ಆರ್‌ಸಿಬಿ ಐಪಿಎಲ್ ಟ್ರೋಫಿ ಗೆದ್ದ ಖುಷಿಯಲ್ಲಿ ಕೈ ಕೊಯ್ದುಕೊಂಡು ವಿರಾಟ್ ಕೊಹ್ಲಿ ಹಣೆಗೆ ರಕ್ತದಲ್ಲಿ ತಿಲಕವಿಟ್ಟ ಅಂಧಾಭಿಮಾನಿ
IPl 2025 RCB Trophy Win: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್‌ಸಿಬಿಯು ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದು 17 ವರ್ಷಗಳ ಬಳಿಕ ಮೊದಲ ಬಾರಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಈ ಗೆಲುವನ್ನು ಬರೀ ಕರ್ನಾಟಕ, ದೇಶ ಮಾತ್ರವಲ್ಲದೇ ಪ್ರಾಪಂಚದಾದ್ಯಂತ ಅದ್ಧೂರಿಯಾಗಿ ಸಂಭ್ರಾಚರಣೆ ಮಾಡಿದರು. ಈ ನಡುವೆಯೇ ವಿಚಿತ್ರವಾಗಿ ಅಂಧಾಭಿಮಾನ ಮೆರೆದಿರುವ ಘಟನೆಗಳು ನಡೆದಿದ್ದು, ಇದಕ್ಕೆ ಸಾಕ್ಷಿಯೆಂಬಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಇದಕ್ಕೆ ನೆಟ್ಟಿಗರು ಕೂಡ ಆಕ್ರೊಶ ವ್ಯಕ್ಯಪಡಿಸುತ್ತಿದ್ದಾರೆ.
ಅಹಮದಾಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯಾ ಕ್ರಿಕೆಟ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್‌ಗಳಿಂದ ಸೋಲಿಸಿ ಮೊದಲ ಐಪಿಎಲ್ ಟ್ರೋಫಿಯನ್ನು ಆರ್‌ಸಿಬಿ ಗೆದ್ದುಕೊಂಡಿತು. ಜೂನ್ 3ರಂದು ಟ್ರೋಫಿ ಗೆದ್ದಿದ್ದು, ಈ ವೇಳೆ ವಿರಾಟ್ ಕೊಹ್ಲಿ ಅವರು ಮೈದಾನದಲ್ಲೇ ಕಣ್ಣೀರಿಟ್ಟು ಬಳಿಕ ಗೆಲುವಿನ ಸಂಭ್ರಮಾಚರಣೆ ಮಾಡಿದರು.

ಆರ್‌ಸಿಬಿ ಟ್ರೋಫಿ ಗೆಲುವನ್ನು ವಿಶ್ವದಾದ್ಯಂತ ಅಭಿಮಾನಿಗಳು ಆಚರಣೆ ಮಾಡಿದರು. ಈ ನಡುವೆಯೇ ಅಂಧಾಭಿಮಾನಿಯೊಬ್ಬ ಹುಚ್ಚಾಟ ಮೆರೆದಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಪೋಸ್ಟರ್‌ನಲ್ಲಿನ ವಿರಾಟ್ ಕೊಹ್ಲಿ ಅವರ ಫೋಟೋಗೆ ತನ್ನ ಕೈ ಕೊಯ್ದುಕೊಂಡು ರಕ್ತದಲ್ಲಿ ತಿಲಕ ಹಚ್ಚಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. 'ಇಂತಹ ಹುಚ್ಚು ಅಭಿಮಾನಿಗಳಿಂದ ಸಮಾಜಕ್ಕೆ ಕೆಟ್ಟ ಸಂದೇಶ ಹೋಗುತ್ತಿದೆ. ಮೊದಲು ಇವನನ್ನು ಅರೆಸ್ಟ್ ಮಾಡಿ,' ಎಂದು ಆಗ್ರಹಿಸಿದ್ದಾರೆ. ಈ ವಿಡಿಯೋವನ್ನು Ghar Ke Kalesh ಎಂಬ ಟ್ವೋಟ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಮಂಗಳವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ಫೈನಲ್ ಪಂದ್ಯದಲ್ಲಿ ಗೆದ್ದು ಮೊದಲ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಆಗ ಇಡೀ ದೇಶವೇ ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಯಲ್ಲಿ ಮುಳುಗಿ ಹೋಗಿತ್ತು. ಮಾರನೇ ದಿನ ಬುಧವಾರ ಬೆಂಗಳೂರಿನಲ್ಲಿ ವಿಜಯಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ವೇಳೆ ಎಂ.ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಸಂಭವಿಸಿ 11 ಜನ ಪ್ರಾಣ ಕಳೆದುಕೊಂಡ್ರು. 40 ಹೆಚ್ಚು ಮಂದಿ ಗಾಯಗೊಂಡರು. ಈ ದುರಂತ ಇಡೀ ದೇಶವನ್ನೇ ಬೆಚ್ಚಿಬೀಳುವಂತೆ ಮಾಡಿತು.
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದ ದುರಂತ ಸಂಬಂಧ ಈಗಾಗಲೇ ಕೆಲ ಪೊಲೀಸ್ ಅಧಿಕಾರಿಗಳನ್ನು ಕರ್ನಾಟಕ ರಾಜ್ಯ ಸರ್ಕಾರ ಅಮಾನತು ಮಾಡಿದೆ. ಅಲ್ಲದೆ, ಆರ್‌ಸಿಬಿ ಹಾಗೂ ಕೆಎಸ್‌ಸಿಎ ವಿರುದ್ಧವೂ ಕೂಡ ಎಫ್‌ಐಆರ್ ದಾಖಲಾಗಿದ್ದು, ತಂಡದ ಮಾರ್ಕೆಟಿಂಗ್ ಅಧಿಕಾರಿ ನಿಖಿಲ್ ಸೋಸಲೆ ಅವರನ್ನು ಬಂಧಿಸಲಾಯಿತು. ಅವರು ಮುಂಬೈಗೆ ತೆರಳುತ್ತಿದ್ದಾಗ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಬಂಧಿಸಲಾಯಿತು.
ಈ ದುರಂತ ನಡೆದ ಬಳಿಕ ಬಿಸಿಸಿಐ ವಿಜಯೋತ್ಸವ ಆಚರಣೆಗೆ ಮಾರ್ಗಸೂಚಿಗಳನ್ನು ಹೊರಡಿಸಲು ಮುಂದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇಂತಹ ಘಟನೆಗಳು ಮರುಕಳಿಸಬಾರದೆಂದರೆ ನಾವು ಮೂಕ ಪ್ರೇಕ್ಷಕರಂತೆ ಕುಳಿತುಕೊಳ್ಳಲು ಆಗುವುದಿಲ್ಲ. ಇದಕ್ಕೆ ಮಾರ್ಗಸೂಚಿಗಳನ್ನು ಪ್ರಕಟಿಸಲು ಚಿಂತನೆ ನಡೆಸುತ್ತಿದ್ದೇವೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಕ್ರಿಕ್‌ಬಜ್‌ಗೆ ತಿಳಿಸಿದ್ದಾರೆ. ಅಲ್ಲದೆ, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ನಾವು ಪ್ರಯತ್ನಿಸುತ್ತೇವೆ ಅಂತಲೂ ತಿಳಿಸಿದ್ಧಾರೆ.












Click it and Unblock the Notifications