RCB vs DC: ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ರಿಷಬ್ ಪಂತ್ ಬ್ಯಾನ್; ಕಾರಣವೇನು?
ಆರ್‌ಸಿಬಿ ವಿರುದ್ಧದ ಮಹತ್ವದ ಪಂದ್ಯಕ್ಕೆ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಭಾರಿ ಆಘಾತ ಎದುರಾಗಿದೆ. ತಂಡದ ನಾಯಕ ರಿಷಬ್ ಪಂತ್ ಅವರಿಗೆ ಬಿಸಿಸಿಐ ಒಂದು ಪಂದ್ಯಕ್ಕೆ ನಿಷೇಧ ಹೇರಿದೆ. ಇದರಿಂದ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ರಿಷಬ್ ಪಂತ್ ಮೈದಾನದಿಂದ ಹೊರಗುಳಿಯಲಿದ್ದಾರೆ.
ಪ್ಲೇ ಆಫ್‌ಗೆ ತಲುಪುವ ಅವಕಾಶಕ್ಕಾಗಿ ಈ ಪಂದ್ಯ ಎರಡೂ ತಂಡಗಳಿಗೆ ಭಾರಿ ಮಹತ್ವದ್ದಾಗಿದೆ. ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ಉಳಿದ ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ತಲುಪುವ ಲೆಕ್ಕಾಚಾರದಲ್ಲಿತ್ತು. ಈಗ ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ನಾಯಕನೇ ಬ್ಯಾನ್ ಆಗಿರುವುದು ಭಾರಿ ಆಘಾತ ಎದುರಾಗಿದೆ.

ಮೇ 12 (ಭಾನುವಾರ) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆರ್‌ಸಿಬಿ ತಂಡವನ್ನು ಎದುರಿಸಲಿದೆ. ಈ ಪಂದ್ಯ ಎರಡೂ ತಂಡಗಳಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
ನಿಷೇಧ ಹೇರಲು ಕಾರಣವೇನು?
ಮೇ 7 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್ ಮಾಡಿದ್ದಕ್ಕಾಗಿ ರಿಷಬ್ ಪಂತ್ ಅವರಿಗೆ ಒಂದು ಪಂದ್ಯದ ಅಮಾನತು ಮತ್ತು₹30 ಲಕ್ಷ ದಂಡ ವಿಧಿಸಲಾಗಿದೆ. ಕೊನೆಯ ಓವರ್ ಆರಂಭವಾದಾಗ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ ಅವಧಿಗಿಂತ 10 ನಿಮಿಷ ತಡವಾಗಿತ್ತು.
ಈ ಋತುವಿನಲ್ಲಿ ಇದು ಡೆಲ್ಲಿ ಕ್ಯಾಪಿಟಲ್ಸ್ ಈ ರೀತಿ ಮೂರನೇ ಬಾರಿ ಅಪರಾಧ ಮಾಡಿದ ಕಾರಣ ಅಮಾನತು ಮತ್ತು ಭಾರಿ ದಂಡದ ಶಿಕ್ಷೆ ನೀಡಲಾಗಿದೆ. ತಂಡದ ಉಳಿದ ಆಟಗಾರರಿಗೆ ₹12 ಲಕ್ಷ ಅಥವಾ ಪಂದ್ಯ ಶುಲ್ಕದ 50%, ಯಾವುದು ಕಡಿಮೆಯೋ ಅದನ್ನು ದಂಡವಾಗಿ ವಿಧಿಸಲಾಗಿದೆ.
ಮ್ಯಾಚ್ ರೆಫರಿಯ ಈ ತೀರ್ಪನ್ನು ಪ್ರಶ್ನಿಸಿ ಡಿಸಿ ಮೇಲ್ಮನವಿ ಸಲ್ಲಿಸಿದ್ದು, ಅದನ್ನು ಪರಿಶೀಲನೆಗಾಗಿ ಬಿಸಿಸಿಐ ಒಂಬುಡ್ಸ್‌ಮನ್‌ಗೆ ಉಲ್ಲೇಖಿಸಲಾಗಿದೆ. ಓಂಬುಡ್ಸ್‌ಮನ್ ವರ್ಚುವಲ್ ವಿಚಾರಣೆಯನ್ನು ನಡೆಸಿದ್ದು, ಮ್ಯಾಚ್ ರೆಫರಿಯ ನಿರ್ಧಾರವು ಅಂತಿಮ ಮತ್ತು ಬದ್ಧವಾಗಿದೆ ಎಂದು ಹೇಳಿದ್ದಾರೆ.
ಆರ್‌ಸಿಬಿ ವಿರುದ್ಧ ನಾಯಕತ್ವ ಯಾರಿಗೆ?
ಮಹತ್ವದ ಪಂದ್ಯದಲ್ಲಿ ನಾಯಕನೇ ಹೊರಗುಳಿಯುವುದು ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ಅಕ್ಷರ್ ಪಟೇಲ್ ನಾಯಕನಾಗುವ ಸಾಧ್ಯತೆ ಇದೆ.
ಸತತ ನಾಲ್ಕು ಪಂದ್ಯಗಳನ್ನು ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ವಿರುದ್ಧ ಗೆದ್ದು ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಳ್ಳುವ ಉತ್ಸಾಹದಲ್ಲಿದೆ. ಭಾನುವಾರ ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ.












Click it and Unblock the Notifications