ಆರ್‌ಸಿಬಿ ಫ್ಯಾನ್ಸ್‌ಗೆ ಹಬ್ಬ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳಿಗೆ ಸರ್ಕಾರ ಗ್ರೀನ್ ಸಿಗ್ನಲ್
ಬೆಂಗಳೂರು: ಆರ್‌ಸಿಬಿ ಅಭಿಮಾನಿಗಳಿಗೆ ರಾಜ್ಯ ಸರ್ಕಾರ ಕೊನೆಗೂ ಸಿಹಿಸುದ್ದಿ ನೀಡಿದೆ. ಬೆಂಗಳೂರಿನ ಐಕಾನಿಕ್ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಅಂತರರಾಷ್ಟ್ರೀಯ ಪಂದ್ಯಗಳು ಹಾಗೂ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಕರ್ನಾಟಕ ಸರ್ಕಾರ ಅನುಮತಿ ನೀಡಿದೆ. ಕರ್ನಾಟಕ ಗೃಹ ಇಲಾಖೆಯು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್‌ಸಿಎ) ಈ ಸಂಬಂಧ ಅಧಿಕೃತ ಅನುಮೋದನೆ ನೀಡಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕೆಎಸ್‌ಸಿಎ, ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಗಳು ವಿಧಿಸಿರುವ ನಿರ್ದಿಷ್ಟ ಷರತ್ತುಗಳು ಹಾಗೂ ನಿಯಮಗಳನ್ನು ಪಾಲಿಸುವ ಷರತ್ತಿನ ಮೇರೆಗೆ ಪಂದ್ಯಗಳ ಆಯೋಜನೆಗೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದೆ. "ತಜ್ಞರ ಪರಿಶೀಲನಾ ಸಮಿತಿಯ ಮುಂದೆ ಸಂಸ್ಥೆ ಈಗಾಗಲೇ ವಿವರವಾದ ವಿಷಯ ಮಂಡಿಸಿದ್ದು, ಭದ್ರತೆ, ಸುರಕ್ಷತೆ ಮತ್ತು ಜನಸಂದಣಿ ನಿರ್ವಹಣೆಗೆ ಸಂಬಂಧಿಸಿದ ಎಲ್ಲ ಕ್ರಮಗಳನ್ನು ಜಾರಿಗೆ ತರಲು ಸಂಪೂರ್ಣ ಬದ್ಧವಾಗಿದೆ" ಎಂದು ಕೆಎಸ್‌ಸಿಎ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ಈ ಅನುಮತಿಯಿಂದಾಗಿ ಮುಂದಿನ ದಿನಗಳಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ಹಾಗೂ ಐಪಿಎಲ್ ಪಂದ್ಯಗಳು ಮತ್ತೆ ನಡೆಯುವ ನಿರೀಕ್ಷೆ ಮೂಡಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಸಂತಸ ಹೆಚ್ಚಾಗಿದೆ. ಜೊತೆಗೆ, ಭದ್ರತೆ ಮತ್ತು ಜನಸಂದಣಿ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
ಈ ನಿರ್ಧಾರದಿಂದಾಗಿ ಬೆಂಗಳೂರು ಮತ್ತೊಮ್ಮೆ ಪ್ರಮುಖ ಕ್ರಿಕೆಟ್ ಕೇಂದ್ರವಾಗಿ ಮೆರೆಯುವ ಸಾಧ್ಯತೆ ಇದೆ. ಅಂತರರಾಷ್ಟ್ರೀಯ ಪಂದ್ಯಗಳ ಜೊತೆಗೆ ಐಪಿಎಲ್ ಪಂದ್ಯಗಳ ಆಯೋಜನೆಯಿಂದಾಗಿ ನಗರಕ್ಕೆ ದೇಶ-ವಿದೇಶಗಳಿಂದ ಅಭಿಮಾನಿಗಳು ಆಗಮಿಸುವ ನಿರೀಕ್ಷೆಯಿದ್ದು, ಪ್ರವಾಸೋದ್ಯಮಕ್ಕೂ ಲಾಭವಾಗಲಿದೆ. ಸರ್ಕಾರದ ಅನುಮತಿ ಮತ್ತು ಕೆಎಸ್‌ಸಿಎಯ ಬದ್ಧತೆಯಿಂದಾಗಿ, ಎಂ.ಚಿನ್ನಸ್ವಾಮಿ ಕ್ರೀಡಾಂಗಣವು ಮತ್ತೆ ಕ್ರಿಕೆಟ್ ಸಂಭ್ರಮದ ಕೇಂದ್ರವಾಗಲು ಸಜ್ಜಾಗುತ್ತಿದೆ ಎಂಬುದು ಕ್ರೀಡಾಭಿಮಾನಿಗಳ ಮಾತು.
ಇತ್ತೀಚೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಜನಸಂದಣಿ ನಿಯಂತ್ರಣವನ್ನು ಮತ್ತಷ್ಟು ಬಲಪಡಿಸಲು 300ರಿಂದ 350 ಎಐ ತಂತ್ರಜ್ಞಾನ ಆಧಾರಿತ ಕ್ಯಾಮೆರಾಗಳನ್ನು ಅಳವಡಿಸಲು ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕಾಗಿ ಅಂದಾಜು 4.50 ಕೋಟಿ ರೂಪಾಯಿ ವೆಚ್ಚವನ್ನು ತಾವೇ ಭರಿಸುವುದಾಗಿ ಆರ್‌ಸಿಬಿ ತಿಳಿಸಿತ್ತು. ಆಧುನಿಕ ನಿಗಾ ತಂತ್ರಜ್ಞಾನದಿಂದ ಕೆಎಸ್‌ಸಿಎ ಮತ್ತು ಕಾನೂನು ಜಾರಿಗೊಳಿಸುವ ಸಂಸ್ಥೆಗಳಿಗೆ ಜನಸಂದಣಿಯ ಚಲನವಲನವನ್ನು ಸಮರ್ಥವಾಗಿ ನಿಯಂತ್ರಿಸಲು, ಸಾಲಿನಲ್ಲಿ ಶಿಸ್ತು ಕಾಪಾಡಲು, ಪ್ರವೇಶ-ನಿರ್ಗಮನವನ್ನು ಟ್ರ್ಯಾಕ್ ಮಾಡಲು, ಅನಧಿಕೃತ ಪ್ರವೇಶ ತಡೆಯಲು ಮತ್ತು ಅಭಿಮಾನಿಗಳ ಒಟ್ಟು ಸುರಕ್ಷತೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ಹೇಳಿತ್ತು.
ಆರ್‌ಸಿಬಿ ದುರಂತದಿಂದ ಪಂದ್ಯ ರದ್ದು ನಿರ್ಧಾರ
18 ವರ್ಷಗಳ ಬಳಿಕ ಮೊದಲ ಬಾರಿಗೆ ಐಪಿಎಲ್ ಕಿರೀಟ ಗೆದ್ದ ಸಂಭ್ರಮವನ್ನು ಆಚರಿಸಲು ಆರ್‌ಸಿಬಿ ವಿಜಯೋತ್ಸವ ಪೆರೇಡ್ ಆಯೋಜಿಸಿತ್ತು. ಈ ಸಂದರ್ಭದಲ್ಲಿ ಭಾರೀ ಜನಸಂದಣಿ ಸೇರಿದ್ದರಿಂದ, ಕಾಲ್ತುಳಿತ ಸಂಭವಿಸಿ ಹಲವರು ಸಾವನ್ನಪ್ಪಿದ್ದರು. ಇದರಿಂದ ಭದ್ರತೆ ಮತ್ತು ನಿರ್ವಹಣೆ ಕುರಿತಂತೆ ಗಂಭೀರ ಚರ್ಚೆಗಳು ಹುಟ್ಟಿಕೊಂಡವು. ಇದೇ ಘಟನೆ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳ ಆಯೋಜನೆಗೆ ನಿರ್ಬಂಧ ಜಾರಿಯಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೇ ಕಾರಣಕ್ಕೆ ಪಂದ್ಯಗಳನ್ನು ಮರಳಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತರುವ ಕೆಎಸ್‌ಸಿಎ ಪ್ರಯತ್ನಗಳು ಇತ್ತೀಚೆಗೆ ವಿಫಲವಾಗಿದ್ದವು.
ಬಳಿಕ ಕೆಎಸ್‌ಸಿಎ ಆಡಳಿತ ಮಂಡಳಿ ಸರ್ಕಾರವನ್ನು ಸಂಪರ್ಕಿಸಿ ಮತ್ತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳಿಗೆ ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿತ್ತು. ಚಿನ್ನಸ್ವಾಮಿ ಕ್ರೀಡಾಂಗಣವು ಐಪಿಎಲ್‌ನ 18 ಸೀಸನ್‌ಗಳಲ್ಲಿ ಬಹುತೇಕ ಅವಧಿಯಲ್ಲಿ ಆರ್‌ಸಿಬಿ ತಂಡದ ತವರಾಗಿ ಉಳಿದಿದೆ. ಕೇವಲ ಎರಡು ಸಂದರ್ಭಗಳಲ್ಲಿ ಮಾತ್ರ ಪಂದ್ಯಗಳು ಬೇರೆ ಕಡೆ ನಡೆದಿದ್ದವು. ಈ ಬಾರಿ ಐಪಿಎಲ್ ಪಂದ್ಯಕ್ಕೆ ಅನುಮತಿ ಸಿಗಲ್ಲ ಎಂಬ ಆತಂಕದಲ್ಲಿದ್ದ ಆರ್‌ಸಿಬಿ ಫ್ಯಾನ್ಸ್ ನಿಟ್ಟುಸಿರುಬಿಟ್ಟಿದ್ದಾರೆ. ಸರ್ಕಾರದ ಅನುಮತಿ ಹಿನ್ನೆಲೆ ಆರ್‌ಸಿಬಿ ಅಭಿಮಾನಿಗಳಷ್ಟೇ ಅಲ್ಲ, ಬೆಂಗಳೂರು ಕ್ರಿಕೆಟ್ ಪ್ರೇಮಿಗಳಿಗೆ ಹೊಸ ನಿರೀಕ್ಷೆ ಹುಟ್ಟಿಸಿದೆ.












Click it and Unblock the Notifications