RCB Vs MI: ಆರ್‌ಸಿಬಿ ತಂಡದಲ್ಲಿ ಅವರಿಬ್ಬರೂ ಆಡಬೇಕು ಎಂದ ಎಬಿಡಿ
ಐಪಿಎಲ್ 2024ರ ಆವೃತ್ತಿಯಲ್ಲಿ ಈವರೆಗೂ 5 ಪಂದ್ಯಗಳನ್ನು ಆಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆದ್ದು ನಾಲ್ಕರಲ್ಲಿ ಸೋತಿದೆ. ಇಂದು (ಗುರುವಾರ) ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದ್ದು ಜಯದ ಹಾದಿಗೆ ಮರಳುವ ವಿಶ್ವಾಸದಲ್ಲಿದೆ.
ಆರ್‌ಸಿಬಿ ತಂಡದಲ್ಲಿ ಉತ್ತಮ ಬ್ಯಾಟಿಂಗ್ ಪಡೆಯೇ ಇದ್ದರೂ, ಸ್ಫೋಟಕ ಬ್ಯಾಟರ್‌ಗಳಿಂದ ನಿರೀಕ್ಷಿತ ಪ್ರದರ್ಶನ ಬರದಿರುವುದು ಚಿಂತೆಗೆ ಕಾರಣವಾಗಿದೆ. ಆರ್‌ಸಿಬಿ ಮಾಜಿ ಬ್ಯಾಟರ್ ಎಬಿ ಡಿ ವಿಲಿಯರ್ಸ್ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಪ್ಲೇಯಿಂಗ್ ಇಲೆವೆನ್ ಬದಲಾಗಬೇಕು ಎಂದು ಸಲಹೆ ನೀಡಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಅವರು, ಆರ್‌ಸಿಬಿ ಉತ್ತಮ ತಂಡ ಆದರೆ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡುತ್ತಿಲ್ಲ ಎಂದಿದ್ದಾರೆ. ನಿಧಾನಗತಿಯಲ್ಲಿ ಇನ್ನಿಂಗ್ಸ್ ಆರಂಭಿಸುತ್ತಿರುವುದು, ಮಧ್ಯಮ ಕ್ರಮಾಂಕ ವಿಫಲವಾಗುತ್ತಿರುವುದು ಸೋಲಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಅವರಿಬ್ಬರೂ ಆಡಬೇಕು
ಮುಂಬೈ ಇಂಡಿಯನ್ಸ್ ವಿರುದ್ದ ಗೆಲ್ಲಬೇಕು ಎಂದರೆ ತಂಡದಲ್ಲಿ ಕೆಲವು ಬದಲಾವಣೆ ಮಾಡುವ ಅಗತ್ಯವಿದೆ. ವಿಲ್ ಜ್ಯಾಕ್ಸ್ ಓರ್ವ ಸ್ಫೋಟಕ ಬ್ಯಾಟರ್ ಆಗಿದ್ದು, ಅವರು ಆಡಿದರೆ ತಂಡದ ಬ್ಯಾಟಿಂಗ್ ಮತ್ತಷ್ಟು ಬಲಿಷ್ಠವಾಗಬಹುದು. ಲಾಕಿ ಫರ್ಗ್ಯುಸನ್ ಕೂಡ ಆಡಿದರೆ ಬೌಲಿಂಗ್ ವಿಭಾಗ ಕೂಡ ಸುಧಾರಣೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ವಿರಾಟ್ ಕೊಹ್ಲಿ ಒಬ್ಬರು ಮಾತ್ರ ರನ್ ಗಳಿಸುತ್ತಿದ್ದಾರೆ. ಮತ್ತೋರ್ವ ಬ್ಯಾಟರ್‌ನಿಂದ ಅವರಿಗೆ ಸರಿಯಾದ ಬೆಂಬಲ ಸಿಗಬೇಕು. ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಸ್ಫೋಟಕ ಬ್ಯಾಟಿಂಗ್ ಮಾಡಿ ದೊಡ್ಡ ಮೊತ್ತ ಕಲೆ ಹಾಕಬೇಕು. 200ಕ್ಕಿಂತ ಹೆಚ್ಚಿನ ರನ್ ಗಳಿಸಿದರೆ ಮಾತ್ರ ಗೆಲ್ಲಲು ಅವಕಾಶ ಇರುತ್ತದೆ ಎಂದು ಹೇಳಿದರು.
ರಾಜಸ್ಥಾನ್ ರಾಯಲ್ಸ್ ವಿರುದ್ಧ ಉತ್ತಮ ಆರಂಭ ಪಡೆದರೂ, ಕೊನೆಯಲ್ಲಿ ಮೂರು ವಿಕೆಟ್ ಕಳೆದುಕೊಂಡು 183 ರನ್ ಮಾತ್ರ ಕಲೆಹಾಕಿದರು. ಆ ಪಂದ್ಯದಲ್ಲಿ ಆರ್‌ಸಿಬಿ 200ಕ್ಕೂ ಹೆಚ್ಚು ರನ್ ಗಳಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಅರ್‌ಸಿಬಿ ಇಂದಿನ ಪಂದ್ಯದಲ್ಲಿ ಸೋತರೆ ಪ್ಲೇಆಫ್ ಹಾದಿ ಕಠಿಣವಾಗಲಿದೆ. ಈಗಾಗಲೇ ನಾಲ್ಕು ಪಂದ್ಯಗಳಲ್ಲಿ ಸೋತಿರುವ ಕಾರಣ ಮುಂಬರುವ ಎಲ್ಲ ಪಂದ್ಯಗಳಲ್ಲಿ ಆರ್‌ಸಿಬಿ ಗೆದ್ದರಷ್ಟೇ ಪ್ಲೇ ಆಫ್ ತಲುಪಲು ಅವಕಾಶ ಇರುತ್ತದೆ.
ಆರ್‌ಸಿಬಿ ಸಂಭಾವ್ಯ ಆಡುವ ಬಳಗ
ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ವಿಲ್ ಜ್ಯಾಕ್ಸ್, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್ ವೆಲ್/ ಕ್ಯಾಮರಾನ್ ಗ್ರೀನ್, ಸೌರವ್ ಚೌಹಾಣ್, ದಿನೇಶ್ ಕಾರ್ತಿಕ್, ಯಶ್ ದಯಾಳ್, ಮೊಹಮ್ಮದ್ ಸಿರಾಜ್, ಲಾಕಿ ಫರ್ಗ್ಯುಸನ್, ವೈಶಾಖ್ ವಿಜಯ್ ಕುಮಾರ್.












Click it and Unblock the Notifications