ಗಾಯದ ಚೇತರಿಕೆಯ ಬಳಿಕ ಭರ್ಜರಿ ಕಮ್‌ಬ್ಯಾಕ್: ಏಷ್ಯನ್ ಗೇಮ್ಸ್‌ನ ಅನುಭವ ಬಿಚ್ಚಿಟ್ಟ ಕನ್ನಡತಿ ಶ್ರೇಯಾಂಕಾ ಪಾಟೀಲ್
Shreyanka Patil: ಏಷ್ಯನ್ ಗೇಮ್ಸ್ 2026ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡು ದೇಶಕ್ಕೆ ಹೆಮ್ಮೆ ತಂದಿದೆ. ಈ ಗೆಲುವಿನ ಸಂಭ್ರಮ ಹಾಗೂ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಮೈದಾನಕ್ಕೆ ಮರಳಿದ ಕುರಿತು ಆರ್‌ಸಿಬಿ ಟಗರುಪುಟ್ಟು ಅಂತಲೇ ಹೆಸರುವಾಸಿಯಾಗಿರುವ ಕನ್ನಡತಿ ಶ್ರೇಯಾಂಕಾ ಪಾಟೀಲ್ ಅವರು ಮನದಾಳದ ಮತುಗಳನ್ನಯ ಬಿಚ್ಚಿಟ್ಟಿದ್ದಾರೆ.
ಏಷ್ಯನ್ ಗೇಮ್ಸ್‌ನಲ್ಲಿ ಗೆದ್ದು ರಾಜ್ಯದ ಕೀರ್ತಿ ಪತಾಕೆಯನ್ನು ಹಾರಿಸಿದ ಕ್ರೀಡಾಪಟುಗಳಿಗೆ ಬೆಂಗಳೂರಿನ ವಿಧಾನಸೌಧದಲ್ಲಿ ರಾಜ್ಯ ಸರ್ಕಾರದಿಂದ ಸನ್ಮಾನ ಕಾರ್ಯಕ್ರಮವನ್ನು ಇಟ್ಟುಕೊಳ್ಳಲಾಗಿತ್ತು. ಈ ವೇಳೆ ಟೀಮ್ ಇಂಡಿಯಾ ಹಾಗೂ ಆರ್‌ಸಿಬಿ ಸ್ಟಾರ್ ಪ್ಲೇಯರ್ ಶ್ರೇಯಾಂಕಾ ಪಾಟೀಲ್ ಕೂಡ ಇದ್ದು, ಮಾಧ್ಯಮಗಳೊಂದಿಗೆ ಅವರು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

ಶ್ರೇಯಾಂಕಾ ಪಾಟೀಲ್ ಹೇಳಿದ್ದೇನು?
ಟಿ20 ವಿಶ್ವಕಪ್ ಪಂದ್ಯಾವಳಿಯ ಸಂದರ್ಭದಲ್ಲಿ ತೀವ್ರ ಗಾಯದ ಸಮಸ್ಯೆಗೆ ಒಳಗಾಗಿದ್ದ ಶ್ರೇಯಾಂಕಾ ಪಾಟೀಲ್ ಅವರು ಬರೋಬ್ಬರಿ ನಾಲ್ಕು ತಿಂಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಯಿತು. ಈ ಕುರಿತು ಮಾತನಾಡಿದ ಅವರು, 'ಗಾಯಗೊಂಡ ನಂತರ ನಾಲ್ಕು ತಿಂಗಳು ಯಾವುದೇ ಪಂದ್ಯ ಆಡಲು ಸಾಧ್ಯವಾಗಿರಲಿಲ್ಲ. ಆದರೆ ಗಾಯದಿಂದ ಚೇತರಿಸಿಕೊಂಡ ಬಳಿಕ ನನಗೆ ಸಿಕ್ಕ ಮೊದಲ ದೊಡ್ಡ ಕಮ್‌ಬ್ಯಾಕ್ ಪಂದ್ಯವೇ ಏಷ್ಯನ್ ಗೇಮ್ಸ್ ಆಗಿತ್ತು. ಈ ಮಹತ್ವದ ಟೂರ್ನಿಯಲ್ಲಿ ಚಿನ್ನ ಗೆದ್ದ ಭಾರತದ ತಂಡದ ಪರ ಇದ್ದಿದ್ದು ಅತ್ಯಂತ ಖುಷಿ ತಂದಿದೆ,' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
'ನನ್ನ ವೃತ್ತಿಜೀವನದ ಮರೆಯಲಾಗದ ಕ್ಷಣ'
ವಿಜೇತರ ವೇದಿಕೆಯಲ್ಲಿ ನಿಂತು ಪದಕ ಸ್ವೀಕರಿಸುವಾಗ ಹಾಗೂ ಭಾರತದ ತ್ರಿವರ್ಣ ಧ್ವಜ ಎತ್ತರಕ್ಕೆ ಸಾಗುತ್ತಿದ್ದ ಕ್ಷಣದ ಬಗ್ಗೆ ಮಾತನಾಡಿ, 'ನಮ್ಮ ದೇಶದ ಧ್ವಜ ಎತ್ತರದಲ್ಲಿ ಹಾರುತ್ತಿರುವುದನ್ನು ನೋಡಿದಾಗ ಆದ ಸಂತಸ ಹಾಗೂ ಹೆಮ್ಮೆಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅದು ನನ್ನ ವೃತ್ತಿಜೀವನದ ಅತ್ಯಂತ ಭಾವುಕ ಮತ್ತು ಮರೆಯಲಾಗದ ಕ್ಷಣವಾಗಿತ್ತು,' ಎಂದು ಅವರು ಸ್ಮರಿಸಿದರು.
ಸರ್ಕಾರದ ಬೆಂಬಲಕ್ಕೆ ಶ್ರೇಯಾಂಕಾ ಮೆಚ್ಚುಗೆ
ಕ್ರೀಡಾಪಟುಗಳನ್ನು ಗೌರವಿಸುವ ಮತ್ತು ಪ್ರೋತ್ಸಾಹಿಸುವ ಸರ್ಕಾರದ ಈ ಹೊಸ ಯೋಜನೆಗಳು ಮತ್ತು ಬೆಂಬಲದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೇಯಾಂಕಾ, 'ಇದು ನಿಜಕ್ಕೂ ಅತ್ಯುತ್ತಮವಾದ ಇನಿಷಿಯೇಟಿವ್. ಕ್ರೀಡಾಪಟುಗಳಿಗೆ ಈ ರೀತಿಯ ಬೆಂಬಲ ಮತ್ತು ಪ್ರೋತ್ಸಾಹ ಸದಾ ಸಿಗುತ್ತಿದ್ದರೆ, ಮುಂಬರುವ ದಿನಗಳಲ್ಲಿ ದೇಶಕ್ಕೆ ಇನ್ನಷ್ಟು ಉತ್ತಮ ಹಾಗೂ ಪ್ರತಿಭಾವಂತ ಆಟಗಾರರು ಉದಯಿಸಲಿದ್ದಾರೆ,' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಂಬರುವ ಸರಣಿಗಳಿಗೆ ತಯಾರಿ ಬಗ್ಗೆ ಮಹತ್ವದ ಹೇಳಿಕೆ
ತಮ್ಮ ಮುಂದಿನ ಕ್ರಿಕೆಟ್ ಯೋಜನೆಗಳ ಬಗ್ಗೆ ಪ್ರಕ್ರಿಯಿಸಿದ ಅವರು, 'ಸದ್ಯಕ್ಕೆ ಜಿಂಬಾಬ್ವೆ ವಿರುದ್ಧ ದ್ವಿಪಕ್ಷೀಯ ಸರಣಿ ನಡೆಯಲಿದ್ದು, ಅದಕ್ಕಾಗಿ ಕಠಿಣ ತಯಾರಿ ನಡೆಸುತ್ತಿದ್ದೇವೆ. ಅಲ್ಲದೆ, ಮಹಿಳಾ ಪ್ರೀಮಿಯರ್ ಲೀಗ್ ಹಾಗೂ ದೇಶೀಯ ಪಂದ್ಯಾವಳಿಗಳು ಸಾಲಾಗಿ ಬರಲಿವೆ. ಈ ಮುಂಬರುವ ಸಂಪೂರ್ಣ ಕ್ರಿಕೆಟ್ ಋತುವಿನಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡು ತಂಡಕ್ಕೆ ಅತ್ಯುತ್ತಮ ಕೊಡುಗೆ ನೀಡಲು ಸಿದ್ಧರಾಗುತ್ತಿದ್ದೇವೆ,' ಎಂದು ಹೇಳಿದರು. ಒಟ್ಟಿನಲ್ಲಿ ಕನ್ನಡತಿ ಶ್ರೇಯಾಂಕಾ ಪಾಟೀಲ್ ಅವರು ಚಿನ್ನ ಗೆದ್ದ ಟೀಮ್ ಇಂಡಿಯಾ ಪರ ಇದ್ದಿದ್ದು ಇಡೀ ಕರ್ನಾಟಕಕ್ಕೆ ಹೆಮ್ಮೆಯ ವಿಷಯ ಅಂದ್ರೆ ತಪ್ಪಾಗಲಾರದು.
ಪದಕ ವಿಜೇತ 8 ಕ್ರೀಡಾಪಟುಗಳು
* ಶ್ರೇಯಾಂಕ ಆರ್. ಪಾಟೀಲ್ (ಕ್ರಿಕೆಟ್ ಮಹಿಳಾ ತಂಡ, ಚಿನ್ನ)
* ಎಂ.ಆರ್. ಪೂವಮ್ಮ (ಅಥ್ಲೆಟಿಕ್ಸ್ 4x400 ಮಿಶ್ರ ರಿಲೇ, 4x400 * ಮಹಿಳಾ ರಿಲೇ ಬೆಳ್ಳಿ ಮತ್ತು ಚಿನ್ನ)
* ತಿಲೋತ್ತಮ ಸೇನ್ (ಶೂಟಿಂಗ್, ಮಹಿಳೆಯರ 50 ಮೀ ರೈಫಲ್, ಬೆಳ್ಳಿ)
* ಆಯುಷ್ ಆರ್ ಶೆಟ್ಟಿ (ಪುರುಷರ ತಂಡ ಬ್ಯಾಡ್ಮಿಂಟನ್, ಬೆಳ್ಳಿ)
* ಸ್ನೇಹಾ ಎಸ್.ಎಸ್. (ಅಥ್ಲೆಟಿಕ್ಸ್ 4x100 ಮಿಶ್ರ ರಿಲೇ ಕಂಚು)
* ಅಧಿತಿ ಅಶೋಕ್ (ಗಾಲ್ಫ್ ಮಹಿಳಾ ತಂಡ, ಬೆಳ್ಳಿ)
* ಪ್ರಣವಿ ಎಸ್. ಅರಸ್ (ಗಾಲ್ಫ್ ಮಹಿಳಾ ತಂಡ, ಬೆಳ್ಳಿ ಹಾಗೂ ವೈಯಕ್ತಿಕ ಚಿನ್ನ)
* ಮೋಹಿತ್ ಹೆಚ್.ಎಸ್. (ಹಾಕಿ ಪುರುಷರ ತಂಡ, ಚಿನ್ನ)


Click it and Unblock the Notifications
