ಆರ್‌ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ
RCB Virat Kohli: ಐಪಿಎಲ್ 2026 ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್ ತಂಡಗಳು ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು 'ಚಾರ್ಟರ್ಡ್ ಫ್ಲೈಟ್' ಸೌಲಭ್ಯ ಕಲ್ಪಿಸಲು ಬೇಡಿಕೆ ಇಟ್ಟಿದ್ದರು ಎನ್ನುವ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಇದೀಗ ಇದಕ್ಕೆ ಸ್ವತಃ ಕೊಹ್ಲಿ ಅವರೇ ಸ್ಪಷ್ಟನೆ ನೀಡಿ ಸುಳ್ಳು ಸುದ್ದಿಗಳಿಗೆ ತೆರೆ ಎಳೆದಿದ್ದಾರೆ.
ಟೂರ್ನಿಯ ಸಮಯದಲ್ಲಿ ಭಾರತ-ಲಂಡನ್ ನಡುವೆ ಪ್ರಯಾಣಿಸಲು ವಿರಾಟ್ ಕೊಹ್ಲಿ ಅವರು 'ಚಾರ್ಟರ್ಡ್ ಫ್ಲೈಟ್' ಸೌಲಭ್ಯವನ್ನು ಕೇಳಿದ್ದಾರೆ ಎಂಬ ವರದಿಗಳು ಹರಿದಾಡಿದ್ದವು. ಈ ವದಂತಿಗಳು ಹರಡುತ್ತಿದ್ದಂತೆಯೇ, ವಿರಾಟ್ ಕೊಹ್ಲಿ ತಮ್ಮದೇ ಶೈಲಿಯಲ್ಲಿ ಈ ಸುಳ್ಳು ಸುದ್ದಿಗಳಿಗೆ ತೆರೆ ಎಳೆದಿದ್ದಾರೆ. ಇಂತಹ ಯಾವುದೇ ಬೇಡಿಕೆಯನ್ನು ತಾವು ಇಟ್ಟಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸುಳ್ಳು ಸುದ್ದಿಗಳಿಗೆ ತೆರೆ ಎಳೆದ ಕೊಹ್ಲಿ
ಕೊಹ್ಲಿ ಅವರ ಕುಟುಂಬ ಲಂಡನ್‌ನಲ್ಲಿ ನೆಲೆಸಿರುವುದರಿಂದ, ಅವರು ಆಗಾಗ ಅಲ್ಲಿಗೆ ಪ್ರಯಾಣಿಸುತ್ತಿರುತ್ತಾರೆ. ಇದೇ ಉದ್ದೇಶ ಇಟ್ಟುಕೊಂಡು ಕೆಲವು ಮೂಲಗಳು ಇಂತಹ ಸುಳ್ಳು ಸುದ್ದಿಯನ್ನು ಸೃಷ್ಟಿಸಿದ್ದವು. ವಿರಾಟ್ ಕೊಹ್ಲಿ ಅವರು ಈ ಕುರಿತು ಸ್ಕ್ರೀನ್‌ಶಾಟ್‌ವೊಂದನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಳ್ಳುವ ಮೂಲಕ ಎಲ್ಲಾ ಸುಳ್ಳು ಸುದ್ದಿಗಳಿಗೆ ತೆರೆ ಎಳೆದಿದ್ದಾರೆ.
ಕೊಹ್ಲಿ ಪ್ರತಿಕ್ರಿಯೆ ಶ್ಲಾಘಿಸಿದ ಅಭಿಮಾನಿಗಳು
ವಿರಾಟ್ ಕೊಹ್ಲಿ ಅವರು ಈ ವರದಿಯ ಸ್ಕ್ರೀನ್‌ಶಾಟ್ ಜೊತೆಗೆ ನಗುತ್ತಿರುವ ಎಮೋಜಿಗಳನ್ನು ಹಾಕುವ ಮೂಲಕ, ಈ ಸುದ್ದಿ ಎಷ್ಟು ಹಾಸ್ಯಾಸ್ಪದವಾಗಿದೆ ಎಂಬುದನ್ನು ಸೂಚಿಸಿದ್ದಾರೆ. ಯಾವುದೇ ಪದಗಳನ್ನು ಬಳಕೆ ಮಾಡದೆ, ಕೇವಲ ಎಮೋಜಿಗಳ ಮೂಲಕ ಈ ವದಂತಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಮತ್ತು ಇವೆಲ್ಲವೂ ಕೇವಲ ಸೃಷ್ಟಿಸಿದ ಸುದ್ದಿಗಳು ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಕೊಹ್ಲಿ ಅವರ ಈ ವಿಶಿಷ್ಟ ಶೈಲಿಯ ಪ್ರತಿಕ್ರಿಯೆ ಈಗ ಭಾರಿ ಚರ್ಚೆಗೆ ಕಾರಣವಾಗಿದ್ದು, ಸುಳ್ಳು ಸುದ್ದಿ ಹರಡುವವರಿಗೆ ಅವರು ಸರಿಯಾದ ಉತ್ತರ ನೀಡಿದ್ದಾರೆ ಎಂದು ಹಲವರು ಶ್ಲಾಘಿಸುತ್ತಿದ್ದಾರೆ.
ಹಿಂದಿನ ವರದಿಗಳ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಲಂಡನ್‌ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಿರುವ ವಿರಾಟ್ ಕೊಹ್ಲಿ, ಯುಕೆ ಮತ್ತು ಭಾರತದ ನಡುವೆ ಪ್ರಯಾಣಿಸಲು ವಿಶೇಷ ಚಾರ್ಟರ್ಡ್ ವಿಮಾನ ಸೌಲಭ್ಯವನ್ನು ನೀಡುವಂತೆ ಆರ್‌ಸಿಬಿ ಮ್ಯಾನೇಜ್‌ಮೆಂಟ್‌ಗೆ ವಿನಂತಿಸಿದ್ದಾರೆ ಎಂದು ಹೇಳಲಾಗಿತ್ತು. ಪಂದ್ಯಗಳ ನಡುವೆ ಮೂರು ದಿನಗಳಿಗಿಂತ ಹೆಚ್ಚು ಕಾಲ ಬಿಡುವು ಸಿಕ್ಕಾಗಲೆಲ್ಲಾ ಲಂಡನ್‌ಗೆ ಮರಳಿ ಹೋಗಲು ಅವರು ಯೋಜಿಸಿದ್ದಾರೆ ಅಂತಲೂ ಸುದ್ದಿಗಳು ಹಬ್ಬಿದ್ದವು.
ಟೀಕಾಕಾರರಿಗೆ ಸರಿಯಾದ ತಿರುಗೇಟು ಎಂದ ಫ್ಯಾನ್ಸ್
ಆದರೆ, ಕೊಹ್ಲಿ ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ಈ ಎಲ್ಲಾ ವದಂತಿಗಳಿಗೆ ಬ್ರೇಕ್ ಹಾಕಿದೆ. ಈ ಸ್ಪಷ್ಟನೆಯಿಂದಾಗಿ ಐಪಿಎಲ್ ಸಮಯದಲ್ಲಿ ಕೊಹ್ಲಿ ಸಂಪೂರ್ಣವಾಗಿ ಭಾರತದಲ್ಲೇ ಇರುತ್ತಾರೆ ಎಂಬುದು ಖಚಿತವಾಗಿದ್ದು, ಇದರಿಂದ ಆರ್‌ಸಿಬಿ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಅಲ್ಲದೆ, ಮತ್ತೊಂದೆಡೆ ಟೀಕಾಕಾರರಿಗೆ ಸರಿಯಾದ ತಿರುಗೇಟು ಕೊಟ್ಟಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಮಾರ್ಚ್ 28ರಂದು ಉದ್ಘಾಟನಾ ಪಂದ್ಯ
ಈ ಬಾರಿಯ ಐಪಿಎಲ್ ಸೀಸನ್ ಮಾರ್ಚ್ 28 ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸನ್ ರೈಸರ್ಸ್ ಹೈದರಾಬಾದ್ ಮತ್ತು ಆರ್‌ಸಿಬಿ ತಂಡಗಳು ಬೆಂಗಳೂರಿನಲ್ಲಿ ಮುಖಾಮುಖಿಯಾಗಲಿವೆ. ಈ ಬಾರಿ ಟೂರ್ನಿಯು ಬೆಂಗಳೂರಿನಲ್ಲೇ ಆರಂಭವಾಗುತ್ತಿರುವುದು ಅಭಿಮಾನಿಗಳಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ.
ಟ್ರೋಫಿ ಎತ್ತಿ ಹಿಡಿಯುವ ಭರವಸೆಯಲ್ಲಿ ಆರ್‌ಸಿಬಿ
ಆರ್‌ಸಿಬಿ 18ನೇ ಸೀಸನ್‌ನಲ್ಲಿ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಎತ್ತಿ ಹಿಡಿದಿರುವ ಸಂಭ್ರಮದಲ್ಲಿರುವ ವಿರಾಟ್ ಕೊಹ್ಲಿ, ಈ ಸೀಸನ್‌ನಲ್ಲೂ ಅದೇ ರೀತಿಯ ಯಶಸ್ಸನ್ನು ಮುಂದುವರಿಸುವ ಗುರಿ ಹೊಂದಿದ್ದಾರೆ. ದೀರ್ಘಕಾಲದ ಕಾಯುವಿಕೆಯ ನಂತರ ಕಳೆದ ಸೀಸನ್‌ನಲ್ಲಿ ಪ್ರಶಸ್ತಿ ಗೆದ್ದಿರುವುದು ಕೊಹ್ಲಿ ಮತ್ತು ಅಭಿಮಾನಿಗಳಲ್ಲಿ ಹೊಸ ಹುರುಪು ಮೂಡಿಸಿದೆ.
35 ವರ್ಷ ವಯಸ್ಸಿನ ಕೊಹ್ಲಿ ಇಂದಿಗೂ ಐಪಿಎಲ್ ಇತಿಹಾಸದ ಅತ್ಯಂತ ಸ್ಥಿರ ಪ್ರದರ್ಶನ ನೀಡುವ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಈ ಬಾರಿಯೂ ತಂಡದ ಪರವಾಗಿ ಪ್ರಭಾವಶಾಲಿ ಆಟವಾಡುವ ಮೂಲಕ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಲು ಅವರು ಸಜ್ಜಾಗಿದ್ದಾರೆ.
ಆರ್‌ಸಿಬಿ ಪರ ಆಡಿರುವ ಎಲ್ಲಾ ಟಿ20 ಪಂದ್ಯಗಳಲ್ಲೂ ವಿರಾಟ್ ಕೊಹ್ಲಿ ಅವರ ಸಾಧನೆ ಅಪಾರವಾಗಿದೆ. ಕೊಹ್ಲಿ ಆರ್‌ಸಿಬಿ ಪರ ಒಟ್ಟು 282 ಪಂದ್ಯಗಳಲ್ಲಿ 9,085 ರನ್ ಕಲೆಹಾಕಿದ್ದಾರೆ. ಈ ಸೀಸನ್‌ನಲ್ಲಿ ಅವರು ಮತ್ತೊಂದು ಸ್ಮರಣೀಯ ಪ್ರದರ್ಶನ ನೀಡಿದರೆ, ಟಿ20 ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಫ್ರಾಂಚೈಸಿ ಪರ 10,000 ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.












Click it and Unblock the Notifications