RCB vs PBKS: ಮೊದಲ ಪಂದ್ಯದಲ್ಲೇ ಆರ್‌ಸಿಬಿಗೆ ಭಯ ಹುಟ್ಟಿಸಿದ ಕನ್ನಡಿಗ ಕಾವೇರಪ್ಪ
ಐಪಿಎಲ್ 2024ರ ಅಖಾಡಕ್ಕೆ ಮತ್ತೊಬ್ಬ ಕನ್ನಡಿಗನ ಎಂಟ್ರಿಯಾಗಿದೆ. ಕರ್ನಾಟಕದ ವೇಗದ ಬೌಲರ್ ವಿದ್ವತ್ ಕಾವೇರಪ್ಪ, ಮೊದಲ ಐಪಿಎಲ್ ಪಂದ್ಯದಲ್ಲೇ ಮಿಂಚಿದ್ದಾರೆ.
ಕನ್ನಡಿಗ ಕಾವೇರಪ್ಪ ಆರ್‌ಸಿಬಿ ವಿರುದ್ಧವೇ ಚೊಚ್ಚಲ ಪಂದ್ಯವನ್ನಾಡಿದ್ದು ವಿಶೇಷ. ತಮ್ಮ ಮೊದಲ ಪಂದ್ಯದಲ್ಲೇ ಆರ್‌ಸಿಬಿ ಆಟಗಾರರು, ಅಭಿಮಾನಿಗಳು ಗಾಬರಿಯಾಗುವಂತಹ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಮೊದಲ ಪಂದ್ಯದಲ್ಲಿ ಮೊದಲ ಓವರ್ ನಲ್ಲೇ ದಾಳಿಗಿಳಿದ ಅವರು, ತಮ್ಮ ಮೊದಲ ಓವರ್ ನಲ್ಲೇ ವಿರಾಟ್ ಕೊಹ್ಲಿ ಅವರ ವಿಕೆಟ್ ಪಡೆಯುವ ಅವಕಾಶ ಸೃಷ್ಟಿಸಿದರು, ಆದರೆ ಆಶುತೋಷ್ ಶರ್ಮಾ ಕ್ಯಾಚ್ ಬಿಟ್ಟ ಕಾರಣ ನಿರಾಸೆ ಅನುಭವಿಸಿದರು.
ಆದರೆ ತಮ್ಮ ಎರಡನೇ ಓವರ್ ನಲ್ಲಿ ನಾಯಕ ಫಾಫ್ ಡುಪ್ಲೆಸಿಸ್ ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಅದೇ ಓವರ್ ನಲ್ಲಿ ಪಂಜಾಬ್ ಕಿಂಗ್ಸ್ ಫಿಲ್ಡರ್ ಗಳು ಮತ್ತೊಮ್ಮೆ ವಿರಾಟ್ ಕೊಹ್ಲಿ ಅವರ ಕ್ಯಾಚ್ ಬಿಟ್ಟರು. ಬಳಿಕ ಬಂದ ಸ್ಫೋಟಕ ಬ್ಯಾಟರ್ ವಿಲ್ ಜ್ಯಾಕ್ಸ್ ಅವರ ವಿಕೆಟ್ ಪಡೆದುಕೊಂಡರು.
ರಜತ್ ಪಾಟಿದಾರ್ ಕೂಡ ಎರಡನೇ ಎಸೆತದಲ್ಲೇ ಕಾವೇರಪ್ಪ ಬೌಲಿಂಗ್‌ನಲ್ಲಿ ಸುಲಭ ಕ್ಯಾಚ್ ಕೊಟ್ಟರು ಹರ್ಷಲ್ ಪಟೇಲ್ ಕೈಚಲ್ಲಿದರು. ಬಳಿಕ ಅಬ್ಬರಿಸಿದ ರಜತ್ ಪಟಿದಾರ್, ಕೇವಲ 21 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು.
ಬರೋಬ್ಬರಿ ಮೂರು ಪ್ರಮುಖ ಕ್ಯಾಚ್ ಕೈಬಿಟ್ಟರು ವಿದ್ವತ್ ಕಾವೇರಪ್ಪ ಎರಡು ಪ್ರಮುಖ ವಿಕೆಟ್ ಪಡೆದುಕೊಂಡರು. ಒಂದು ಹಂತದಲ್ಲಿ ಆರ್ ಸಿಬಿ ಪಾಳಯದಲ್ಲಿ ಆತಂಕ ಉಂಟಾಗಿತ್ತು, ಆದರೆ ರಜತ್ ಪಾಟಿದಾರ್ ಮತ್ತು ಕೊಹ್ಲಿ ವಿಕೆಟ್ ಬೀಳದಂತೆ ರನ್ ಕಲೆಹಾಕಿದರು.
ಉತ್ತಮ ಬೌಲರ್ ಕನ್ನಡಿಗ ಕಾವೇರಪ್ಪ
ವಿದ್ವತ್ ಕಾವೇರಪ್ಪ ಕರ್ನಾಟಕ ತಂಡಕ್ಕಾಗಿ ಆಡುವ ವೇಗದ ಬೌಲರ್. ಈ ಬಾರಿಯ ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. 12 ಟಿ20 ಪಂದ್ಯಗಳನ್ನಾಡಿರುವ ಅವರು, 23 ವಿಕೆಟ್ ಪಡೆದುಕೊಂಡಿದ್ದಾರೆ, ಅವರ ಎಕಾನಮಿ 5.89 ಹೊಂದಿದ್ದಾರೆ.
18 ಲಿಸ್ಟ್ ಎ ಪಂದ್ಯಗಳಲ್ಲಿ 38 ವಿಕೆಟ್ ಪಡೆದುಕೊಂಡಿರುವ ಅವರು, 20 ಪ್ರಥಮ ದರ್ಜೆ ಪಂದ್ಯಗಳಲ್ಲಿ ಬರೋಬ್ಬರಿ 80 ವಿಕೆಟ್ ಪಡೆದುಕೊಂಡಿದ್ದಾರೆ. ಭಾರತ ಎ ತಂಡಕ್ಕೂ ಆಡಿರುವ ಅವರು, ಈ ವರ್ಷ ಬಿಸಿಸಿಐ ಒಪ್ಪಂದ ಕೂಡ ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಭಾರತ ತಂಡಕ್ಕೆ ಪದಾರ್ಪಣೆ ಮಾಡುವ ಗುರಿ ಹೊಂದಿದ್ದಾರೆ.












Click it and Unblock the Notifications