T20 World Cup: ಹಾರ್ದಿಕ್ ಪಾಂಡ್ಯ ಆಯ್ಕೆಗೆ ರೋಹಿತ್ ಶರ್ಮಾ, ಆಯ್ಕೆಗಾರ ಅಜಿತ್ ಅಗರ್ಕರ್ ವಿರೋಧ
ಐಪಿಎಲ್ 2024ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿದೆ. ನಾಯಕನ ಜವಾಬ್ದಾರಿ ವಹಿಸಿಕೊಂಡ ಹಾರ್ದಿಕ್ ಪಾಂಡ್ಯ, ರೋಹಿತ್, ಸೂರ್ಯ, ಬುಮ್ರಾ ಅವರಂತಹ ಬಲಿಷ್ಠ ಆಟಗಾರರ ಪಡೆಯನ್ನು ಹೊಂದಿದ್ದರೂ, ತಂಡವನ್ನು ಗೆಲ್ಲಿಸುವಲ್ಲಿ ವಿಫಲವಾಗಿದ್ದಾರೆ.
ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ತಂಡದಲ್ಲಿ ಒಗ್ಗಟ್ಟಿಲ್ಲ ಎನ್ನುವುದು ಕೂಡ ಜಗಜ್ಜಾಹೀರಾಗಿದೆ. ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ಕೈತಪ್ಪಿದರು, ಮುಂದಿನ ತಿಂಗಳು ಆರಂಭವಾಗಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.

ಐಪಿಎಲ್‌ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ವಿಫಲವಾಗಿರುವ ಹಾರ್ದಿಕ್ ಪಾಂಡ್ಯ ಟಿ20 ವಿಶ್ವಕಪ್‌ನಲ್ಲಿ ಅವಕಾಶ ಪಡೆದುಕೊಂಡಿದ್ದಲ್ಲದೆ, ಉಪನಾಯಕನ ಜವಾಬ್ದಾರಿ ನೀಡಿರುವುದು ಚರ್ಚೆಗೆ ಕಾರಣವಾಗಿದೆ. ಆದರೆ, ಪಾಂಡ್ಯ ಆಯ್ಕೆಗೆ ಸ್ವತಃ ನಾಯಕ ರೋಹಿತ್ ಮತ್ತು ಆಯ್ಕೆದಾರ ಅಜಿತ್ ಅರ್ಗಕರ್ ವಿರೋಧ ವ್ಯಕ್ತಪಡಿಸಿದ್ದರು ಎಂದು ವರದಿಯಾಗಿದೆ.
ನಾಯಕ, ಆಯ್ಕೆದಾರರ ವಿರೋಧ
ಟಿ20 ವಿಶ್ವಕಪ್‌ಗೆ ಭಾರತದ 15 ಸದಸ್ಯರ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಸೇರ್ಪಡೆಗೆ ನಾಯಕ ರೋಹಿತ್ ಮತ್ತು ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಸೇರಿದಂತೆ ಕೆಲವು ಬಿಸಿಸಿಐ ಆಯ್ಕೆಗಾರರು ವಿರೋಧಿಸಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ ದೈನಿಕ್ ಜಾಗರಣ್ ವರದಿ ತಿಳಿಸಿದೆ.
ಐಪಿಎಲ್ 2024ರಲ್ಲಿ ಹಾರ್ದಿಕ್ ಪಾಂಡ್ಯ 13 ಪಂದ್ಯಗಳಲ್ಲಿ 144.93 ಸ್ಟ್ರೈಕ್ ರೇಟ್‌ನಲ್ಲಿ 200 ರನ್ ಗಳಿಸಿದ್ದಾರೆ ಮತ್ತು 10.59 ರ ಆರ್ಥಿಕತೆಯಲ್ಲಿ 13 ಪಂದ್ಯಗಳಲ್ಲಿ 11 ವಿಕೆಟ್‌ಗಳನ್ನು ಪಡೆದಿದ್ದಾರೆ.
ಒತ್ತಡದಲ್ಲಿ ಪಾಂಡ್ಯ ಅವರನ್ನು ಟಿ20 ವಿಶ್ವಕಪ್‌ಗೆ ಆಯ್ಕೆ ಮಾಡಲಾಗಿದೆ ಎಂದು ವರದಿ ಹೇಳಿದೆ. ಟಿ20 ವಿಶ್ವಕಪ್ ನಂತರ ರೋಹಿತ್ ಟಿ20 ಮಾದರಿಗೆ ವಿದಾಯ ಹೇಳುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ.
ಟಿ20 ವಿಶ್ವಕಪ್ ತಂಡದ ಆಯ್ಕೆಯ ನಂತರ ರೋಹಿತ್ ಮತ್ತು ಅಗರ್ಕರ್ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದಾಗ, ಮುಖ್ಯ ಆಯ್ಕೆದಾರರಿಗೆ ಅವರ ಕಳಪೆ ಫಾರ್ಮ್ ಹೊರತಾಗಿಯೂ ಹಾರ್ದಿಕ್ ಅವರಿಗೆ ತಂಡದಲ್ಲಿ ಅವಕಾಶ ನೀಡಿದ ಬಗ್ಗೆ ಕೇಳಲಾಯಿತು. ಹಾರ್ದಿಕ್ ಪಾಂಡ್ಯಗೆ ಬದಲಿ ಆಟಗಾರರು ಲಭ್ಯವಿಲ್ಲದ ಕಾರಣ, ಆಯ್ಕೆ ಸಮಿತಿ ಅವರಿಗೆ ಮಣೆ ಹಾಕಿದೆ ಎಂದು ಅಗರ್ಕರ್ ವಿವರಣೆ ನೀಡಿದ್ದರು.
ಮುಂಬೈ ಇಂಡಿಯನ್ಸ್ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿದ್ದು, ಭಾರತ ತಂಡಕ್ಕೆ ಆಡುವ ಆಟಗಾರರು ಮುಂಚಿತವಾಗಿಯೇ ವೆಸ್ಟ್ ಇಂಡೀಸ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಟಿ20 ವಿಶ್ವಕಪ್ ಭಾರತ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.












Click it and Unblock the Notifications