ನಾನಿನ್ನೂ ಸಂಪೂರ್ಣ ಫಿಟ್ ಆಗಿಲ್ಲ, ಆದರೂ ತಂಡಕ್ಕೆ ಮೋಸ ಮಾಡಿಲ್ಲ; ವಿರಾಟ್ ಕೊಹ್ಲಿ ಅಚ್ಚರಿ ಹೇಳಿಕೆ
RCB Virat Kohli: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ (ಏಪ್ರಿಲ್ 16) ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡವು ಎಲ್‌ಎಸ್‌ಜಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಈ ಗೆಲುವಿನ ನಂತರ ಮಾತನಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ತಮ್ಮ ಗಾಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್‌ಸಿಬಿ ಗೆಲುವಿನ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ ಅವರು, ತಾವು ಸಂಪೂರ್ಣ ಫಿಟ್ ಆಗಿರಲಿಲ್ಲ ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಆರ್‌ಸಿಬಿ ಜಯಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಕೊಹ್ಲಿ, 149 ರನ್‌ಗಳ ಗುರಿಯನ್ನು ಬೆನ್ನಟ್ಟುವಾಗ 49 ರನ್‌ಗಳ ಅಮೂಲ್ಯ ಕಾಣಿಕೆ ನೀಡಿದರು.

ಆರ್‌ಸಿಬಿ ಗೆಲುವಿಗೆ ಕಾರಣನಾದ ವಿರಾಟ್ ಕೊಹ್ಲಿ
ಪಂದ್ಯಕ್ಕೂ ಮುನ್ನ ಕಾಲಿಗೆ ಪಟ್ಟಿ ಧರಿಸಿ ಅಭ್ಯಾಸ ನಡೆಸುತ್ತಿದ್ದ ಕೊಹ್ಲಿ ಅವರನ್ನು ಕಂಡು ಅವರು ಕಣಕ್ಕಿಳಿಯುವುದು ಅನುಮಾನ ಎಂಬ ಚರ್ಚೆಗಳು ನಡೆದಿದ್ದವು. ಆದರೆ, ಅನುಭವಿ ಆಟಗಾರ ಕೊಹ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದು ತಂಡದ ಸುಲಭ ಜಯಕ್ಕೆ ನೆರವಾದರು. ಮೈದಾನದಲ್ಲಿ ಯಾವುದೇ ಒತ್ತಡವಿಲ್ಲದೆ, ಬ್ಯಾಟ್ ಬೀಸಿದ ಅವರು, ಆರು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸುವ ಮೂಲಕ ಭರ್ಜರಿ ಪ್ರದರ್ಶನ ನೀಡಿದರು.
ಫಿಟ್ನೆಸ್ ಬಗ್ಗೆ ವಿರಾಟ್ ಕೊಹ್ಲಿ ಅಚ್ಚರಿ ಹೇಳಿಕೆ
ಪಂದ್ಯದ ನಂತರ ಮಾತನಾಡಿದ ಕೊಹ್ಲಿ,"ಕಳೆದ ಪಂದ್ಯಕ್ಕಿಂತ ಈಗ ಸಾಕಷ್ಟು ಸುಧಾರಿಸಿದ್ದೇನೆ. ಆದರೆ ನಾನಿನ್ನೂ ಸಂಪೂರ್ಣ ಶೇಕಡ 100ರಷ್ಟು ಫಿಟ್ ಆಗಿಲ್ಲ. ಕಳೆದ ಪಂದ್ಯದಲ್ಲಿ ಸ್ನಾಯು ಸೆಳೆತವಿತ್ತು ಮತ್ತು ಕಳೆದ ನಾಲ್ಕೈದು ದಿನಗಳಿಂದ ಆರೋಗ್ಯ ಸರಿಯಿರಲಿಲ್ಲ. ಎಲ್‌ಎಸ್‌ಜಿ ವಿರುದ್ಧ ಬ್ಯಾಟಿಂಗ್ ಆರಂಭಿಸಿದ ರೀತಿ ಚೆನ್ನಾಗಿತ್ತು. ನನ್ನ ಆಟದ ಬಗ್ಗೆ ನನಗೆ ಸಂತೋಷವಿದೆ. ಪಂದ್ಯವನ್ನು ಪೂರ್ತಿಗೊಳಿಸಿ ಮರಳಲು ಇಷ್ಟಪಡುತ್ತಿದ್ದೆ," ಎಂದು ಜಿಯೋಹೋಸ್ಟಾರ್‌ಗೆ ನೀಡಿದ ಪಂದ್ಯದ ಸಂದರ್ಶನದಲ್ಲಿ ಕೊಹ್ಲಿ ಅವರು ರಿವೀಲ್ ಮಾಡಿದ್ದಾರೆ.
ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡ ಕೊಹ್ಲಿ
ವಿರಾಟ್ ಕೊಹ್ಲಿ ಅವರು ಐಪಿಎಲ್ 2026ರ ಆವೃತ್ತಿಯ ಆರಂಭದಿಂದಲೂ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಆರ್‌ಸಿಬಿ ಪರ ಈವರೆಗೆ ಆಡಿರುವ ಐದು ಪಂದ್ಯಗಳಲ್ಲಿ ಅವರು 57ರ ಸರಾಸರಿಯಲ್ಲಿ 228 ರನ್ ಗಳಿಸಿದ್ದು, ಇದರಲ್ಲಿ ಎರಡು ಅರ್ಧಶತಕಗಳು ಸೇರಿವೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಆಟವು ಕೊಹ್ಲಿಗೆ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಳ್ಳಲು ನೆರವಾಯಿತು.
ಅಗ್ರ ಕ್ರಮಾಂಕದಲ್ಲಿ ಅವರ ಈ ಭರ್ಜರಿ ಫಾರ್ಮ್‌ನಿಂದಾಗಿ, ನಂತರ ಬಂದಂತಹ ಆಟಗಾರರು ಯಾವುದೇ ಒತ್ತಡವಿಲ್ಲದೆ ಮುಕ್ತವಾಗಿ ಬ್ಯಾಟ್ ಬೀಸಲು ಸಾಧ್ಯವಾಯಿತು. ಆವರ ಈ ಉತ್ತಮ ಆರಂಭವೇ ಆರ್‌ಸಿಬಿ ಬ್ಯಾಟಿಂಗ್ ವಿಭಾಗವು ಮತ್ತಷ್ಟು ಬಲಿಷ್ಠಗೊಳ್ಳಲು ಕಾರಣವಾಗಿದೆ. ಪ್ರಸಕ್ತ ಸೀಸನ್‌ನಲ್ಲಿ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದಿರುವ ಆರ್‌ಸಿಬಿ ತಂಡವು ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕು ಗೆಲುವು ಮತ್ತು ಕೇವಲ ಒಂದು ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 8 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನಕ್ಕೇರಿದೆ. ಈ ಮೂಲಕ ಕಳೆದ ಬಾರಿಯಂತೆ ಉತ್ತಮ ತಂಡ ಹೊಂದಿರುವ ಆರ್‌ಸಿಬಿ ಈ ಬಾರಿಯೂ ಟ್ರೋಫಿ ಮುಡಿಗೇರಿಸಿಕೊಳ್ಳುವ ವಿಶ್ವಾಸದಲ್ಲಿದೆ.
ಒಟ್ಟಿನಲ್ಲಿ ಹೇಳುವುದಾದರೆ, ವಿರಾಟ್ ಕೊಹ್ಲಿ ಅವರು ಸ್ವಾರ್ಥಕ್ಕಾಗಿ ಆಡುತ್ತಾರೆ. ಅವರು ತಂಡಕ್ಕಾಗಿ ಆಡುವುದಿಲ್ಲೆ ಎನ್ನುವ ಟೀಕೆಗಳಲು ಕೇಳಿಬಂದಿದ್ದವು. ಈ ಟೀಕೆಗಳಿಗೆ ತಮ್ಮ ಬ್ಯಾಟ್ ಮೂಲಕವ ಉತ್ತರ ಕೊಟ್ಟಿದ್ದಾರೆ. ಎಲ್‌ಎಸ್‌ಜಿ ವಿರುದ್ಧದ ಪಂದ್ಯದಲ್ಲಿ ಉತ್ತಮ ಆರಂಭ ನೀಡಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಬಳಿಕ ಮಾತನಾಡಿದ ಅವರು, ನಾನು ಇನ್ನೂ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿಲ್ಲ. ಆದರೂ, ತಂಡಕ್ಕೆ ಮೋಸ ಮಾಡಿಲ್ಲ, ಉತ್ತಮವಾಗಿ ಆಡಿದ್ದೇನೆ ಎನ್ನುವ ರೀತಿಯಲ್ಲಿ ಹೇಳಿಕೆ ನೀಡಿ ಟೀಕಾಕಾರಿಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ತಿರುಗೇಟು ನೀಡಿದ್ದಾರೆ.












Click it and Unblock the Notifications