RCB VS CSK: ಈ ಸಲ ಕಪ್ ನಮ್ದೆ ಮಗಾ.. ಬರ್ದಿಟ್ಕೋ!
ಆರ್‌ಸಿಬಿ ಬೆಂಗಳೂರು ತಂಡ ಪ್ಲೇಆಫ್ ತಲುಪಿದ್ದು, ಕಪ್ ಗೆಲ್ಲಲು ಇನ್ನು 2 ಹೆಜ್ಜೆ ಮಾತ್ರವೇ ಬಾಕಿ ಉಳಿದಿದೆ. ಚೆನ್ನೈ ತಂಡದ ವಿರುದ್ಧ ಇಂದು ನಡೆದ ನಿರ್ಣಾಯಕ ಪಂದ್ಯದಲ್ಲಿ ನಮ್ಮ ಆರ್‌ಸಿಬಿ ತಂಡ ಭರ್ಜರಿ ಗೆಲುವು ಸಾಧಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ. ಈ ಗೆಲುವಿನ ಮೂಲಕ ಆರ್‌ಸಿಬಿ ತಂಡ ಉಪಾಂತ್ಯ ಪ್ರವೇಶ ಮಾಡಿದ್ದು, ವಿರಾಟ್ ಕೊಹ್ಲಿಯ ಮಾತಿನಂತೆ ಆರ್‌ಸಿಬಿ ಬೆಂಗಳೂರು ತಂಡದಲ್ಲಿ ಈಗ ಹೊಸ ಅಧ್ಯಾಯ ಶುರುವಾಗಿದೆ.
ಹಲವು ದಿನಗಳಿಂದ ಕೂಡ ಆರ್‌ಸಿಬಿ & ಚೆನ್ನೈ ಪಂದ್ಯಕ್ಕೆ ಅಂತಾ ಇಡೀ ದೇಶ ಕಾಯುತ್ತಿದೆ. ಆರ್‌ಸಿಬಿ ತಂಡ ಇಂದು ಟಾಸ್ ಸೋತು ಬ್ಯಾಟಿಂಗ್ ಮಾಡಿತ್ತು. ಟಾಸ್ ಗೆದ್ದ ತಕ್ಷಣ ಚೆನ್ನೈ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಫಾಫ್ ಡುಪ್ಲೆಸಿಸ್ ಜೊತೆಗೆ ಪಂದ್ಯ ಆರಂಭಿಸಿದ್ದ ವಿರಾಟ್ ಕೊಹ್ಲಿ, 47 ರನ್ ಬಾರಿಸಿ ಕೇವಲ 29 ಬಾಲ್ ಬಳಸಿದರು. ಹಾಗೇ ಫಾಫ್ ಡು ಪ್ಲೆಸಿಸ್ ಕೂಡ 39 ಬಾಲ್ ಬಳಸಿ 54 ರನ್ ಬಾರಿಸಿ ಗಮನ ಸೆಳೆದರು.

ವಿರಾಟ್ ಕೊಹ್ಲಿ ಒಟ್ಟು 4 ಸಿಕ್ಸರ್ & 3 ಬೌಂಡರಿ ಬಾರಿಸಿದ್ದು, ಫಾಫ್ ಡು ಪ್ಲೆಸಿಸ್ 3 ಸಿಕ್ಸರ್ & 3 ಬೌಂಡರಿ ಬಾರಿಸಿದ್ದಾರೆ. ಇಬ್ಬರು ಔಟ್ ಆದ ನಂತರ ರಜತ್ ಪಾಟಿದಾರ್, 41 ರನ್ ಗಳಿಸಿ ಮಿಂಚಿದರೆ ಕ್ಯಾಮರೂನ್ ಗ್ರೀನ್ 38 ರನ್ ಚಚ್ಚಿ ಆರ್‌ಸಿಬಿ ತಂಡಕ್ಕೆ ನೆರವಾದರು. ಆರ್‌ಸಿಬಿ ಒಟ್ಟು 218 ರನ್ ಗಳಿಸಿದ್ದು ಈ ಮೂಲಕ ಚೆನ್ನೈ ತಂಡಕ್ಕೆ 219 ರನ್‌ಗಳ ಗುರಿ ನೀಡಿದೆ. ಈ ಪಂದ್ಯವನ್ನು ಆರ್‌ಸಿಬಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿತ್ತು. ಇದೀಗ ಪಂದ್ಯವನ್ನ ಗೆದ್ದು ಹೊಸ ಇತಿಹಾಸ ನಿರ್ಮಿಸಿ ಮುಂದಿನ ಹಂತಕ್ಕೆ ಎಂಟ್ರಿ ಕೊಟ್ಟಿದೆ ಆರ್‌ಸಿಬಿ ತಂಡ.
ಆರಂಭದಲ್ಲೇ ಚೆನ್ನೈ ತಂಡಕ್ಕೆ ಶಾಕ್!
ಆರ್‌ಸಿಬಿ ತಂಡ ನೀಡಿದ್ದ 219 ರನ್‌ಗಳ ಗುರಿ ಬೆನ್ನುಹತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಪರದಾಡಿತ್ತು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್ ಸೊನ್ನೆ ಸುತ್ತಿ, ಡಕ್ ಔಟ್ ಆಗಿ ಪೆವಿಲಿಯನ್ ಗೂಡಿಗೆ ಎಂಟ್ರಿ ಕೊಟ್ಟರು. ಆ ನಂತರ ಬಂದ ಡೇರಿಲ್ ಮಿಚೆಲ್ ಕೂಡ ಜಾಸ್ತಿ ಹೊತ್ತು ನಿಲ್ಲಲೇ ಇಲ್ಲ. ಕೇವಲ 4 ರನ್‌ಗೆ ಡೇರಿಲ್ ಮಿಚೆಲ್ ವಿಕೆಟ್ ಒಪ್ಪಿಸಿ ಹೋದರು.
ಹೀಗಿದ್ದಾಗ ಕನ್ನಡಿಗ ರಚಿನ್ ರವೀಂದ್ರ ಕೇವಲ 37 ಬಾಲ್ ಆಡಿ 61 ರನ್ ಗಳಿಸಿ, 3 ಸಿಕ್ಸರ್ 5 ಬೌಂಡರಿ ಬಾರಿಸಿ ಗಮನ ಸೆಳೆದರು. ಇವರನ್ನ ಬಿಟ್ಟರೆ ರವೀಂದ್ರ ಜಡೇಜಾ 22 ಬಾಲ್‌ಗೆ 42 ರನ್ ಗಳಿಸಿದರು. ಜಡೇಜಾ 3 ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿದರು. ಅಂತಿಮವಾಗಿ ಚೆನ್ನೈ ತಂಡ 191 ರನ್‌ಗೆ ತನ್ನ ಇನ್ನಿಂಗ್ಸ್ ಮುಗಿಸಿತು. ಈ ಮೂಲಕ ಆರ್‌ಸಿಬಿ ತಂಡ 27 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಕ್ರಿಸ್ ಜೊತೆ ರಿಷಬ್ ಪಂದ್ಯ ವೀಕ್ಷಣೆ!
ಗ್ಯಾಲರಿಯಲ್ಲಿ ಕೂತು ಮ್ಯಾಚ್ ನೋಡಿದ ರಿಷಬ್ ಶೆಟ್ಟಿ & ಕ್ರಿಸ್ ಗೇಲ್ ಸಖತ್ ಎಂಜಾಯ್ ಮಾಡಿದ್ರು. ಹೀಗಿದ್ದಾಗ, ಮೊಹಮ್ಮದ್ ಸಿರಾಜ್ ಮ್ಯಾಚ್ ಮುಗಿದ ನಂತರ ಬಂದು ಒಂದು ಸಲ್ಯೂಟ್ ಹಾಕಿದ್ರು. ಕ್ರಿಸ್ ಗೇಲ್ ಹಾಗೂ ರಿಷಬ್ ಶೆಟ್ಟಿ ಅವರನ್ನ ಮಾತನಾಡಿಸಿದರು. ಈ ವಿಡಿಯೋ ಈಗ ಫುಲ್ ವೈರಲ್ ಆಗುತ್ತಿದೆ. ಇದರ ಜೊತೆಗೆ ರಿಷಬ್ ಶೆಟ್ಟಿ ಕೂಡ ಕೈಯಲ್ಲಿ ಆರ್‌ಸಿಬಿ ಬಾವುಟ ಹಿಡಿದು ಕ್ರಿಸ್ ಗೇಲ್ ಅವರ ಜೊತೆಗೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡರು. ಈ ಮೂಲಕ ಕಾಂತಾರ ರಿಷಬ್ ಶೆಟ್ಟಿ ಅವರು ಮತ್ತೊಮ್ಮೆ ಹಲ್‌ಚಲ್ ಎಬ್ಬಿಸಿದ್ದಾರೆ. ಈಗ ರಿಷಬ್ ಶೆಟ್ಟಿ ಅವರು ಆರ್‌ಸಿಬಿ ಮ್ಯಾಚ್ ನೋಡಿರುವ ಫೋಟೋಸ್ ವೈರಲ್ ಆಗುತ್ತಿವೆ.












Click it and Unblock the Notifications