ಏಕದಿನ ವಿಶ್ವಕಪ್ 2027: ಟೀಮ್ ಇಂಡಿಯಾದಲ್ಲಿ ವೈಭವ್ ಸೂರ್ಯವಂಶಿಗೆ ಸ್ಥಾನ, ಕೊಡಗಿನ ಉತ್ತಪ್ಪ ಹೆಸರಿಸಿದ ತಂಡ ಹೀಗಿದೆ
Robin Uthappa: ಏಕದಿನ ವರ್ಲ್ಡ್‌ಕಪ್ 2027 ಟೂರ್ನಿಗೆ ತುಂಬಾ ಸಮಯವಿದ್ದರೂ ಸಹ ಈಗಲೇ ತೆರೆಮರೆಯಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ. ಇದೀಗ ಮಾಜಿ ಕ್ರಿಕೆಟರ್, ಕನ್ನಡಿಗ ರಾಬಿನ್ ಉತ್ತಪ್ಪ ಅವರು ಮುಂಬರುವ ಇದೇ ಟೂರ್ನಿಗೆ ತಂಡವನ್ನು ಹೆಸರಿಸಿದ್ದಾರೆ. ಇದರಲ್ಲಿ 15 ವರ್ಷದ ಬಾಲಕ ವೈಭವ್ ಸೂರ್ಯವಂಶಿ ಸ್ಥಾನ ಪಡೆದಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆಯೋಜನೆ ಮಾಡಲಿರುವ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಇನ್ನು ತುಂಬಾ ಸಮಯವಿದೆ. ಆದರೂ ಭಾರತೀಯ ಕ್ರಿಕೆಟ್ ತಂಡದ ಸಂಯೋಜನೆಯ ಕುರಿತು ಚರ್ಚೆಗಳು ಈಗಿನಿಂದಲೇ ಆರಂಭವಾಗಿವೆ. ಈ ಹಿನ್ನೆಲೆಯಲ್ಲಿ ಇದೀಗ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ರಾಬಿನ್ ಉತ್ತಪ್ಪ ಮುಂಬರುವ ಏಕದಿನ ವಿಶ್ವಕಪ್‌ಗಾಗಿ 15 ಸದಸ್ಯರ ಭಾರತೀಯ ತಂಡವನ್ನು ಪ್ರಕಟಿಸಿದ್ದಾರೆ.

ಏಕದಿನ ವಿಶ್ವಕಪ್‌ಗೆ ಉತ್ತಪ್ಪ ಆಯ್ಕೆ ಮಾಡಿದ ಟೀಮ್
* ಉತ್ತಪ್ಪ ಆಯ್ಕೆ ಮಾಡಿರುವ ಈ ತಂಡದಲ್ಲಿ ಹಲವು ಅಚ್ಚರಿಯ ಹಾಗೂ ಆಸಕ್ತಿದಾಯಕ ನಿರ್ಧಾರಗಳನ್ನು ಕಾಣಬಹುದಾಗಿದೆ. ರೋಹಿತ್ ಶರ್ಮ ಮತ್ತು ಶುಭ್‌ಮನ್ ಗಿಲ್ ಅವರನ್ನು ಮೊದಲ ಆಯ್ಕೆಯ ಆಟಗಾರರನ್ನಾಗಿ ಆಯ್ಕೆ ಮಾಡಿದ್ದಾರೆ.
* ಅಂಡರ್-19 ಮತ್ತು ಐಪಿಎಲ್ ಮೂಲಕ ಸಖತ್ ಸದ್ದು ಮಾಡಿದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ಕೂಡ ಆಯ್ಕೆ ಮಾಡಿದ್ದು, ಬ್ಯಾಕ್-ಅಪ್ ಓಪನರ್ ಆಗಿ ಅವಕಾಶ ನೀಡಿದ್ದಾರೆ.
* 2027ರ ವೇಳೆಗೆ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮುಂದುವರಿಯುತ್ತಾರೆಯೇ ಎಂಬ ಅನುಮಾನಗಳಿವೆ. ಆದರೂ ಉತ್ತಪ್ಪ ತಮ್ಮ ತಂಡದಲ್ಲಿ ಈ ಹಿರಿಯ ಆಟಗಾರರಿಗೆ ಪ್ರಮುಖ ಸ್ಥಾನ ನೀಡಿದ್ದಾರೆ. ಕೊಹ್ಲಿ ಮೂರನೇ ಕ್ರಮಾಂಕದಲ್ಲಿದ್ದರೆ, ಶ್ರೇಯಸ್ ಅಯ್ಯರ್ ಮಧ್ಯಮ ಕ್ರಮಾಂಕಕ್ಕೆ ಆಯ್ಕೆಯಾಗಿದ್ದಾರೆ.
ವಿಕೆಟ್ ಕೀಪರ್‌ಗಳು ಮತ್ತು ಆಲ್‌ರೌಂಡರ್‌ಗಳು
* ವಿಕೆಟ್‌ಕೀಪರ್‌ಗಳು: ಕೆ.ಎಲ್. ರಾಹುಲ್ ಅವರನ್ನು ಪ್ರಮುಖ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಿದ್ದರೆ, ಸಂಜು ಸ್ಯಾಮ್ಸನ್ ಅವರನ್ನು ಬ್ಯಾಕ್-ಅಪ್ ವಿಕೆಟ್ ಕೀಪರ್ ಹಾಗೂ ಫಿನಿಷರ್ ಪಾತ್ರಕ್ಕೆ ಆಯ್ಕೆ ಮಾಡಲಾಗಿದೆ.
* ಆಲ್‌ರೌಂಡರ್‌ಗಳು: ವೇಗದ ಬೌಲಿಂಗ್ ಆಲ್‌ರೌಂಡರ್ ಆಗಿ ಹಾರ್ದಿಕ್ ಪಾಂಡ್ಯ ಇದ್ದರೆ, ಸ್ಪಿನ್ ಆಲ್‌ರೌಂಡರ್‌ಗಳಾಗಿ ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ಹಾಗೂ ಮುಖ್ಯ ಸ್ಪಿನ್ನರ್ ಆಗಿ ಕುಲ್ದೀಪ್ ಯಾದವ್ ಅವರನ್ನ ಹೆಸರಿಸಿದ್ದಾರೆ.
ವೇಗದ ಬೌಲಿಂಗ್ ವಿಭಾಗದಲ್ಲಿ ಯಾರೆಲ್ಲಾ ಇದ್ದಾರೆ?
ವೇಗದ ಬೌಲಿಂಗ್ ವಿಭಾಗದಲ್ಲಿ ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಹಾಗೂ ಅರ್ಷದೀಪ್ ಸಿಂಗ್ ಅವರೊಂದಿಗೆ ಭುವನೇಶ್ವರ್ ಕುಮಾರ್ ಅವರನ್ನು ಉತ್ತಪ್ಪ ಸೇರಿಸಿಕೊಂಡಿರುವುದು ದೊಡ್ಡ ಅಚ್ಚರಿಗೆ ಕಾರಣವಾಗಿದೆ.
ತಂಡದಿಂದ ಹೊರಬಿದ್ದ ಪ್ರಮುಖ ಆಟಗಾರರು
ಪ್ರಸ್ತುತ ಉತ್ತಮ ಫಾರ್ಮ್‌ನಲ್ಲಿರುವ ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಪ್ರಸಿದ್ಧ್ ಕೃಷ್ಣ ಮತ್ತು ಹರ್ಷಿತ್ ರಾಣಾ ಅವರಿಗೆ ಉತ್ತಪ್ಪ ತಮ್ಮ 15 ಜನರ ಪಟ್ಟಿಯಿಂದ ಕೈಬಿಟ್ಟಿದ್ದಾರೆ.
ಉತ್ತಪ್ಪ ಹೆಸರಿಸಿದ 15 ಆಟಗಾರರು
ರೋಹಿತ್ ಶರ್ಮ, ಶುಭ್‌ಮನ್ ಗಿಲ್, ವೈಭವ್ ಸೂರ್ಯವಂಶಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್ ಮತ್ತು ಅರ್ಷದೀಪ್ ಸಿಂಗ್. ಒಟ್ಟಿನಲ್ಲಿ ತುಂಬಾ ಜನ ಅನುಭವಿಗಳಿದ್ದರೂ ಸಹ ಬಾಲಕ ವೈಭವ್ ಸೂರ್ಯವಂಶಿ ಅವರನ್ನ ಹೆಸರಿಸಿರುವುದು ಅಚ್ಚರಿಗೆ ಕಾರಣವಾಗಿದೆ.


Click it and Unblock the Notifications
