Shreyanka Patil: WPL ನಿಂದ ಹೊರಬಿದ್ದ ಶ್ರೇಯಾಂಕಾಗೆ ವಿಶೇಷ ಸಂದೇಶ ಕೊಟ್ಟ ಆರ್‌ಸಿಬಿ; ಸ್ನೇಹ್ ರಾಣಾ ತಂಡಕ್ಕೆ
ಮಹಿಳಾ ಪ್ರೀಮಿಯರ್ ಲೀಗ್ 2025ರ ಆವೃತ್ತಿಯಲ್ಲಿ ಆರ್ ಸಿಬಿ ಒಂದರ ಹಿಂದೊಂದು ಆಘಾತ ಎದುರಾಗುತ್ತಿದೆ. 2024ರ ಆವೃತ್ತಿಯಲ್ಲಿ ತಂಡ ಚಾಂಪಿಯನ್ ಆಗಲು ಪ್ರಮುಖ ಪಾತ್ರ ವಹಿಸಿದ್ದ ಮುಖ್ಯ ಆಟಗಾರರು ಗಾಯಗೊಳ್ಳುತ್ತಿರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ಸೋಫಿ ಡಿವೈನ್, ಸೋಫಿ ಮೆಲೊನಿಕ್ಸ್, ಕೇಟ್ ಕ್ರಾಸ್, ಆಶಾ ಶೋಭನಾ ಮಹಿಳಾ ಪ್ರೀಮಿಯರ್ ಲೀಗ್‌ನಿಂದ ಹೊರಬಿದ್ದಿದ್ದಾರೆ.
ಸೋಫಿ ಡಿವೈನ್ ಕ್ರಿಕೆಟ್‌ನಿಂದ ಬ್ರೇಕ್ ತೆಗೆದುಕೊಂಡಿದ್ದರೆ ಸೋಫಿ ಮೆಲೋನಿಕ್ಸ್, ಕೇಟ್ ಕ್ರಾಸ್ ಮತ್ತು ಆಶಾ ಶೋಭನ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದೆಲ್ಲದರ ಜೊತೆಗೆ ಕಳೆದ ಆವೃತ್ತಿಯಲ್ಲಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಗೆದ್ದಿದ್ದ ಶ್ರೇಯಾಂಕಾ ಪಾಟೀಲ್ ಕೂಡ ಮಹಿಳಾ ಪ್ರೀಮಿಯರ್ ಲೀಗ್ 2025ರ ಆವೃತ್ತಿಯಿಂದ ಹೊರಬಿದ್ದಿದ್ದಾರೆ.

ಹೃದಯ ಒಡೆದಿದೆ ಎಂದ ಶ್ರೇಯಾಂಕಾ
ಮಹಿಳಾ ಪ್ರೀಮಿಯರ್ ಲೀಗ್ 2025ರ ಮೊದಲ ಪಂದ್ಯದಲ್ಲಿ ಆರ್ ಸಿಬಿ ಗುಜರಾತ್ ಜೈಂಟ್ಸ್ ವಿರುದ್ಧ ಆಡಿತ್ತು. 202 ರನ್ ಚೇಸ್ ಮಾಡಿ ಗೆದ್ದು ಹೊಸ ಇತಿಹಾಸ ರಚಿಸಿದೆ. ಪಂದ್ಯದ ವೇಳೆಯೇ ಶ್ರೇಯಾಂಕಾ ಪಾಟೀಲ್ ತಮ್ಮ ಇನ್‌ಸ್ಟಾಗ್ರಾಂ ಮತ್ತು ಎಕ್ಸ್ ಖಾತೆಯಲ್ಲಿ 'ಹೃದಯ ಒಡೆದಿದೆ, ಆದರೆ ಮತ್ತೆ ಹಾರುತ್ತೇನೆ' ಎಂದು ಬರೆದುಕೊಂಡಿದ್ದರು.
ಶನಿವಾರ ಸಂಜೆ ಆರ್ ಸಿಬಿ ಅಧಿಕೃತವಾಗಿ ಶ್ರೇಯಾಂಕಾ ಪಾಟೀಲ್ ಅನುಪಸ್ಥಿತಿಯನ್ನು ಖಚಿತಪಡಿಸಿದೆ. ಎಕ್ಸ್ ಖಾತೆಯಲ್ಲಿ ಶ್ರೇಯಾಂಕಾ ಪಾಟೀಲ್ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಆರ್ ಸಿಬಿ "ಸವಾಲುಗಳು ಕಠಿಣ, ಆದರೆ ನೀವು ಇನ್ನಷ್ಟು ಗಟ್ಟಿಯಾಗಿದ್ದೀರಾ ಶ್ರೇಯಾಂಕಾ!
ಮಹಿಳಾ ಪ್ರೀಮಿಯರ್ ಲೀಗ್ 2025ರ ಆರಂಭದ ಮೊದಲು ಫಿಟ್ ಆಗಲು ನೀವು ತುಂಬಾ ಪ್ರಯತ್ನಿಸಿದ್ದೀರಿ. ನಮ್ಮ ಅಭಿಯಾನದ ಭಾಗವಾಗುವುದನ್ನು ನೀವು ಎಷ್ಟು ಮಿಸ್ ಮಾಡಿಕೊಳ್ಳುತ್ತೀರಾ ಎನ್ನುವುದು ನಮಗೆ ತಿಳಿದಿದೆ. ನಿಮ್ಮ ಶಕ್ತಿ ಮತ್ತು ಉತ್ಸಾಹವನ್ನು ನಾವು ಮೈದಾನದಲ್ಲಿ ನಮ್ಮೊಂದಿಗೆ ಕೊಂಡೊಯ್ಯುತ್ತೇವೆ! ಬೇಗ ಗುಣಮುಖರಾಗಿ ಮತ್ತು ಬಲಶಾಲಿಯಾಗಿ ಹಿಂತಿರುಗಿ.
ಮುಂದಿನ ಆವೃತ್ತಿಯಲ್ಲಿ ನೀವು ಆರ್ ಸಿಬಿ ಜೆರ್ಸಿಯಲ್ಲಿ ಆಡುವುದನ್ನು ನೋಡಲು ಕಾಯುತ್ತಿದ್ದೇವೆ ಎಂದು ಪೋಸ್ಟ್ ಹಂಚಿಕೊಂಡಿದೆ. ಆರ್ ಸಿಬಿ ಪೋಸ್ಟ್‌ಗೆ ಶ್ರೇಯಾಂಕಾ ಪಾಟೀಲ್ ಪ್ರತಿಕ್ರಿಯೆ ನೀಡಿದ್ದು "ಧನ್ಯವಾದಗಳು, ಆದರೆ ಆ ಕೊನೆಯ ಸಾಲು..." ಎಂದು ದುಃಖದ ಎಮೋಜಿ ಹಾಕಿದ್ದಾರೆ.
ಶ್ರೇಯಾಂಕಾ ಪಂದ್ಯಾವಳಿಯಿಂದ ಹೊರಗುಳಿದ ಬಳಿಕ ಆರ್ ಸಿಬಿ ಸ್ಪಿನ್ನರ್ ಸ್ನೇಹ್ ರಾಣಾ ಅವರನ್ನು ತಂಡಕ್ಕೆ ಆಯ್ಕೆ ಮಾಡಿದೆ. ಕಳೆದ ಆವೃತ್ತಿಯಲ್ಲಿ ಗುಜರಾತ್ ಜೈಂಟ್ಸ್ ಪರವಾಗಿ ಆಡಿದ್ದ ಸ್ನೇಹ್ ರಾಣಾರನ್ನು ಹರಾಜಿಗೆ ಮುನ್ನ ಬಿಡುಗಡೆ ಮಾಡಲಾಗಿತ್ತು. ಹರಾಜಿನಲ್ಲಿ ಅವರು ಅನ್‌ಸೋಲ್ಡ್ ಆಗಿದ್ದರು. ಈಗ ಆರ್ ಸಿಬಿ ಪರವಾಗಿ ಆಡಲು ಸಜ್ಜಾಗಿದ್ದಾರೆ.












Click it and Unblock the Notifications