IPL Playoffs 2024: ಆರ್‌ಸಿಬಿಯನ್ನು ಪ್ಲೇ ಆಫ್ ರೇಸ್‌ನಲ್ಲಿ ಉಳಿಸಿದ ಐದು ಅಂಶಗಳು: ಇನ್ನು ಲೆಕ್ಕಾಚಾರ ಶುರು
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುರುವಾರ ಪಂಜಾಬ್ ಕಿಂಗ್ ತಂಡವನ್ನು 60 ರನ್‌ಗಳಿಂದ ಮಣಿಸಿ, ಪ್ರಸಕ್ತ ಸಾಲಿನ ಐಪಿಎಲ್ ಪ್ಲೇ ಆಫ್ ರೇಸ್‌ನಲ್ಲಿ ಜೀವಂತವಾಗಿದೆ. ಅಮೋಘ ಸಂಘಟಿತ ಆಟದ ಪ್ರದರ್ಶನ ನೀಡಿದ ಆರ್‌ಸಿಬಿ ಆಟಗಾರರು ಗೆಲುವಿನಲ್ಲಿ ಮಿಂಚಿದರು. ಧರ್ಮಶಾಲಾದಲ್ಲಿ ದಾಖಲಿಸಿದ ಗೆಲುವಿನ ನೆರವಿನಿಂದ ಬೆಂಗಳೂರು ತಂಡದ ನೆಟ್ ರನ್ ರೇಟ್ ಸಹ ಪ್ಲಸ್‌ಗೆ ಬಂದಿದೆ.
ಆರ್‌ಸಿಬಿ ತಂಡದ ಮುಂದಿರುವುದು ಇನ್ನು ಎರಡೇ ಗೆಲುವು. ಇನ್ನು ಎರಡು ಗೆಲುವನ್ನು ಉತ್ತಮ ಮಾರ್ಜಿನ್‌ನಲ್ಲಿ ಗೆದ್ರೆ, ಪ್ಲೇ ಆಫ್ ಆಸೆ ಹಸಿರಾಗುತ್ತದೆ. ಗುರುವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡಕ್ಕೆ ವರವಾದ ಅಂಶಗಳು ಯಾವವು ಎಂಬ ಬಗ್ಗೆ ವರದಿ ಇಲ್ಲಿದೆ.

ಅಬ್ಬರಿಸಿದ ವಿರಾಟ್ ಕೊಹ್ಲಿ
ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಭರ್ಜರಿ ಪ್ರದರ್ಶನ ಮುಂದುವರಿಸಿದ್ದಾರೆ. ಪ್ರಸಕ್ತ ಐಪಿಎಲ್‌ನಲ್ಲಿ ಸೊಗಸಾದ ಫಾರ್ಮ್‌ನಲ್ಲಿರುವ ವಿರಾಟ್, ಪಂದ್ಯದ ಮಹತ್ವವನ್ನು ಅರಿತು ಆಡಿದರು. ಅಲ್ಲದೆ ತಮ್ಮ ಸ್ಟ್ರೈಕ್ ರೇಟ್ ಮೇಲೆಯೂ ಹೆಚ್ಚಿನ ಒತ್ತನ್ನು ನೀಡಿದರು. ಆರಂಭದಲ್ಲಿ ಸಿಕ್ಕ ಜೀವದಾನದ ಲಾಭವನ್ನು ಎರಡೂ ಕೈಗಳಿಂದ ಬಳಸಿಕೊಂಡ ವಿರಾಟ್ ಮನಮೋಹಕ ಇನ್ನಿಂಗ್ಸ್ ಕಟ್ಟಿದರು. ಓಪನರ್ ಆಗಿ ಕ್ರೀಸ್‌ಗೆ ಬಂದ ವಿರಾಟ್ 17.4 ಓವರ್‌ಗಳ ವರೆಗೆ ಕ್ರೀಸ್‌ನಲ್ಲಿ ಇದ್ದರು.
ವಿರಾಟ್ ಕ್ರೀಸ್‌ನಲ್ಲಿದ್ದಾರೆ ಎಂದರೆ ಅವರು ಅಷ್ಟೇ ಆಡುವುದು ಅಲ್ಲ ಬೇರೆ ಬ್ಯಾಟರ್‌ಗಳನ್ನು ಆಡಿಸುತ್ತಾರೆ. ಅಲ್ಲದೆ ಸ್ಟ್ರೈಕ್ ರೋಟೆಟ್ ಮಾಡುತ್ತಾರೆ. ಇದರ ಲಾಭ ಪೂರ್ಣವಾಗಿ ತಂಡಕ್ಕೆ ಆಯಿತು. ವಿರಾಟ್ 47 ಎಸೆತಗಳಲ್ಲಿ 92 ರನ್ ಸಿಡಿಸಿ ಔಟ್ ಆದರು. ಕೇವಲ 8 ರನ್‌ಗಳಿಂದ ಶತಕ ವಂಚಿತರಾದ ನಿರಾಸೆ ಅವರ ಮುಖದಲ್ಲಿ ಕಾಣಿಸಿಕೊಳ್ಳಲಿಲ್ಲ. ಬದಲಿಗೆ ತಂಡಕ್ಕೆ ಆದಷ್ಟು ಕೊಡುಗೆ ನೀಡಿದ ಸಂತೃಪ್ತಿ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು.

ರನ್ ವೇಗಕ್ಕೆ ಚುರುಕು ಮುಟ್ಟಿಸಿದ ರಜತ್
ಕಳೆದ ಕೆಲವು ಪಂದ್ಯಗಳಲ್ಲಿ ಭರ್ಜರಿ ಲಯಕ್ಕೆ ಮರಳಿರುವ ರಜತ್ ಪಟಿದಾರ್ ಪಂಜಾಬ್ ಕಿಂಗ್ಸ್ ವಿರುದ್ಧವೂ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಪವರ್ ಪ್ಲೇ ಇನ್ನು ಒಂದು ಓವರ್ ಇದ್ದಾಗಲೇ ಕ್ರೀಸ್‌ಗೆ ಬಂದ ರಜತ್, ಮಿಡ್ಲ್ ಓವರ್‌ಗಳಲ್ಲೂ ಪವರ್ ಪ್ಲೇ ರೀತಿ ಬ್ಯಾಟಿಂಗ್ ನಡೆಸಿದರು. ಸ್ಪಿನ್ ಬೌಲರ್‌ಗಳಿಗೆ ಉತ್ತಮವಾಗಿ ಆಡುತ್ತಾರೆ ಎಂಬ ಹೆಗ್ಗಳಿಕೆಗೆ ಸಮಾನರ್ಥಕವಾಗಿ ಬ್ಯಾಟ್ ಮಾಡಿದ ರಜತ್ ಅಬ್ಬರಿಸಿದರು.
ರಜತ್ ಪಟಿದಾರ್ ಕೇವಲ 23 ಎಸೆತಗಳಲ್ಲಿ 3 ಬೌಂಡರಿ, 6 ಸಿಕ್ಸರ್ ಸಹಾಯದಿಂದ 55 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಆರ್‌ಸಿಬಿ, ಪಂಜಾಬ್ ವಿರುದ್ಧ ಸವಾಲಿನ ಗುರಿ ಕಲೆ ಹಾಕುವಲ್ಲಿ ಇವರ ಕೊಡುಗೆ ಅಪಾರ.

ತಂಡಕ್ಕೆ ನೆರವಾದ ಭರ್ಜರಿ ಜೊತೆಯಾಟಗಳು
ಐಪಿಎಲ್ ಆರಂಭಿಕ ಪಂದ್ಯಗಳಲ್ಲಿ ತಂಡಕ್ಕೆ ನೆರವಾಗದ ಸ್ಟಾರ್ ಪ್ಲೇಯರ್ಸ್ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ತಂಡಕ್ಕೆ ಆಧಾರವಾದರು. ಮೊದಲು ವಿರಾಟ್ ಜೊತೆಗೂಡಿದ ರಜತ್ ಪಟಿದಾರ 32 ಎಸೆತಗಳಲ್ಲಿ 76 ರನ್ ಸಿಡಿಸಿ ತಂಡಕ್ಕೆ ನರವಾಯಿತು. ನಂತರ ವಿರಾಟ್ ಹಾಗೂ ಕ್ಯಾಮರೂನ್ ಗ್ರೀನ್ ಜೋಡಿ 46 ಎಸೆತಗಳಲ್ಲಿ 92 ರನ್‌ಗಳ ಅಮೂಲ್ಯ ಕಾಣಿಕೆ ನೀಡಿತು. ಇದು ಸಹ ಆರ್‌ಸಿಬಿ ಬಿಗ್ ಸ್ಕೋರ್ ಕಲೆ ಹಾಕಲು ಕಾರಣವಾಯಿತು.
ಗೆಲುವಿನ ಪಾರ್ಟಿಗೆ ಜಾಯಿನ್ ಆದ ಬೌಲರ್ಸ್
ಟೂರ್ನಿಯ ಆರಂಭದಲ್ಲಿ ರನ್‌ಗಳನ್ನು ಧಾರವಾಳವಾಗಿ ನೀಡಿ ಟೀಕೆಗೆ ಗುರಿಯಾಗಿದ್ದ ಆರ್‌ಸಿಬಿ ಬೌಲಿಂಗ್ ಟೀಮ್ ಸಹ ಗೆಲುವಿನ ಪಾರ್ಟಿಗೆ ಜಾಯಿನ್ ಆಯಿತು. ಸಂಘಟಿತ ದಾಳಿಯ ಪ್ರದರ್ಶನ ನೀಡಿದ ಆರ್‌ಸಿಬಿ ಬೌಲರ್ಸ್ ಪಂಜಾಬ್ ಬ್ಯಾಟರ್‌ಗಳನ್ನು ಕಟ್ಟಿ ಹಾಕಿದರು. ಇನ್ನು ಸ್ಪಿನ್ ಬೌಲರ್ ಸ್ಪಪ್ನಿಲ್ ಸಿಂಗ್ ಆರ್‌ಸಿಬಿ ತಂಡಕ್ಕೆ ಎಂಟ್ರಿ ಕೊಟ್ಟಾಗಿಂದ ತಂಡದ ಲಕ್ ಚೇಂಜ್ ಆಗಿದೆ. ಇವರು ಪವರ್ ಪ್ಲೇನಲ್ಲಿ ಉತ್ತಮ ದಾಳಿ ಸಂಘಟಿಸಿದರು.
ಸ್ಪಿನ್ ಬೌಲರ್ಸ್‌ಗಳಾದ ಸ್ಪಪ್ನಿಲ್ ಸಿಂಗ್ ಹಾಗೂ ಕರಣ್ ಶರ್ಮಾ ತಲಾ ಎರಡು ವಿಕೆಟ್ ಪಡೆದರೆ, ವೇಗಿ ಲಾಕಿ ಫಾರ್ಗ್ಯೂಸನ್ ಸಹ ಇಷ್ಟೇ ವಿಕೆಟ್ ಕಬಳಿಸಿದರು. ಆರ್‌ಸಿಬಿ ತಂಡದ ಭರವಸೆಯ ಬೌಲರ್ ಮೊಹಮ್ಮದ್ ಸಿರಾಜ್ ಮೂರು ವಿಕೆಟ್ ಪಡೆದು ಲಯಕ್ಕೆ ಮರಳಿದರು.
ಫಿಲ್ಡಿಂಗ್‌ನಲ್ಲೂ ತಂಡಕ್ಕೆ ನೆರವಾದ ಸ್ಟಾರ್ಸ್
ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟಿಂಗ್, ಬೌಲಿಂಗ್ ಹಾಗೂ ಫಿಲ್ಡಿಂಗ್ ಉತ್ತಮವಾಗಿತ್ತು. ಕ್ಯಾಚ್‌ಗಳನ್ನು ಹಿಡಿಯುವದರಿಂದ ಹಿಡಿದು, ಬೌಂಡರಿ ತಡೆಯುವುದರ ವರೆಗೂ ಆರ್‌ಸಿಬಿ ಪ್ಲೇಯರ್ಸ್ ಕ್ಲಾಸಿಕ್ ಫೀಲ್ಡಿಂಗ್ ಪ್ರದರ್ಶನ ನೀಡಿದರು.
ಶಶಾಂಕ್ ಸಿಂಗ್ ಅವರನ್ನು ರನೌಟ್ ಮಾಡಿದ ಕ್ಷಣವನ್ನು ಅಭಿಮಾನಿಗಳಂತೂ ಮರೆಯಲು ಚಾನ್ಸ್ ಇಲ್ಲ. ಮೈದಾನದಲ್ಲಿ ಚಿರತೆಯಂತೆ ಓಡಾಡುವ ವಿರಾಟ್ ಕೊಹ್ಲಿ ಸೊಗಸಾದ ಫೀಲ್ಡಿಂಗ್ ಪ್ರದರ್ಶನ ನೀಡಿದರು. ಇದು ಪಂಜಾಬ್ ಬ್ಯಾಟಿಂಗ್ ವಿಭಾಗಕ್ಕೆ ಬಿದ್ದ ದೊಡ್ಡ ಪೆಟ್ಟಾಗಿತ್ತು. ಇಲ್ಲಿಂದ ಪಾಂಜಾಬ್ ಚೇತರಿಸಿಕೊಳ್ಳಲೇ ಇಲ್ಲ.












Click it and Unblock the Notifications