Rohit Sharma: ಅಭಿಮಾನಿಗಳಿಗೆ ಖುಷಿ ಸುದ್ದಿ ಕೊಟ್ಟ ನಾಯಕ ರೋಹಿತ್ ಶರ್ಮಾ
ರೋಹಿತ್ ಶರ್ಮಾ ನಾಯಕರಾಗಿ ಹಲವು ದಾಖಲೆಗಳನ್ನು ಮಾಡಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿದೆ ಅದಕ್ಕೂ ಮೊದಲು 2024ರ ಟಿ20 ವಿಶ್ವಕಪ್‌ನಲ್ಲಿ ಕೂಡ ಭಾರತ ಚಾಂಪಿಯನ್ ಆಗಿತ್ತು. 2023ರಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಅಜೇಯವಾಗಿ ಫೈನಲ್ ತಲುಪಿದ್ದ ಭಾರತ ಆಸ್ಟ್ರೇಲಿಯಾ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು.
ಭಾರತ 2024ರಲ್ಲಿ ಟಿ20 ವಿಶ್ವಕಪ್ ಗೆಲ್ಲುತ್ತಿದ್ದಂತೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಈಗ ಚಾಂಪಿಯನ್ಸ್ ಟ್ರೋಫಿ ಗೆಲ್ಲುತ್ತಿದ್ದಂತೆ ಇವರಿಬ್ಬರೂ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿಬಿಟ್ಟರೆ ಎನ್ನುವ ಆತಂಕ ಅಭಿಮಾನಿಗಳಿಗೆ ಇತ್ತು. ಆದರೆ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಸಂಭ್ರಮಾಚರಣೆ ಮಾಡಿದ ರೋ-ಕೊ ಜೋಡಿ ಅಭಿಮಾನಿಗಳಿಗೆ ಯಾವುದೇ ಆಘಾತ ನೀಡಲಿಲ್ಲ.

ಇದೀಗ ಭಾರತ ತಂಡದ ನಾಯಕ ರೋಹಿತ್ ಶರ್ಮಾ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ. 2027ರ ಏಕದಿನ ವಿಶ್ವಕಪ್‌ನಲ್ಲಿ ಆಡುತ್ತೀರಾ ಎನ್ನುವ ಪ್ರಶ್ನೆಗೂ ಕೂಡ ಉತ್ತರ ಕೊಟ್ಟಿದ್ದಾರೆ. ಸದ್ಯ ರೋಹಿತ್ ಶರ್ಮಾ ಹೇಳಿಕೆ ಅಭಿಮಾನಿಗಳಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ.
ರೋಹಿತ್ ಶರ್ಮಾ ಹೇಳಿದ್ದೇನು?
ಜಿಯೋ ಹಾಟ್‌ಸ್ಟಾರ್ ಜೊತೆ ಮಾತನಾಡಿದ ಅವರು ಸದ್ಯಕ್ಕೆ ಅಂತಾರಾಷ್ಟ್ರೀಯ ಏಕದಿನ ಮಾದರಿಗೆ ನಿವೃತ್ತಿ ಹೇಳಲ್ಲ ಎಂದು ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ರೋಹಿತ್ ಶರ್ಮಾಗೆ ನಿವೃತ್ತಿ ಘೋಷಿಸುವಂತೆ ತಿಳಿಸಿದೆ ಎನ್ನುವ ವರದಿಗಳ ನಡುವೆಯೇ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಟಿ20 ವಿಶ್ವಕಪ್ ಗೆದ್ದ ಬಳಿಕ ನಿವೃತ್ತಿ ಹೊಂದಲು ಸೂಕ್ತ ಸಮಯವಾಗಿತ್ತು, ಆದರೆ ಏಕದಿನ ಮಾದರಿಯಲ್ಲಿ ಇನ್ನೂ ಮಹತ್ವದ ಕೆಲಸವೊಂದು ಬಾಕಿದೆ ಎಂದು ಅವರು ನಂಬಿದ್ದಾರೆ. 2027ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಆಡಲು ರೋಹಿತ್ ಶರ್ಮಾ ಉತ್ಸಾಹ ತೋರಿದ್ದಾರೆ.
ತುಂಬಾ ಮುಂದೆ ಯೋಚನೆ ಮಾಡುವುದು ಸರಿಯಲ್ಲ, ಈ ಕ್ಷಣದಲ್ಲಿ ಉತ್ತಮ ಪ್ರದರ್ಶನ ನೀಡುವುದು ಮತ್ತು ಸರಿಯಾದ ಮನಸ್ಥಿತಿಯನ್ನು ಕಾಪಾಡಿಕೊಳ್ಳುವುದರ ಮೇಲೆ ನಾನು ಗಮನ ನೀಡುತ್ತೇನೆ. 2027ರ ಏಕದಿನ ವಿಶ್ವಕಪ್‌ನಲ್ಲಿ ಆಡುತ್ತೇನಾ ಇಲ್ಲವಾ ಎನ್ನುವುದನ್ನು ಈಗಲೇ ಸ್ಪಷ್ಟವಾಗಿ ಹೇಳಲು ಆಗಲ್ಲ, ಅದರಲ್ಲಿ ಯಾವ ಅರ್ಥವೂ ಇರುವುದಿಲ್ಲ. ವೃತ್ತಿ ಜೀವನದಲ್ಲಿ ಒಂದೊಂದು ಹೆಜ್ಜೆ ಮುಂದಿಡುತ್ತೇನೆ. ಭವಿಷ್ಯದ ಬಗ್ಗೆ ಯೋಚನೆ ಮಾಡುವುದು ನನಗೆ ಇಷ್ಟವಿಲ್ಲ, ಈ ಹಿಂದೆ ಕೂಡ ನಾನು ಅದನ್ನು ಮಾಡಿಲ್ಲ. ಈಗ ನನ್ನ ತಂಡದ ಜೊತೆ ಕಳೆಯುತ್ತಿರುವ ಸಮಯವನ್ನು ಆನಂದಿಸುತ್ತಿದ್ದೇನೆ, ತಂಡದ ಆಟಗಾರರು ಕೂಡ ನನ್ನ ಉಪಸ್ಥಿತಿಯನ್ನು ಇಷ್ಟಪಡುತ್ತಾರೆ ಎಂದು ನಾನು ಭಾವಿಸುತ್ತೇನೆ, ಈಗ ಅದಷ್ಟೆ ಮುಖ್ಯ ಎಂದು ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.
ರೋಹಿತ್ ಕೊಟ್ಟ ಭರವಸೆ ಏನು?
2025ರ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ರೋಹಿತ್ ಮಹತ್ವದ ಹೇಳಿಕೆಯನ್ನು ನೀಡಿದರು. ನಾನು ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವುದಿಲ್ಲ. ಈ ಬಗ್ಗೆ ಯಾವುದೇ ವದಂತಿಗಳನ್ನು ನಂಬಬೇಡಿ. ಈಗ ಏನು ಇದೆಯೋ ಅದು ಹಾಗೆ ಮುಂದುವರೆಯುತ್ತದೆ ಎಂದು ಹೇಳಿದರು.
ಸಾಕಷ್ಟು ಕ್ರಿಕೆಟ್ ಆಡಿರುವ ಆಟಗಾರರಲ್ಲಿ ಕೂಡ ಇನ್ನೂ ಬಹಳಷ್ಟು ಹಸಿವು ಇದೆ ಅದು ಕಿರಿಯ ಆಟಗಾರರ ಮೇಲೂ ಪರಿಣಾಮ ಬೀರುತ್ತದೆ. ನಮ್ಮಲ್ಲಿ ಐದರಿಂದ ಆರು ನಿಜವಾದ ದಿಗ್ಗಜ ಆಟಗಾರರು ಇದ್ದಾರೆ. ಇದರಿಂದ ನಮ್ಮ ಕೆಲಸ ಸುಲಭವಾಯಿತು ಎಂದು ಹೇಳಿದ್ದಾರೆ.
ರೋಹಿತ್ ಶರ್ಮಾಗೆ ಇನ್ನೆರಡು ತಿಂಗಳಿನಲ್ಲಿ 38 ವರ್ಷ ತುಂಬುತ್ತದೆ. ಏಕದಿನ ವಿಶ್ವಕಪ್‌ಗೆ ಇನ್ನೂ ಎರಡು ವರ್ಷ ಸಮವಿದ್ದು ಈ ಬಗ್ಗೆ ಈಗಲೇ ಯೋಜಿಸಿಲ್ಲ ಎಂದು ಹೇಳಿದ್ದಾರೆ. 2023ರ ಏಕದಿನ ವಿಶ್ವಕಪ್‌ನಲ್ಲಿ ಅಜೇಯವಾಗಿ ಫೈನಲ್ ಪ್ರವೇಶಿಸಿದ್ದ ಭಾರತ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿತ್ತು. ಆ ನೋವು ರೋಹಿತ್ ಶರ್ಮಾರನ್ನು ಇನ್ನೂ ಕಾಡುತ್ತಲೇ ಇದೆ. ಆದರೆ ಈಗ ಚಾಂಪಿಯನ್ಸ್ ಟ್ರೋಫಿ ಗೆಲುವು ಆ ಗಾಯಕ್ಕೆ ಮುಲಾಮು ಹಚ್ಚಿದಂತಾಗಿದೆ.
ಐದು ಪಂದ್ಯಗಳಲ್ಲಿ ಟಾಸ್ ಸೋತರೂ ನಾವು ಎಲ್ಲಾ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದೇವೆ, ಮುಖ್ಯವಾಗಿ ನಾನು ಟ್ರೋಫಿ ಗೆದ್ದಿದ್ದೇವೆ. ಒಂದೇ ಒಂದು ಪಂದ್ಯವನ್ನು ಸೋಲದೆ ಟೂರ್ನಮೆಂಟ್‌ನಲ್ಲಿ ಗೆಲ್ಲುವುದು ದೊಡ್ಡ ಸಾಧನೆ, ಅದು ನನಗೆ ಅಪಾರ ತೃಪ್ತಿ ನೀಡುತ್ತದೆ ಎಂದು ಹೇಳಿದರು.
ಬುಮ್ರಾ ಇಲ್ಲದಿದ್ದರೂ ಗೆದ್ದ ಭಾರತ
ನಮ್ಮಲ್ಲಿ ಅತ್ಯುತ್ತಮ ತಂಡವಿದೆ, ಎಲ್ಲರಿಗೂ ಅವರ ಜವಾಬ್ದಾರಿ ಬಗ್ಗೆ ಸ್ಪಷ್ಟನೆ ಇದೆ. ಗೆಲ್ಲುವುದಷ್ಟೇ ನಮಗೆ ಮುಖ್ಯ ಗುರಿಯಾಗಿದೆ. ಜಸ್ಪ್ರೀತ್ ಬುಮ್ರಾ ಇಲ್ಲದೆ ಟೂರ್ನಿಗೆ ಸಜ್ಜಾಗುವುದು ಮುಖ್ಯವಾಗಿತ್ತು, ನಾವು ಇಲ್ಲಿನ ಪಿಚ್‌ಗಳನ್ನು ಅಧ್ಯಯನ ಮಾಡಿದ್ದೇವೆ, ಯಾವ ರೀತಿಯ ಬೌಲರ್ ಬೇಕು ಎನ್ನುವ ಸ್ಪಷ್ಟನೆ ನಮಗೆ ಇತ್ತು, ಅದಕ್ಕೆ ಅನುಗುಣವಾಗಿ ತಂಡವನ್ನು ಆಯ್ಕೆ ಮಾಡಲಾಗಿತ್ತು ಎಂದು ಹೇಳಿದರು.
ನಿವೃತ್ತಿಯಾಗಲ್ಲ ಎಂದ ಜಡೇಜಾ
ಇನ್ನು ಫೈನಲ್ ಪಂದ್ಯದ ವೇಳೆಯೇ ವಿರಾಟ್ ಕೊಹ್ಲಿ ರವೀಂದ್ರ ಜಡೇಜಾರನ್ನು ಅಪ್ಪಿಕೊಂಡಿದ್ದನ್ನು ನೋಡಿ ಜಡೇಜಾ ನಿವೃತ್ತಿ ಹೊಂದುತ್ತಾರೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಆದರೆ ಸೋಮವಾರ ಇನ್‌ಸ್ಟಾಗ್ರಾಂ ಪೋಸ್ಟ್ ಮೂಲಕ ಜಡೇಜಾ ಇದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ಯಾವುದೇ ವದಂತಿಗಳನ್ನು ನಂಬಬೇಡಿ ನಾನು ನಿವೃತ್ತಿಯಾಗುತ್ತಿಲ್ಲ ಎನ್ನುವ ಮೂಲಕ ಇನ್ನಷ್ಟು ವರ್ಷ ದೇಶಕ್ಕಾಗಿ ಆಡುವ ಇಚ್ಚೆ ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಹೇಳಿದ್ದೇನು?
ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ ಈಗಲೇ ನಿವೃತ್ತಿ ಬಗ್ಗೆ ಯೋಚಿಸಿಲ್ಲ ಎಂದು ಹೇಳಿದ್ದಾರೆ. 2024ರಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದ ಬಳಿಕ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಡೇಜಾ ನಿವೃತ್ತಿ ಘೋಷಣೆ ಮಾಡಿದ್ದು ಅಭಿಮಾನಿಗಳಿಗೆ ದೊಡ್ಡ ಆಘಾತವಾಗಿತ್ತು. ಆದರೆ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ಭಾರತದ ಸ್ಟಾರ್ ಆಟಗಾರರು ನಿವೃತ್ತಿ ಬಗ್ಗೆ ಯೋಚಿಸದೇ ಇರುವುದು ಅಭಿಮಾನಿಗಳಿಗೆ ನೆಮ್ಮದಿ ನೀಡಿದೆ. ನಾನು ನಿವೃತ್ತಿ ಪಡೆದರೆ ಯಾರಿಗೂ ಕಾಣಿಸಿಕೊಳ್ಳಲ್ಲ. ಭಾರತ ತಂಡ ಮುಂದಿನ 8 ವರ್ಷಗಳವರೆಗೆ ಭದ್ರವಾಗಿದೆ, ಯುವ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ಕೊಹ್ಲಿ ಹೇಳಿದ್ದಾರೆ.












Click it and Unblock the Notifications