ವೈಭವ್ ಸೂರ್ಯವಂಶಿ ಸಾಮಾನ್ಯ ಕ್ರಿಕೆಟರ್ ಅಲ್ಲ: ಶಿಖರ್ ಧವನ್ ಹೇಳಿಕೆ ಹಿಂದಿಗೆ ಮಹತ್ವದ ಉದ್ದೇಶ
Vaibhav Sooryavanshi: ಟೀಮ್ ಇಂಡಿಯಾ ಉದಯೋನ್ಮುಖ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಗುರುತಿಸಿಕೊಂಡಿದ್ದಾರೆ. ಇದೀಗ ಈ 15 ವರ್ಷದ ಬಾಲಕನ ಆಟದ ಬಗ್ಗೆ ಭಾರತದ ಮಾಜಿ ಕ್ರಿಕೆಟರ್ ಶಿಖರ್ ಧವನ್ ಮಹತ್ವದ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.
ವೈಭವ್ ಸೂರ್ಯವಂಶಿ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ.. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಅವರ ಹೆಸರು ಕೇಳಿದರೆ ಸಾಕು ಕಿವಿ ನೆಟ್ಟಗೆ ಮಾಡಿಕೊಂಡುಬಿಡುತ್ತಾರೆ. ಅಷ್ಟರ ಮಟ್ಟಿಗೆ ಸ್ಪೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಪ್ರಿಯರು, ಅಭಿಮಾನಿಗಳು ಹಾಗೂ ದಿಗ್ಗಜರ ಮನದೊಳಗೆ ನೆಲೆಯೂರಿಬಿಟ್ಟಿದ್ದಾರೆ. ಹಾಗೆಯೇ ಇದೀಗ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಶಿಖರ್ ದವನ್ ಸಹ ಇವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಭಾರತೀಯ ಕ್ರಿಕೆಟ್‌ನ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ ಅವರು, ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ನಿರ್ಭಯ ಆಟವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. 15 ವರ್ಷದ ಯುವ ಆಟಗಾರನೊಬ್ಬ ಅಂತಾರಾಷ್ಟ್ರೀಯ ಮಟ್ಟ ತಲುಪಿ, ಆಕ್ರಮಣಕಾರಿ ಆಟ ಆಡುವುದು ಅತೀ ದೊಡ್ಡ ಸಾಧನೆ ಎಂದು ಬಣ್ಣಿಸಿದ್ದಾರೆ.
ವೈಭವ್ ಸೂರ್ಯವಂಶಿ ಆಟಕ್ಕೆ ಶಿಖರ್ ಧವನ್ ಫಿದಾ
ಎಎನ್‌ಐ ಜೊತೆ ಮಾತನಾಡಿದ ಶಿಖರ್ ಧವನ್ ಅವರು ವೈಭವ್ ಸೂರ್ಯವಂಶಿ ಅವರ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯನ್ನು ಹೊಗಳಿದರು. 'ಆತನ ಬ್ಯಾಟಿಂಗ್ ಶೈಲಿ ಅದ್ಭುತವಾಗಿದೆ. 15 ಅಥವಾ 16ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ವೇದಿಕೆ ತಲುಪುವುದು ಮತ್ತು ಐಪಿಎಲ್‌ನಲ್ಲಿ ಆಡುವುದು ಸಣ್ಣ ವಿಷಯವಲ್ಲ,' ಎಂದು ಹೊಗಳಿದ್ದಾರೆ.
ದೊಡ್ಡ ಭರವಸೆ ನೀಡಿದ ಶಿಖರ್ ಧವನ್
'ವೈಭವ್ ಸೂರ್ಯವಂಶಿ ಬೌಂಡರಿ ಹಾಗೂ ಸಿಕ್ಸರ್‌ಗಳನ್ನು ಬಾರಿಸುವ ರೀತಿ ಅದ್ಭುತವಾಗಿದೆ. ಕ್ರಿಕೆಟ್‌ನಲ್ಲಿ ಕೇವಲ ಕೌಶಲ್ಯ ಇದ್ದರೆ ಸಾಲದು, ಇಂತಹ ದೊಡ್ಡ ವೇದಿಕೆಯಲ್ಲಿ ಆಡುವ ಧೈರ್ಯ ಇರಬೇಕಾಗುತ್ತದೆ. 15 ವರ್ಷದ ಬಾಲಕನದಲ್ಲಿ ಈ ಗುಣ ಇರುವುದು ನಿಜಕ್ಕೂ ಅಪರೂಪ. ಭವಿಷ್ಯದಲ್ಲಿ ಆಟ ಇನ್ನೂ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಲಿದ್ದಾನೆ ಎಂಬ ಭರವಸೆ ನನಗಿದೆ,' ಎಂದು ಧವನ್ ಅಭಿಪ್ರಾಯ ವ್ಯಕ್ತಪಡಿಸಿದರು.
ವಂಡರ್ ಕಿಡ್ ಆಕ್ರಮಣಕಾರಿ ಬ್ಯಾಟಿಂಗ್
ವೈಭವ್ ಸೂರ್ಯವಂಶಿ ಇತ್ತೀಚೆಗಷ್ಟೇ ಜಿಂಬಾಬ್ವೆ ವಿರುದ್ಧ ನಡೆದ ಟಿ20 ಸರಣಿಯಲ್ಲಿ 3 ಪಂದ್ಯಗಳಿಂದ 151 ರನ್ ಗಳಿಸಿ ತಮ್ಮ ಚೊಚ್ಚಲ 'ಸರಣಿ ಶ್ರೇಷ್ಠ' ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಭಾರತ ಈ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು. ಇದಕ್ಕೂ ಮೊದಲು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಚೊಚ್ಚಲ ಪಂದ್ಯ ಆಡುವ ಮೂಲಕ, ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿದ್ದ ವೈಭವ್ ಸೂರ್ಯವಂಶಿ ಅವರು, 237.30 ಸ್ಟ್ರೈಕ್ ರೇಟ್‌ನಲ್ಲಿ 776 ರನ್ ಗಳಿಸಿ ಗಮನ ಸೆಳೆದಿದ್ದರು. ಇದರಲ್ಲಿ ಒಂದು ಶತಕ ಮತ್ತು 5 ಅರ್ಧಶತಕಗಳು ಸೇರಿದ್ದವು. ಆ ಆವೃತ್ತಿಯಲ್ಲಿ ಅತ್ಯಧಿಕ ರನ್ ಕಲೆಹಾಕಿ ಆರೆಂಜ್ ಕ್ಯಾಪ್ ಜೊತೆಗೆ ದಾಖಲೆಯ 72 ಸಿಕ್ಸರ್ ಬಾರಿಸಿದ್ದರು. ಅಲ್ಲದೆ 'ಮೋಸ್ಟ್ ವ್ಯಾಲ್ಯೂಯಬಲ್ ಪ್ಲೇಯರ್, ಸೂಪರ್ ಸ್ಟ್ರೈಕರ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು.
ಅಷ್ಟೇ ಅಲ್ಲದೆ ವರ್ಷದ ಆರಂಭದಲ್ಲಿ ನಡೆದ ಐಸಿಸಿ ಅಂಡರ್-19 ಕ್ರಿಕೆಟ್ ವಿಶ್ವಕಪ್‌ನಲ್ಲೂ 439 ರನ್ ಬಾರಿಸಿ 'ಟೂರ್ನಿಯ ಶ್ರೇಷ್ಠ ಆಟಗಾರ' ಪ್ರಶಸ್ತಿಯನ್ನು ಪಡೆದಿದ್ದರು. ಒಟ್ಟಿನಲ್ಲಿ ಹೇಳುವುದಾದರೆ ಶಿಖರ್ ಧವನ್ ಅವರ ಪ್ರಕಾರ, ವೈಭವ್ ಸೂರ್ಯವಂಶಿ ಕೇವಲ ಪ್ರತಿಭೆಯಲ್ಲ, ಬದಲಿಗೆ ಭಾರತೀಯ ಕ್ರಿಕೆಟ್‌ನ ಭವಿಷ್ಯದ ದ್ರುವತಾರೆ ಆಗುವ ಎಲ್ಲ ಲಕ್ಷಣಗಳನ್ನು ಹೊಂದಿದ್ದಾರೆ. ಈಗಾಗಲೇ ಹಲವು ದಿಗ್ಗಜರು ಕೂಡ ಇದೇ ಭವಿಷ್ಯವನ್ನು ನುಡಿದಿದ್ದಾರೆ.


Click it and Unblock the Notifications
