Faf Du Plessis: ಮೈದಾನದಲ್ಲಿ ಚೀತಾಗಳು! ಫಾಫ್ ಡುಪ್ಲೆಸಿಸ್ ಹಿಡಿದ ಅದ್ಭುತ ಕ್ಯಾಚ್‌ಗೆ ಬೆಚ್ಚಿಬಿದ್ದ ಸಿಎಸ್‌ಕೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2024ರ ಆವೃತ್ತಿಯಲ್ಲಿ ಅದ್ಭುತವನ್ನೇ ಮಾಡಿದೆ. ಮೇ 3 ರಂದು 10ನೇ ಸ್ಥಾನದಲ್ಲಿದ್ದ ಆರ್‌ಸಿಬಿ ಮೇ 18ರಂದು ಪ್ಲೇಆಫ್‌ಗೆ ಪ್ರವೇಶಿಸಿದೆ. ಮೊದಲ ಎಂಟು ಪಂದ್ಯಗಳಲ್ಲಿ ಏಳು ಪಂದ್ಯಗಳನ್ನು ಸೋತ ಬಳಿಕ ಫೀನಿಕ್ಸ್‌ನಂತೆ ಎದ್ದು ಬಂದಿದ್ದು ಈಗ ಇತಿಹಾಸ.
ಆರು ಪಂದ್ಯಗಳನ್ನು ಸತತವಾಗಿ ಗೆಲ್ಲಲು ಬ್ಯಾಟಿಂಗ್, ಬೌಲಿಂಗ್ ಮಾತ್ರವಲ್ಲ ಆರ್ ಸಿಬಿ ಫೀಲ್ಡಿಂಗ್ ಕೂಡ ಪ್ರಮುಖ ಕಾರಣ. ಕಳೆದ ಆರು ಪಂದ್ಯಗಳಲ್ಲಿ ಆರ್ ಸಿಬಿ ಫೀಲ್ಡಿಂಗ್ ಬೇರೆಯೇ ಮಟ್ಟದಲ್ಲಿದೆ. ಸಿಎಸ್‌ಕೆ ವಿರುದ್ಧ ಕೂಡ ಆರ್ ಸಿಬಿ ಫೀಲ್ಡಿಂಗ್ ಅದ್ಭುತವಾಗಿತ್ತು.

ನಾಯಕ ಫಾಫ್ ಡುಪ್ಲೆಸಿಸ್ ಎಂತಹ ಅದ್ಭುತ ಫೀಲ್ಡರ್ ಎನ್ನುವುದನ್ನು ಮತ್ತೆ ಸಾಬೀತು ಮಾಡಿದ್ದಾರೆ. ಶನಿವಾರ ನಡೆದ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ನಾಯಕ ಫಾಫ್ ಹಿಡಿದ ಕ್ಯಾಚ್ ನೋಡಿ ಸಿಎಸ್‌ಕೆ ಆಟಗಾರರೇ ದಂಗಾಗಿದ್ದರು.
15 ನೇ ಓವರ್ ನ ಕೊನೆಯ ಎಸೆತವನ್ನು ಮೊಹಮ್ಮದ್ ಸಿರಾಜ್ ಅವರು ಎಸೆದ ಫುಲ್‌ಟಾಸ್ ಅನ್ನು ಮಿಚೆಲ್ ಸ್ಯಾಂಟ್ನರ್ ಬೌಂಡರಿ ಹೊಡೆಯಲು ಯತ್ನಿಸಿದರು. ಆದರೆ ಮಿಡ್ ಆಫ್‌ನಲ್ಲಿ ಚಿರತೆಯಂತೆ ಓಡಿ ಎಗರಿದ ಫಾಫ್ ಡುಪ್ಲೆಸಿಸ್ ಕಣ್ಮುಚ್ಚಿ ಬಿಡುವಷ್ಟರಲ್ಲಿ ಕ್ಯಾಚ್ ಹಿಡಿದರು. ಫಾಫ್ ಕ್ಯಾಚ್ ಹಿಡಿಯುತ್ತಿದ್ದಂತೆ ಅಭಿಮಾನಿಗಳ ಕೂಗು ಮುಗಿಲು ಮುಟ್ಟಿದರೆ, ಸಿಎಸ್‌ಕೆ ಡಗೌಟ್‌ನಲ್ಲಿದ್ದ ಆಟಗಾರರು ದಂಗಾದರು.
ಈ ಕ್ಯಾಚ್ ನೋಡಿದ ಮಾಜಿ ಕ್ರಿಕೆಟಿಗರು, ಕಾಮೆಂಟರಿ ಮಾಡುತ್ತಿದ್ದವರು ಇದು ಈ ಐಪಿಎಲ್‌ನಲ್ಲಿ ಅತ್ಯುತ್ತಮ ಕ್ಯಾಚ್ ಎಂದು ಹೇಳಿದರು. 40 ವರ್ಷದ ಫಾಫ್ ಡುಪ್ಲೆಸಿಸ್ ಎಂತಹ ಫೀಲ್ಡರ್ ಎನ್ನುವುದು ಎಲ್ಲರಿಗೂ ಗೊತ್ತಿತ್ತು, ಆದರೆ ಸಿಎಸ್‌ಕೆ ವಿರುದ್ಧ ಅದ್ಭುತ ಕ್ಯಾಚ್ ಪಡೆಯುವ ಮೂಲಕ ಅದನ್ನು ಇನ್ನೊಂದು ಹಂತ ಮೇಲಕ್ಕೇರಿಸಿದರು.
ಚಿನ್ನಸ್ವಾಮಿಯಲ್ಲಿ ಚೀತಾಗಳು!
ವಿರಾಟ್ ಕೊಹ್ಲಿ ಮತ್ತು ಫಾಫ್ ಡುಪ್ಲೆಸಿಸ್ ಆರ್ ಸಿಬಿ ತಂಡದಲ್ಲಿರುವ ಅತ್ಯುತ್ತಮ ಫೀಲ್ಡರ್ ಗಳು, ವಿರಾಟ್ ಕೊಹ್ಲಿ ಕೂಡ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟಾನ್ಸ್ ವಿರುದ್ಧ ಅದ್ಭುತ ರನೌಟ್‌ಗಳನ್ನು ಹೊಡೆದಿದ್ದರು. ಕ್ಯಾಮೆರಾನ್ ಗ್ರೀನ್ ಕೂಡ ಕೆಕೆಆರ್ ವಿರುದ್ಧ ಅದ್ಭುತ ಕ್ಯಾಚ್ ಹಿಡಿದಿದ್ದರು. ಫಾಫ್ ಡುಪ್ಲೆಸಿಸ್ ಕೂಡ ಅದ್ಭುತ ಕ್ಯಾಚ್ ಹಿಡಿದು ಮಿಂಚಿದ್ದಾರೆ.
ಅದಕ್ಕೆ ಅಭಿಮಾನಿಗಳು ಕೊಹ್ಲಿ ಮತ್ತು ಫಾಫ್ ಡುಪ್ಲೆಸಿಸ್ ಅವರನ್ನು ಚೀತಾಗಳು ಎಂದು ಕರೆಯುತ್ತಾರೆ. ಅವರಿಬ್ಬರೂ ಮೈದಾನದ ಎಲ್ಲಾ ಮೂಲೆಯಲ್ಲೂ ಕಾಣಿಸುತ್ತಾರೆ. ಆರ್ ಸಿಬಿ ಈಗ ಪ್ಲೇಆಫ್‌ಗೆ ಅರ್ಹತೆ ಪಡೆದುಕೊಂಡಿದ್ದು, ಮುಂದಿನ ಪಂದ್ಯಗಳಲ್ಲಿ ಕೂಡ ನಮ್ಮ ಚೀತಾಗಳು ಮಿಂಚಲಿ ಎಂದು ಫ್ಯಾನ್ಸ್ ಪ್ರಾರ್ಥಿಸುತ್ತಾರೆ.












Click it and Unblock the Notifications