ಐಪಿಎಲ್‌ನಲ್ಲಿ ಯಾರೂ ಕೊಳ್ಳದಿದ್ದರೂ ಅಯೋಧ್ಯೆಯಲ್ಲಿ ಅಬ್ಬರಿಸಿದ ಆರ್‌ಸಿಬಿ ಮಾಜಿ ಆಟಗಾರ; 195 ರನ್ ಚಚ್ಚಿದ ಸ್ವಸ್ತಿಕ್ ಚಿಕಾರ
RCB Player: ಐಪಿಎಲ್ ಹರಾಜಿನಲ್ಲಿ ಮಾರಾಟವಾಗದಿದ್ದರೇನಂತೆ, ಮೈದಾನದಲ್ಲಿ ಬ್ಯಾಟ್ ಹಿಡಿದು ಇಳಿದರೆ ಸಾಕು, ರನ್ ಮಳೆ ಸುರಿಸಬಲ್ಲೆ ಎಂಬುದನ್ನು ಯುವ ಪ್ರತಿಭೆ ಸ್ವಸ್ತಿಕ್ ಚಿಕಾರ ಸಾಬೀತುಪಡಿಸಿದ್ದಾರೆ. ಅಯೋಧ್ಯಾ ಪ್ರೀಮಿಯರ್ ಲೀಗ್‌ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಈ ಉದಯೋನ್ಮುಖ ತಾರೆ, ಎದುರಾಳಿ ಬೌಲರ್‌ಗಳನ್ನು ಅಕ್ಷರಶಃ ನಡುಗುವಂತೆ ಮಾಡಿದ್ದಾರೆ.
ಗೋಮ್ಟಿ ಥಂಡರ್ ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದ ಸ್ವಸ್ತಿಕ್ ಚಿಕಾರ, ಹಿಂಡನ್ ಟೈಟಾನ್ಸ್ ವಿರುದ್ಧ ರುದ್ರತಾಂಡವವಾಡಿದರು. ಕೇವಲ 69 ಎಸೆತಗಳನ್ನು ಎದುರಿಸಿದ ಅವರು ಅಜೇಯ 195 ರನ್ ಚಚ್ಚಿದರು. ಕೇವಲ 5 ರನ್‌ಗಳ ಅಂತರದಲ್ಲಿ ಐತಿಹಾಸಿಕ ದ್ವಿಶತಕವನ್ನು ಮಿಸ್ ಮಾಡಿಕೊಂಡರಾದರೂ, ಅವರ ಈ ಸ್ಫೋಟಕ ಆಟ ನೋಡುಗರನ್ನು ಮಂತ್ರಮುಗ್ಧಗೊಳಿಸಿತು.

ಅವರ ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ ಬರೊಬ್ಬರಿ 21 ಸಿಕ್ಸರ್‌ಗಳು ಮತ್ತು 11 ಬೌಂಡರಿಗಳು ಸೇರಿದ್ದವು. ಸ್ವಸ್ತಿಕ್ ಬರೊಬ್ಬರಿ 282.61 ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದರು. ಸ್ವಸ್ತಿಕ್ ಈ ಅಮೋಘ ಬ್ಯಾಟಿಂಗ್ ಮೂಲಕ ಎದುರಾಳಿ ತಂಡದ ಬೌಲರ್‌ಗಳಿಗೆ ನಡುಕ ಹುಟ್ಟಿಸಿದಂತು ನಿಜ. ಯಾವುದೇ, ವಿಕೆಟ್ ನಷ್ಟವಿಲ್ಲದೆ 20 ಓವರ್‌ಗಳಲ್ಲಿ 307 ರನ್ ಗಳಿಸಿದ ಗೋಮ್ಟಿ ಥಂಡರ್ ತಂಡ, ದೇಶೀಯ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ತಂಡ ಎಂಬ ಕೀರ್ತಿಗೆ ಭಾಜನವಾಯಿತು.
ಐಪಿಎಲ್ ಹರಾಜಿನಲ್ಲಿ ಮುಖಭಂಗ, ಮೈದಾನದಲ್ಲಿ ಪ್ರತ್ಯುತ್ತರ
ಸ್ವಸ್ತಿಕ್ ಚಿಕಾರ ಅವರು ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ (2024) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (2025) ತಂಡಗಳ ಭಾಗವಾಗಿದ್ದರು. ಆದರೆ, ವಿಪರ್ಯಾಸವೆಂದರೆ ಎರಡೂ ಸೀಸನ್‌ಗಳಲ್ಲಿ ಅವರಿಗೆ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಐಪಿಎಲ್ 2026ರ ಹರಾಜಿನಲ್ಲಿ 30 ಲಕ್ಷ ರೂಪಾಯಿ ಮೂಲ ಬೆಲೆಯೊಂದಿಗೆ ಬಂದಿದ್ದ ಅವರನ್ನು ಖರೀದಿಸಲು ಯಾವುದೇ ಫ್ರಾಂಚೈಸಿ ಆಸಕ್ತಿ ತೋರಿರಲಿಲ್ಲ. ಇದೀಗ ತಮ್ಮ ಬ್ಯಾಟಿಂಗ್ ಪರಾಕ್ರಮದ ಮೂಲಕ ತಾವೊಬ್ಬ 'ಮ್ಯಾಚ್ ವಿನ್ನರ್' ಎಂಬುದನ್ನು ಆಯ್ಕೆದಾರರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ವಿರಾಟ್ ಕೊಹ್ಲಿ ಅಭಿಮಾನಿಯ ಕೆಚ್ಚೆದೆಯ ಆಟ
ಆರ್‌ಸಿಬಿ ಮಾಜಿ ಆಟಗಾರ ಹಾಗೂ ವಿರಾಟ್ ಕೊಹ್ಲಿ ಅವರ ಕಟ್ಟಾ ಅಭಿಮಾನಿಯಾಗಿರುವ ಸ್ವಸ್ತಿಕ್ ಚಿಕಾರ, ಕೊಹ್ಲಿಯವರಂತೆಯೇ ಆಕ್ರಮಣಕಾರಿ ಶೈಲಿಯಲ್ಲಿ ರನ್ ಗಳಿಸುವುದು ಅವರ ವಿಶೇಷತೆ. ಇಂದಿನ ಈ ಭರ್ಜರಿ ಇನ್ನಿಂಗ್ಸ್ ಮೂಲಕ ಮುಂಬರುವ ದಿನಗಳಲ್ಲಿ ಮತ್ತೆ ಐಪಿಎಲ್ ಕದ ತಟ್ಟುವ ಎಲ್ಲಾ ಮುನ್ಸೂಚನೆಗಳನ್ನು ನೀಡಿದ್ದಾರೆ.












Click it and Unblock the Notifications