Shreyanka Patil: ಹೊರಗಡೆ ನಗುತ್ತಿದ್ದರೂ ಒಳಗೆ ತುಂಬಾ ಸಂಕಟ ಆಗುತ್ತಿದೆ ಎಂದ ಶ್ರೇಯಾಂಕಾ ಪಾಟೀಲ್
ಕನ್ನಡತಿ ಶ್ರೇಯಾಂಕಾ ಪಾಟೀಲ್ ಗಾಯದ ಸಮಸ್ಯೆಯಿಂದ ಈ ಬಾರಿ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆಡದೇ ಹೊರಗುಳಿದಿದ್ದು ಕನ್ನಡಿಗರಿಗೆ ಬೇಸರ ತರಿಸಿದೆ. 2024ರ ಆವೃತ್ತಿಯಲ್ಲಿ ಎದುರಾಳಿಗಳನ್ನು ಸ್ಪಿನ್ ಮೂಲಕ ಇನ್ನಿಲ್ಲದಂತೆ ಕಾಡಿದ್ದ ಶ್ರೇಯಾಂಕಾ ಅತಿ ಹೆಚ್ಚು ವಿಕೆಟ್ ಪಡೆದು, ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದರು. ಆದರೆ ಈ ಬಾರಿ ಕನ್ನಡತಿಯನ್ನು ಆರ್ ಸಿಬಿ ಅಭಿಮಾನಿಗಳು ತುಂಬಾ ಮಿಸ್ ಮಾಡಿಕೊಂಡಿದ್ದಾರೆ. ಶ್ರೇಯಾಂಕಾ ಪಾಟೀಲ್ ಕೂಡ ಆರ್ ಸಿಬಿಗಾಗಿ ಆಡುವುದನ್ನು ತುಂಬಾ ಮಿಸ್ ಮಾಡಿಕೊಂಡಿದ್ದಾರೆ.
ಈ ಬಾರಿ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್ ಸಿಬಿ ಮೊದಲ ಎರಡು ಪಂದ್ಯಗಳನ್ನು ಗೆದ್ದು ಚಾಂಪಿಯನ್ನರಂತೆ ಆರಂಭ ಪಡೆದುಕೊಂಡಿತ್ತು. ಆದರೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸತತ ನಾಲ್ಕು ಪಂದ್ಯಗಳನ್ನು ಸೋಲುವ ಮೂಲಕ ನಿರಾಸೆ ಅನುಭವಿಸಿದ್ದು ಇದೀಗ ಪ್ಲೇ ಆಫ್ ತಲುಪುವುದು ಕೂಡ ಕಠಿಣವಾಗಿದೆ.

ಬೆಂಗಳೂರಿನಲ್ಲಿ ಆರ್ ಸಿಬಿ ಆಡಿದ ಪ್ರತಿ ಪಂದ್ಯದಲ್ಲೂ ಶ್ರೇಯಾಂಕಾ ಪಾಟೀಲ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಜರಿದ್ದು ಬೆಂಬಲ ಕೊಟ್ಟಿದ್ದರು. ಆದರೆ ನಾಲ್ಕೂ ಪಂದ್ಯಗಳಲ್ಲಿ ಆರ್ ಸಿಬಿ ಸೋತಿರುವುದು ಇಲ್ಲಿನ ಅಭಿಮಾನಿಗಳಿಗೆ ಮಾತ್ರವಲ್ಲ ಶ್ರೇಯಾಂಕಾ ಪಾಟೀಲ್ ಅವರಿಗೂ ಬೇಸರ ತರಿಸಿದೆ.
ಒಳಗೆ ತುಂಬಾ ಸಂಕಟ ಆಗುತ್ತಿದೆ!
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ ಸಿಬಿ ಸೋತ ಬಳಿಕ ಮುಂದಿನ ಪಂದ್ಯವನ್ನು ಲಕ್ನೋದಲ್ಲಿ ಯಿಪಿ ವಾರಿಯರ್ಸ್ ವಿರುದ್ಧ ಆಡಲಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಶ್ರೇಯಾಂಕಾ ಪಾಟೀಲ್ ತುಂಬಾ ಸಂಕಟ ಆಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
"ಹೊರಗೆ ನಗುತ್ತಿದ್ದರೂ ಒಳಗೆ ತುಂಬಾ ನೋವಾಗುತ್ತಿದೆ. ಆಟವಾಡಲು ಸಾಧ್ಯವಾಗದಿರುವುದು, ನನ್ನ ಮನೆಯ ಪ್ರೇಕ್ಷಕರ ಮುಂದೆ ನನ್ನ ಸ್ನೇಹಿತರೊಂದಿಗೆ ಜಗಳವಾಡಲು ಸಾಧ್ಯವಾಗದಿರುವ ನೋವನ್ನು ಹೇಳುವುದು ತುಂಬಾ ಕಷ್ಟ. ಲವ್ಯೂ ಬೆಂಗಳೂರು" ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ.
ಆರ್ ಸಿಬಿ ಬೌಲಿಂಗ್ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡುತ್ತಿಲ್ಲ. ಆಶಾ ಶೋಭನಾ, ಶ್ರೇಯಾಂಕಾ ಪಾಟೀಲ್ ಅನುಪಸ್ಥಿತಿ ತಂಡವನ್ನು ತುಂಬಾ ಕಾಡುತ್ತಿದೆ. ಬ್ಯಾಟಿಂಗ್ ಉತ್ತಮವಾಗಿದ್ದರೂ ಸತತವಾಗಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದು, ಆರ್ ಸಿಬಿ ಬೌಲಿಂಗ್ ಅದನ್ನು ಡಿಫೆಂಡ್ ಮಾಡಿಕೊಳ್ಳಲು ವಿಫಲವಾಗಿದ್ದೇ ತಂಡಕ್ಕೆ ದೊಡ್ಡ ಹಿನ್ನಡೆಯಾಗಲು ಕಾರಣವಾಗಿದೆ.
ಆರ್ ಸಿಬಿ ಇನ್ನು ಎರಡು ಪಂದ್ಯಗಳನ್ನು ಆಡಲಿದ್ದು ಯುಪಿ ವಾರಿಯರ್ಸ್ ಮತ್ತು ಮುಂಬೈ ಇಂಡಿಯನ್ಸ್ ಅನ್ನು ಎದುರಿಸಲಿದೆ. ಈ ಎರಡೂ ಪಂದ್ಯಗಳಲ್ಲಿ ದೊಡ್ಡ ಗೆಲುವು ಸಾಧಿಸಿ ರನ್ ರೇಟ್ ಉತ್ತಮ ಪಡಿಸಿಕೊಂಡರೆ ಮಾತ್ರ ಆರ್ ಸಿಬಿಗೆ ಪ್ಲೇ ಆಫ್ ತಲುಪಲು ಒಂದು ಅವಕಾಶ ಇರುತ್ತದೆ.












Click it and Unblock the Notifications