ಹುಬ್ಬಳ್ಳಿಯಲ್ಲಿ ಕನ್ನಡಿಗನಿಗೆ ತಲೆಯಲ್ಲಿ ಡಿಚ್ಚಿ ಹೊಡೆದ ಜಮ್ಮು-ಕಾಶ್ಮೀರ ಕ್ರಿಕೆಟರ್: ಮಯಾಂಕ್ ಮಾಡಿದ್ದೇನು ಗೊತ್ತಾ?
Ranji Trophy: ಸಾಮಾನ್ಯವಾಗಿ ಯಾವುದೇ ಕ್ರೀಡೆಗಳಲ್ಲಿ ಫೈನಲ್ ಪಂದ್ಯಗಳ ಸಮಯದಲ್ಲಿ ಎರಡು ತಂಡಗಳ ನಡುವೆ ಭಾರೀ ಪೈಪೋಟಿ ಏರ್ಪಟ್ಟಿರುವುದನ್ನು ನಾವು ನೋಡಿಯೇ ಇರುತ್ತೇವೆ. ಇಲ್ಲಿ ಮುಖ್ಯವಾಗಿ ಆಟಗಾರರಿಗೆ ಬೇಕಾದದ್ದು ತಾಳ್ಮೆ. ಇದನ್ನು ಕಳೆದುಕೊಂಡು ಅನುಚಿತವಾಗಿ ವರ್ತಿಸಿದರೆ, ಏನೇ ಸಾಧನೆ ಮಾಡಿದರೂ ಎಲ್ಲಾ ಮಣ್ಣುಪಾಲಾಗಿಬಿಡುತ್ತದೆ. ಇದಕ್ಕೆ ಇದೀಗ ರಣಜಿ ಫೈನಲ್ ಪಂದ್ಯದಲ್ಲಿ ಜಮ್ಮು ಕಾಶ್ಮೀರ ಕ್ರಿಕೆಟ್ ತಂಡದ ನಾಯಕನ ನಡೆಯೇ ಪ್ರಮುಖ ಉದಾಹರಣೆಯಾಗಿದೆ.
ಹೌದು.. ಹುಬ್ಬಳ್ಳಿಯಲ್ಲಿ ನಡೆದ ಕರ್ನಾಟಕ ಹಾಗೂ ಜಮ್ಮು-ಕಾಶ್ಮೀರ ರೋಚಕ ಫೈನಲ್ ಫೈನಲ್ ಪಂದ್ಯದಲ್ಲಿ ಕ್ರೀಡಾ ಸ್ಫೂರ್ತಿಗೆ ಧಕ್ಕೆಯಾದ ಘಟನೆ ನಡೆದಿದೆ. ಜೆಕೆ ತಂಡದ ನಾಯಕ ಪಾರಸ್ ಡೋಗ್ರಾ ಮೈದಾನದಲ್ಲಿ ಅಸಭ್ಯ ವರ್ತನೆ ತೋರಿದ ಹಿನ್ನೆಲೆ ಬಿಸಿಸಿಐ ಕಠಿಣ ಕ್ರಮ ಕೈಗೊಂಡಿದ್ದು, ಅವರ ಪಂದ್ಯ ಶುಲ್ಕದ ಶೇಕಡಾ 50ರಷ್ಟು ದಂಡ ವಿಧಿಸಲಾಗಿದೆ. ಕನ್ನಡಿಗನಿಗೆ ತಲೆಯಿಂದ ಡಿಚ್ಚಿ ಹೊಡೆ ಪರಿಣಾಮ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಮತ್ತೊಂದೆಡೆ ಮೈದಾನದಲ್ಲಿ ಕನ್ನಡಿಗರ ಒಗ್ಗಟ್ಟು ಪ್ರದರ್ಶನ ಕೂಡ ಕಂಡುಬಂದಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಕನ್ನಡಿಗನ ತಲೆಗೆ ಡಿಚ್ಚಿ ಹೊಡೆದ ಜೆಕೆ ಕ್ರಿಕೆಟರ್
ಪಂದ್ಯದ ಎರಡನೇ ದಿನದಾಟದಲ್ಲಿ ಈ ಘಟನೆ ನಡೆದಿದೆ. ಜಮ್ಮು-ಕಾಶ್ಮೀರ ಇನ್ನಿಂಗ್ಸ್‌ನ 100ನೇ ಓವರ್ ವೇಳೆ ಪಾರಸ್ ಡೋಗ್ರಾ ಗಲ್ಲಿ ದಿಕ್ಕಿನಲ್ಲಿ ಶಾಟ್ ಆಡಿದರು. ಚೆಂಡು ಬೌಂಡರಿ ಕಡೆ ಸಾಗುತ್ತಿದ್ದಾಗ ಸಿಲ್ಲಿ ಪಾಯಿಂಟ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕರ್ನಾಟಕದ ಯುವ ಆಟಗಾರ ಕೆವಿ ಅನೀಶ್ ಮತ್ತು ಡೋಗ್ರಾ ನಡುವೆ ಮಾತಿನ ಚಕಮಕಿ ಆರಂಭವಾಯಿತು. ಇದು ತೀವ್ರಗೊಂಡು, ಡೋಗ್ರಾ ಅವರು ಅನೀಶ್ ತಲೆಗೆ ಡಿಕ್ಕಿ ಹೊಡೆದಿರುವುದು ಮೈದಾನದಲ್ಲಿದ್ದ ಆಟಗಾರರು ಹಾಗೂ ಪ್ರೇಕ್ಷಕರ ಗಮನ ಸೆಳೆದಿತು. ಘಟನೆ ತಕ್ಷಣವೇ ಉದ್ವಿಗ್ನ ವಾತಾವರಣಕ್ಕೆ ಕಾರಣವಾಯಿತು.
ಜೆಕೆ ಕ್ರಿಕೆಟರ್ ಕ್ಷಮೆಗೆ ಸ್ಪಂದಿಸದ ಕನ್ನಡಿಗ
ಪರಿಸ್ಥಿತಿ ಗಂಭೀರ ಆಗುತ್ತಿದ್ದಂತೆ ನಾಯಕ ದೇವ್ ಬದಲಾಗಿ ಕರ್ನಾಟಕದ ಹಿರಿಯ ಆಟಗಾರ ಮಯಾಂಕ್ ಅಗರ್ವಾಲ್ ಅವರು ಹಿರೋ ರೀತಿಯಲ್ಲಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಲು ಮುಂದಾದರು. ಕೆಲಕಾಲ ವಾಗ್ವಾದ ಮುಂದುವರಿದರೂ, ಅಂಪೈರ್‌ಗಳು ತಕ್ಷಣ ಮಧ್ಯಪ್ರವೇಶಿಸಿ ಇಬ್ಬರು ಆಟಗಾರರನ್ನು ಬೇರ್ಪಡಿಸಿದರು. ನಂತರ ಡೋಗ್ರಾ ತಮ್ಮ ವರ್ತನೆಗೆ ಕ್ಷಮೆಯಾಚಿಸಲು ಯತ್ನಿಸಿದ್ದಾರೆ. ಆದರೆ, ಅನೀಶ್ ಅದನ್ನು ತಕ್ಷಣ ಸ್ವೀಕರಿಸಲು ಮುಂದೆ ಬರಲಿಲ್ಲ ಎಂದು ತಿಳಿದುಬಂದಿದೆ.
ಈ ಘಟನೆಯ ಗಂಭೀರತೆಯನ್ನು ಪರಿಗಣಿಸಿದ ಬಿಸಿಸಿಐ, ಕ್ರೀಡಾ ನಿಯಮ ಉಲ್ಲಂಘನೆ ಆರೋಪದಡಿ ಜಮ್ಮು ಕಾಶ್ಮೀರ ತಂಡದ ನಾಯಕ ಪರಾಸ್ ಡೋಗ್ರಾ ವಿರುದ್ಧ ಕ್ರಮ ಕೈಗೊಂಡಿದೆ. ಅವರ ಪಂದ್ಯ ಶುಲ್ಕದ 50 ಶೇಕಡಾ ಮೊತ್ತವನ್ನು ದಂಡವಾಗಿ ವಿಧಿಸಲಾಗಿದೆ. ಮೊದಲ ಬಾರಿಗೆ ಫೈನಲ್‌ಗೆ ಪ್ರವೇಶಿಸಿದ್ದ ಜಮ್ಮು-ಕಾಶ್ಮೀರ ತಂಡ ಅದ್ಭುತ ಪ್ರದರ್ಶನ ನೀಡುತ್ತಿದ್ದ ಸಮಯದಲ್ಲೇ ಈ ಘಟನೆ ನಡೆದಿರುವುದು ಗಮನಾರ್ಹವಾಗಿದೆ. ಕ್ರೀಡೆಯಲ್ಲಿ ಸ್ಪರ್ಧಾತ್ಮಕತೆ ಮುಖ್ಯ. ಆದರೂ, ಕ್ರೀಡಾ ಸ್ಫೂರ್ತಿ ಉಳಿಸಿಕೊಳ್ಳುವುದು ಆಟಗಾರರ ಜವಾಬ್ದಾರಿ ಎಂಬುದನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.
ಒಟ್ಟಿನಲ್ಲಿ ಕನ್ನಡಿಗರನ್ನು ಕೆಣಕಿದ್ರೆ, ಅದರಲ್ಲೂ ಕ್ರಿಕೆಟ್ ಪಂದ್ಯಗಳಲ್ಲಿ ತಮ್ಮ ತಂಡದ ಒಬ್ಬ ಆಟಗಾರರನ್ನು ಎದುರಾಳಿ ತಂಡವರೂ ಯಾರೇ ಕೆಣಕಿದರೂ ಎಲ್ಲಾ ಒಗ್ಗಟ್ಟಾಗಿ ಬಂದುಬಿಡುತ್ತಾರೆ. ಇದಕ್ಕೆ ಇದೀಗ ಪ್ರಮುಖ ಉದಾಹರಣೆ ರಣಜಿ ಪಂದ್ಯದ ವೇಳೆ ಕರ್ನಾಟಕ ತಂಡದ ಆಟಗಾರನಿಗೆ ಜಮ್ಮು ಕಾಶ್ಮೀರ ತಂಡ ನಾಯಕ ತಲೆಯಲ್ಲಿ ಡಿಚ್ಚಿ ಹೊಡೆದಿದ್ದು, ಈ ವೇಳೆ ಮಯಾಂಕ್ ಅಗರ್ವಾಲ್ ಹೀರೋ ರೀತಿಯಲ್ಲಿ ಎಂಟ್ರಿ ಕೊಟ್ಟಿರುವುದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದರಲ್ಲಿ ಪ್ರಮುಖವಾಗಿ ಗಮನಿಸಬೇಕಾದುದು ಏನೆಂದರೆ ಕರ್ನಾಟಕ ತಂಡದ ಒಗ್ಗಟ್ಟು ಪ್ರದರ್ಶನವಾಗಿದೆ.












Click it and Unblock the Notifications