ಸಹೋದರನ ಜೊತೆ ಒಂದೇ ತಂಡದ ಪರ ಕಣಕ್ಕಿಳಿಯಲು ಸಜ್ಜಾದ ಸಂಜು ಸ್ಯಾಮ್ಸನ್, ಸ್ಯಾಲಿ ಹೇಳಿಕೆ ವೈರಲ್
Saly Samson: ಟೀಮ್ ಇಂಡಿಯಾ ಈ ಬಾರಿ ಟಿ20 ವಿಶ್ವಕಪ್ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದ ಸಂಜು ಸ್ಯಾಮ್ಸನ್ ಅವರನ್ನು ಇದೀಗ ಸತತವಾಗಿ ಸರಣಿಗಳಿಂದ ಹೊರಗಿಡಲಾಗಿದೆ. ಈ ನಡುವೆಯೇ ಅವರ ಸಹೋದರ ಸ್ಯಾಲಿ ಸ್ಯಾಮ್ಸನ್ ಅವರು ಬಿಗ್ ಸ್ಟೇಟ್‌ಮೆಂಟ್ ನೀಡಿ ಗಮನ ಸೆಳೆದಿದ್ದಾರೆ.
ಭಾರತೀಯ ಕ್ರಿಕೆಟ್‌ನ ವಿಕೆಟ್ ಕೀಪರ್, ಸ್ಟಾರ್ ಆಟಗಾರ ಸಂಜು ಸ್ಯಾಮ್ಸನ್ ಅವರ ಸಹೋದರ ಸ್ಯಾಲಿ ಸ್ಯಾಮ್ಸನ್ ಅವರು ಕೇರಳ ಕ್ರಿಕೆಟ್ ಲೀಗ್‌ನ ಮುಂಬರುವ ಆವೃತ್ತಿಯ ಕುರಿತು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಮೈಖೇಲ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಸುಮಾರು 12 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ತನ್ನ ಸಹೋದರ ಸಂಜು ಸ್ಯಾಮ್ಸನ್ ಜೊತೆ ಒಂದೇ ತಂಡದಲ್ಲಿ ಆಡುವ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.

ಒಂದೇ ತಂಡದ ಪರ ಕಣಕ್ಕಿಳಿಯುತ್ತಿರುವ ಸಹೋದರರು
ಕೇರಳ ಕ್ರಿಕೆಟ್ ಲೀಗ್‌ನಲ್ಲಿ ಸಂಜು ಸ್ಯಾಮ್ಸನ್ ಮತ್ತು ಸ್ಯಾಲಿ ಸ್ಯಾಮ್ಸನ್ ಇಬ್ಬರೂ ಕೊಚ್ಚಿ ಬ್ಲೂ ಟೈಗರ್ಸ್ ಫ್ರಾಂಚೈಸಿ ಪರ ಕಣಕ್ಕಿಳಿಯಲಿದ್ದಾರೆ. ಈ ಫ್ರಾಂಚೈಸಿಯು ಕೆಸಿಎಲ್ ಹರಾಜಿನಲ್ಲಿ ಸಂಜು ಅವರನ್ನು ದಾಖಲೆಯ 26.8 ಲಕ್ಷ ರೂಪಾಯಿ ಮೊತ್ತಕ್ಕೆ ಖರೀದಿಸಿದರೆ, ಸ್ಯಾಲಿಯನ್ನು 75,000 ರೂಪಾಯಿ ನೀಡಿ ಬರಮಾಡಿಕೊಂಡಿದೆ.
ಸ್ಯಾಲಿ ಸ್ಯಾಮ್ಸನ್ ಹೇಳಿದ್ದೇನು?
'ನಾವು ಬಾಲ್ಯದಲ್ಲಿ ಹಾಗೂ ಜೂನಿಯರ್ ಹಂತದಲ್ಲಿ ಒಟ್ಟಿಗೆ ಆಡಿದ್ದೆವು. ಆದರೆ ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಒಂದೇ ತಂಡದಲ್ಲಿ ಒಟ್ಟಿಗೆ ಮೈದಾನಕ್ಕಿಳಿಯುವ ಅವಕಾಶ ಸಿಕ್ಕಿರಲಿಲ್ಲ. ಇದೀಗ ಮತ್ತೆ ಸಂಜು ಜೊತೆ ಡ್ರೆಸ್ಸಿಂಗ್ ರೂಮ್ ಮತ್ತು ಮೈದಾನ ಹಂಚಿಕೊಳ್ಳುತ್ತಿರುವುದು ತುಂಬಾ ಸಂತೋಷದ ಅನುಭವ ನೀಡಿದೆ,' ಎಂದು ಸ್ಯಾಲಿ ಸ್ಯಾಮ್ಸನ್ ಅವರು ಹೇಳಿದ್ದಾರೆ.
ಕಷ್ಟದ ದಿನಗಳನ್ನ ನೆನೆದ ಸಂಜು ಸಹೋದರ
ಸ್ಯಾಲಿ ಸ್ಯಾಮ್ಸನ್ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಅತ್ಯುತ್ತಮ ಆಟಗಾರರಾಗಿ ಭರವಸೆ ಮೂಡಿಸಿದ್ದು, ಕೇರಳದ ಜೂನಿಯರ್ ತಂಡಗಳನ್ನೂ ಪ್ರತಿನಿಧಿಸಿದ್ದರು. ಆದರೆ ಗಂಭೀರ ಗಾಯದ ಸಮಸ್ಯೆಯಿಂದಾಗಿ ಅವರು ಸುಮಾರು ನಾಲ್ಕು ವರ್ಷಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಯಿತು. ತಮ್ಮ ಈ ಕಠಿಣ ದಿನಗಳ ಕುರಿತು ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
'ಕ್ರೀಡೆಯಲ್ಲಿ ಗಾಯ, ಹಿನ್ನಡೆಗಳು ಸಹಜ'
'ಪ್ರತಿಯೊಬ್ಬ ಕ್ರೀಡಾಪಟುವಿನ ಜೀವನದಲ್ಲೂ ಗಾಯಗಳು ಮತ್ತು ಹಿನ್ನಡೆಗಳು ಸಹಜ. ನಾನು ಅವುಗಳನ್ನು ಜೀವನದ ಒಂದು ಭಾಗವಾಗಿ ಸ್ವೀಕರಿಸಿದೆ. ಮರಳಿ ಕ್ರಿಕೆಟ್‌ಗೆ ಬಂದಿರುವುದು ಪ್ರದರ್ಶನಕ್ಕಿಂತ ಹೆಚ್ಚಾಗಿ ಆಟದ ಮೇಲಿರುವ ಪ್ರೀತಿಗಾಗಿ. ಈಗ ಸದ್ಯ ನಾನು ಪ್ರತಿ ಕ್ಷಣವನ್ನೂ ಆನಂದಿಸುತ್ತಿದ್ದೇನೆ,' ಎಂದು ಹೇಳಿದ್ದಾರೆ. ಸ್ಯಾಲಿ ಪ್ರಸ್ತುತ ಕ್ರೀಡಾಪಟುವಾಗಿ ಮಾತ್ರವಲ್ಲದೆ ಎಜಿ ಕಚೇರಿಯಲ್ಲಿ ಉದ್ಯೋಗಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಸಾಮಾನ್ಯವಾಗಿ ಸಂಜು ಆಡುವ ಅಂತಾರಾಷ್ಟ್ರೀಯ ಪಂದ್ಯಗಳು ಅಥವಾ ಐಪಿಎಲ್ ಪಂದ್ಯಾವಳಿಗಳಲ್ಲಿ ಅವರ ಕುಟುಂಬಸ್ಥರು ಅಥವಾ ಸ್ಯಾಲಿ ಮೈದಾನದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಈ ಬಗ್ಗೆ ಸ್ಪಷ್ಟನೆ ನೀಡಿದ ಸ್ಯಾಲಿ, 'ನಾವು ಮೈದಾನಕ್ಕೆ ಬಂದಿರದಿಹುದು. ಆದರೆ ಒಳಗಿನಿಂದ ನಮ್ಮಿಬ್ಬರ ನಡುವೆ ಅಪಾರ ಪ್ರೀತಿ ಮತ್ತು ಪರಸ್ಪರ ಗೌರವವಿದೆ. ಹೊರಗಿನ ಜಗತ್ತಿಗೆ ತೋರಿಸಿಕೊಳ್ಳುವುದಕ್ಕಿಂತಲೂ ನಿಶ್ಯಬ್ದವಾಗಿ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುವುದು ನಮ್ಮ ಸಹೋದರತ್ವದ ಶಕ್ತಿ,' ಎಂದು ತಿಳಿಸಿದ್ದಾರೆ. ತಮ್ಮ ಹೋರಾಟದ ಹಂತಗಳನ್ನು ಮೀರಿ ನಿಂತಿರುವ ಸ್ಯಾಲಿ ಅವರು, ಮುಂಬರುವ ಕೆಸಿಎಲ್ ಆವೃತ್ತಿಯಲ್ಲಿ ಕೊಚ್ಚಿ ಬ್ಲೂ ಟೈಗರ್ಸ್ ಪರ ತಮ್ಮ ಸಹೋದರ ಸಂಜು ಅವರೊಂದಿಗೆ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.


Click it and Unblock the Notifications
