RCB vs GG: ಆರ್‌ಸಿಬಿ ಅಬ್ಬರಕ್ಕೆ ದಾಖಲೆ ಪುಡಿ! ಶುಭಾರಂಭ ಮಾಡಿದ ಮಂಧಾನ ಪಡೆ
ಮಹಿಳಾ ಪ್ರೀಮಿಯರ್ ಲೀಗ್ 2025ರ ಉದ್ಘಾಟನಾ ಪಂದ್ಯದಲ್ಲೇ ಆರ್ ಸಿಬಿ ಅಬ್ಬರಿಸಿದೆ. ಮೊದಲ ಪಂದ್ಯದಲ್ಲೇ ಹಲವು ದಾಖಲೆಗಳನ್ನು ಬರೆದ ಆರ್ ಸಿಬಿ ಗುಜರಾತ್ ಜೈಂಟ್ಸ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತಿ ಹೆಚ್ಚು ಸ್ಕೋರ್ ಮಾಡಿ ಗೆದ್ದ ದಾಖಲೆ ಇದೀಗ ಆರ್ ಸಿಬಿಯದ್ದಾಗಿದೆ.
ವಡೋದರಾದ ಕೋಟಂಬಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 201 ರನ್ ಗಳಿಸಿತು. ಆರಂಭದಲ್ಲಿ ನಿಧಾನಗತಿಯಲ್ಲಿ ರನ್ ಗಳಿಸಿದರೂ, ಬಳಿಕ ನಾಯಕಿ ಆಶ್ಲೆ ಗಾರ್ಡ್ನರ್ , ಬೆತ್ ಮೂನಿ ಮತ್ತು ಡಿಯೇಂಡ್ರ ಡಾಟಿನ್ ಅವರ ಸ್ಫೋಟಕ ಆಟದ ನೆರವಿನಿಂದ ಬೃಹತ್ ಮೊತ್ತ ಕಲೆಹಾಕಿತು.

ಬೆತ್ ಮೂನಿ 42 ಎಸೆತಗಳಲ್ಲಿ 8 ಬೌಂಡರಿ ಸಹಿತ 56 ರನ್ ಗಳಿಸಿದರೆ. ನಾಯಕಿ ಆಶ್ಲೆ ಗಾರ್ಡ್ನರ್ ಸ್ಫೋಟಕ ಇನ್ನಿಂಗ್ಸ್ ಆಡಿದರು. 37 ಎಸೆತಗಳಲ್ಲಿ 3 ಬೌಂಡರಿ 8 ಸಿಕ್ಸರ್ ಸಹಿತ 79 ರನ್ ಗಳಿಸಿದರು. ಡಿಯೇಂಡ್ರ ಡಾಟಿನ್ 13 ಎಸೆತಗಳಲ್ಲಿ 25 ರನ್ ಗಳಿಸಿದರು.
ರಿಚಾ ಘೋಷ್, ಕನಿಕಾ ಅಬ್ಬರ
202 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಆರ್ ಸಿಬಿ ಆರಂಭದಲ್ಲಿ ಆಘಾತ ಅನುಭವಿಸಿತು. ಸ್ಮೃತಿ ಮಂಧಾನ 9 ರನ್ ಗಳಿಸಿ ಔಟಾದರೆ, ಡೇನಿಯಲ್ ವ್ಯಾಟ್ 4 ರನ್ ಗಳಿಸಿ ಔಟಾದರು. ಬಳಿಕ ಜೊತೆಯಾದ ಎಲ್ಲಿಸ್ ಪೆರ್‍ರಿ ಮತ್ತು ರಾಘ್ವಿ ಬಿಸ್ಟ್ ತಂಡಕ್ಕೆ ಆಸರೆಯಾದರು. ಮೂರನೇ ವಿಕೆಟ್‌ಗೆ ಈ ಜೋಡಿ 86 ರನ್‌ಗಳನ್ನು ಕಲೆಹಾಕಿತು.
ರಾಘವಿ 27 ಎಸೆತಗಳಲ್ಲಿ 25 ರನ್ ಗಳಿಸಿದರೆ. ಎಲ್ಲಿಸ್ ಪೆರ್‍ರಿ 34 ಎಸೆತಗಳಲ್ಲಿ 57 ರನ್ ಗಳಿಸಿ ಔಟಾದರು. ಬಳಿಕ ಜೊತೆಯಾದ ರಿಚಾ ಘೋಷ್ ಮತ್ತು ಕನಿಕಾ ಅಹುಜಾ ಗುಜರಾತ್ ಜೈಂಟ್ಸ್ ಬೌಲರ್ ಗಳ ಬೆಂಡೆತ್ತಿದರು. ಒತ್ತಡವೇ ಇಲ್ಲದೆ ಬೌಂಡರಿ, ಸಿಕ್ಸರ್ ಬಾರಿಸಿದ ಈ ಜೋಡಿ ನಾಲ್ಕನೇ ವಿಕೆಟ್‌ಗೆ 93 ರನ್ ಕಲೆಹಾಕಿದರು.
ಕನಿಕಾ ಅಹುಜಾ 13 ಎಸೆತಗಳಲ್ಲಿ 4 ಬೌಂಡರಿ ಸಹಿತ ಅಜೇಯ 30 ರನ್ ಗಳಿಸಿದರೆ, ರಿಚಾ ಘೋಷ್ 27 ಎಸೆತಗಳಲ್ಲಿ 7 ಬೌಂಡರಿ 4 ಭರ್ಜರಿ ಸಿಕ್ಸರ್ ಸಹಿತ ಅಜೇಯ 64 ರನ್ ಗಳಿಸುವ ಮೂಲಕ ಇನ್ನೂ 9 ಎಸೆತ ಬಾಕಿ ಇರುವಂತೆಯೇ ಆರ್ ಸಿಬಿ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಫೆಬ್ರವರಿ 17ರಂದು ನಡೆಯುವ ಮುಂದಿನ ಪಂದ್ಯದಲ್ಲಿ ಆರ್ ಸಿಬಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.












Click it and Unblock the Notifications