿಯನ್ನು ಮುಟ್ಟಲಾಗದೆ ಪಾಕಿಸ್ತಾನ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಆಲೌಟ್ ಆಗಿ ಭಾರತಕ್ಕೆ ಶರಣಾಯಿತು. ಭಾರತದ ಪರ ಬೌಲಿಂಗ್‌ನಲ್ಲಿ ದೀಪ್ತಿ ಶರ್ಮಾ 5 ವಿಕೆಟ್ ಪಡೆದು ಪಾಕಿಸ್ತಾನದ ಬ್ಯಾಟರ್‌ಗಳ ರನ್ ವೇಗಕ್ಕೆ ಕಡಿವಾಣ ಹಾಕಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದು.
ಮತ್ತೊಂದೆಡೆ ಭಾರತ ತಂಡವು ಫೀಲ್ಡಿಂಗ್‌ನಲ್ಲೂ ಕೂಡ ಉತ್ತಮ ಪ್ರದರ್ಶನ ತೋರಿತು. ಅದರಲ್ಲೂ ಶ್ರೀಚರಣಿ ಬೌಲಿಂಗ್‌ನಲ್ಲಿ ಶ್ರೇಯಾಂಕಾ ಪಾಟೀಲ್ ಹಿಡಿದ ಕ್ಯಾಚ್ ಪಂದ್ಯದ ಗತಿಯನ್ನೇ ಬದಲಿಸಿತು. ಇವರ ಈ ಅದ್ಭುತ ಕ್ಯಾಚ್ ವಿಡಿಯೋ ಈಗಲೂ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ನಡುವೆಯೇ ಅವರು ಅಚ್ಚರಿ ಮಾಹಿತಿಯನ್ನು ಬಹಿರಂಗಪಡಿಸಿ ಗಮನ ಸೆಳೆದಿದ್ದಾರೆ.
'ಕ್ರಿಕೆಟ್ ಬಿಡುವ ಆಲೋಚನೆ'
ಪಾಕಿಸ್ತಾನದ ವಿರುದ್ಧ ಟೀಂಮ್ ಇಂಡಿಯಾ ಪರ ಆಕ್ರಮಣಕಾರಿ ಬೌಲಿಂಗ್ ಪ್ರದರ್ಶಿಸಿದ ಶ್ರೇಯಾಂಕಾ ಅವರು, ಕಷ್ಟದ ಪರಿಸ್ಥಿತಿಯಿಂದ ಹೊರಬರಲು ಮತ್ತು ಮತ್ತೆ ರಾಷ್ಟ್ರೀಯ ತಂಡಕ್ಕೆ ಕಮ್‌ಬ್ಯಾಕ್ ಮಾಡಲು ತಮ್ಮ ಕುಟುಂಬದ ಬಲವಾದ ಬೆಂಬಲವೇ ಕಾರಣ ಎಂದು ತಿಳಿಸಿದ್ದಾರೆ. ಇದೇ ವೇಳೆ ಅವರು, ಗಾಯದ ಕಾರಣದಿಂದಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಕಠಿಣ ದಿನಗಳಲ್ಲಿ ತಮಗೆ ಖಿನ್ನತೆ ಕಾಡಿತ್ತು. ಆಗ ಕ್ರಿಕೆಟ್ ಬಿಡುವ ಆಲೋಚನೆಯೂ ಬಂದಿತ್ತು ಎಂದು ಬಹಿರಂಗಪಡಿಸಿದ್ದಾರೆ.
ಗಾಯದಿಂದ ಹೊರಗುಳಿದಿದ್ದ ಶ್ರೇಯಾಂಕಾ
ಜುಲೈ 2024ರಲ್ಲಿ ಪಾಕಿಸ್ತಾನದ ವಿರುದ್ಧದ ಏಷ್ಯಾ ಕಪ್ ಪಂದ್ಯದ ವೇಳೆ ಶ್ರೇಯಾಂಕಾ ಅವರ ಬೆರಳಿಗೆ ಗಾಯಕ್ಕೆ ಒಳಗಾಗಿದ್ದರು. ಇದರಿಂದಾಗಿ ಅವರು ಸುಮಾರು 14 ತಿಂಗಳುಗಳ ಕಾಲ ಮೈದಾನದಿಂದ ಹೊರಗುಳಿಯಬೇಕಾಯಿತು. ಅವರ ಗಾಯದ ಸಮಸ್ಯೆಗಳು ಅಷ್ಟಕ್ಕೇ ನಿಲ್ಲದೆ, ಎರಡೂ ಕಾಲುಗಳ ತೀವ್ರವಾದ ನೋವು ಮತ್ತು ಎಡಗೈ ಹೆಬ್ಬೆರಳಿನ ಗಾಯಕ್ಕೂ ಒಳಗಾಗಿದ್ದರು. ಈ ಎಲ್ಲಾ ಕಷ್ಟಗಳನ್ನು ಮೆಟ್ಟಿ ನಿಂತ ಅವರು ಈ ವರ್ಷದ ಆರಂಭದಲ್ಲಿ ನಡೆದ ಡಬ್ಲ್ಯೂಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುವ ಮೂಲಕ ಕೊನೆಗೂ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದರು.
ಕಷ್ಟದ ದಿನಗಳನ್ನ ನೆನೆದ ಶ್ರೇಯಾಂಕಾ
'ನನಗೆ ಖಿನ್ನತೆಯಾಗಿರಲಿಲ್ಲ ಅಥವಾ ನಾನು ಕ್ರಿಕೆಟ್ ಕೈಬಿಡುವ ಬಗ್ಗೆ ಯೋಚಿಸಿರಲಿಲ್ಲ ಎಂದು ಹೇಳಿದರೆ ಅದು ಸುಳ್ಳಾಗುತ್ತದೆ. ಗಾಯದ ಸಮಸ್ಯೆಯ ಆರಂಭದ ದಿನಗಳಲ್ಲಿ ನನಗೆ ಹಾಗೆಯೇ ಅನಿಸಿತ್ತು. ಆದರೆ ಏನೇ ಆದರೂ ಸರಿ, ನನಗೆ ಈ ಕ್ರೀಡೆಯನ್ನು ಆಡುವುದೆಂದರೆ ಪ್ರಾಣ. ನಾನು ಇಲ್ಲಿರುವುದೇ ಈ ಆಟ ಆಡಲು ಇಷ್ಟ ಇರುವುದರಿಂದ ಎಂದು ಮನಸು ಹೇಳುತ್ತಲಿತ್ತು,' ಎಂದು ಶ್ರೇಯಾಂಕಾ ಜಿಯೋಸ್ಟಾರ್‌ನಲ್ಲಿ ತಿಳಿಸಿದ್ದಾರೆ.
'ಆದ್ದರಿಂದ ನಾನು ಇಷ್ಟಪಟ್ಟು ಮಾಡುವ ಕೆಲಸವನ್ನು ಅರ್ಧಕ್ಕೇ ಬಿಡಲು ನನಗಿಷ್ಟವಿರಲಿಲ್ಲ. ನಾನು ಧೃತಿಗೆಡದೆ ಮುನ್ನಡೆದೆ, ನನ್ನ ತಂದೆ ಸದಾ ನನ್ನೊಂದಿಗೆ ಮಾತನಾಡುತ್ತಾ ಧೈರ್ಯ ತುಂಬುತ್ತಿದ್ದರು ಮತ್ತು ನನ್ನ ಕುಟುಂಬದವರು ಸಂಪೂರ್ಣ ಬೆಂಬಲ ನೀಡಿದರು. ಸುತ್ತಮುತ್ತಲ ವಾತಾವರಣ, ನನ್ನನ್ನು ಸದಾ ಸುತ್ತುವರೆದಿದ್ದ ವ್ಯಕ್ತಿಗಳ ಬಲವಾದ ಬೆಂಬಲವೇ ಧೃತಿಗೆಡದೆ ಮುಂದುವರಿಯುವಂತೆ ಮಾಡಿತು,' ಎಂದು ಅವರು ಹೇಳಿದರು.
ಅತ್ಯುತ್ತಮ ಬೌಲಿಂಗ್ ಪ್ರದರ್ಶನ
'ನನಗೆ ಈಗ ಮತ್ತೆ ಮೈದಾನಕ್ಕೆ ಮರಳಿರುವುದು ತುಂಬಾ ಸಂತೋಷ ತಂದಿದೆ. ಈ ಭಾವನೆಯನ್ನು ನಾನು ಎಂದಿಗೂ ಕೈಬಿಡುವುದಿಲ್ಲ,' ಎಂದು ಶ್ರೇಯಾಂಕಾ ಹೇಳಿದರು. ಇನ್ನೂ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ತಂಡ 170 ರನ್‌ಗಳ ಮೊತ್ತವನ್ನು ಸುಲಭವಾಗಿ ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾದ ಈ ಪಂದ್ಯದಲ್ಲಿ ಅವರು ಮೂರು ಓವರ್‌ಗಳಲ್ಲಿ ಕೇವಲ 17 ರನ್ ನೀಡಿ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ್ದರು.
'ಪವರ್‌ಪ್ಲೇನಲ್ಲಿ ಬೌಲಿಂಗ್ ಮಾಡುವುದೆಂದರೆ ಇಷ್ಟ'
'ನಾನು ಯಾವಾಗಲೂ ಪವರ್‌ಪ್ಲೇನಲ್ಲಿ ಬೌಲಿಂಗ್ ಮಾಡುವುದನ್ನು ಆನಂದಿಸುತ್ತೇನೆ. ಅದು ನನ್ನ ರಾಜ್ಯದ ತಂಡವಾಗಿರಲಿ ಅಥವಾ ಭಾರತ ತಂಡವಾಗಿರಲಿ, ಒತ್ತಡದ ಪರಿಸ್ಥಿತಿಯಲ್ಲಿ ಬೌಲಿಂಗ್ ಮಾಡುವುದು ನನಗೆ ತುಂಬಾ ಇಷ್ಟ. ಅದನ್ನು ಯಶಸ್ವಿಯಾಗಿ ನಿರ್ವಹಿಸುವ ಧೈರ್ಯ ನನಗಿದೆ. ನಾನು ಇದನ್ನು ಹಲವು ಬಾರಿ ಉತ್ತಮವಾಗಿ ಮಾಡಿದ್ದೇನೆ,' ಎಂದು ಹೇಳಿದರು.
'ಸುಲಭ ಗೆಲುವಿನಿಂದ ತುಂಬಾ ಸಂತಸವಾಗಿದೆ'
'ಎಡಗೈ ಬ್ಯಾಟರ್ ವಿರುದ್ಧ ಬೌಲಿಂಗ್ ಮಾಡುವುದು ನನಗೆ ತುಂಬಾ ಇಷ್ಟವಾಯಿತು. ನಾವು ಒಂದೆರಡು ಅವಕಾಶಗಳನ್ನು ಕೈಚೆಲ್ಲಿದ್ದೆವು, ಆದರೆ ದೀಪ್ತಿ ಶರ್ಮಾ ಅವರ ಐದು ವಿಕೆಟ್‌ಗಳ ಸಾಧನೆ ಎಲ್ಲವನ್ನೂ ಸರಿದೂಗಿಸಿತು. ಟೂರ್ನಿಯನ್ನು ಇಷ್ಟು ಸುಲಭ ಗೆಲುವಿನೊಂದಿಗೆ ಆರಂಭಿಸಿರುವುದು ನಮಗೆ ತುಂಬಾ ಸಂತಸ ತಂದಿದೆ. ಅದೂ ಕೂಡ ಭರ್ಜರಿ ಅಂತರದ ಗೆಲುವು ಸಾಧಿಸಿರುವುದು ವಿಶೇಷ,' ಎಂದು ಅವರು ಹೇಳಿದರು.
ಮಹಿಳಾ ವಿಶ್ವಕಪ್‌ನ ಹಾಲಿ ಚಾಂಪಿಯನ್ ಆಗಿರುವ ಭಾರತ ತಂಡ, ಪಾಕಿಸ್ತಾನದ ವಿರುದ್ಧ ಭರ್ಜರಿ ಜಯ ಗಳಿಸಿದ್ದರೂ ಸಹ ಜಾಗರೂಕತೆಯಿಂದ ಇರಬೇಕು ಎಂದು ಶ್ರೇಯಾಂಕಾ ಒತ್ತಿ ಹೇಳಿದ್ದಾರೆ. ಏಕೆಂದರೆ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾದಂತಹ ಬಲಿಷ್ಠ ಎದುರಾಳಿಗಳು ಕಾಯುತ್ತಿದ್ದಾರೆ ಎಂಬುದನ್ನು ಅವರು ನೆನಪಿಸಿದ್ದಾರೆ. 'ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಕೂಡ ಅಗ್ರ ತಂಡಗಳು ಎಂಬುದು ನಮಗೆ ಗೊತ್ತು. ಇದು ವಿಶ್ವಕಪ್ ಆಗಿರುವುದರಿಂದ ಇಲ್ಲಿ ಏನು ಬೇಕಾದರೂ ಆಗಬಹುದು. ಯಾವುದನ್ನೂ ಊಹಿಸಲು ಸಾಧ್ಯವಿಲ್ಲ. ಆದ್ದರಿಂದ ಪಂದ್ಯ ನಡೆಯುವ ದಿನದಂದು ಅತ್ಯುತ್ತಮ ಪ್ರದರ್ಶನ ನೀಡಬೇಕಾಗುತ್ತದೆ. ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದರೆ ಅಂತಿಮವಾಗಿ ಗೆಲುವು ನಿಮ್ಮದಾಗುತ್ತದೆ,' ಎಂದು ಅವರು ಹೇಳಿದರು. ಒಟ್ಟಿನಲ್ಲಿ ಅವರು ಕ್ರಿಕೆಟ್ ಬಿಡುವ ಆಲೋಚನೆಯ ಹೇಳಿಕೆ ಇದೀಗ ಸಖತ್ ಸದ್ದು ಮಾಡುತ್ತಿದೆ.












Click it and Unblock the Notifications