Champions Trophy: ಅಫ್ಘನ್ನರ ಕನಸಿಗೆ ಮಳೆ ಅಡ್ಡಿ; ಸೆಮಿಫೈನಲ್ ತಲುಪಿದ ಆಸ್ಟ್ರೇಲಿಯಾ
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಒಂದೇ ಒಂದು ಪಂದ್ಯವನ್ನು ಪೂರ್ತಿಯಾಗಿ ಆಡಿ ಗೆದ್ದಿರುವ ಆಸ್ಟ್ರೇಲಿಯಾ ಯಶಸ್ವಿಯಾಗಿ ಸೆಮಿಫೈನಲ್ ತಲುಪಿದೆ. ಶುಕ್ರವಾರ ನಡೆದ ಅಫ್ಘಾನಿಸ್ತಾನ ಆಸ್ಟ್ರೇಲಿಯಾ ನಡುವಿನ ಪಂದ್ಯ ಮಳೆಯಿಂದಾಗಿ ಅರ್ಧಕ್ಕೆ ರದ್ದಾಗಿದ್ದು, ಎರಡೂ ತಂಡಗಳಿಗೂ ಒಂದೊಂದು ಅಂಕವನ್ನು ಹಂಚಿಕೆ ಮಾಡಲಾಯಿತು. ಆಸ್ಟ್ರೇಲಿಯಾ 4 ಅಂಕಗಳೊಂದಿಗೆ ಸೆಮಿಫೈನಲ್ ತಲುಪಿದ್ದು, ಅಫ್ಘಾನಿಸ್ತಾನ ಸೆಮಿಫೈನಲ್ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ.
ಶುಕ್ರವಾರ ಗೆಲ್ಲುವ ತಂಡ ಸೆಮಿಫೈನಲ್ ಸ್ಥಾನವನ್ನು ತಲುಪುವುದು ಖಚಿತವಾಗಿತ್ತು. ಆಸ್ಟ್ರೇಲಿಯಾವನ್ನು ಮಣಿಸಿ ಸೆಮಿಫೈನಲ್ ತಲುಪುವ ವಿಶ್ವಾಸದಲ್ಲಿದ್ದ ಅಫ್ಘಾನಿಸ್ತಾನಕ್ಕೆ ಡಬಲ್ ಶಾಕ್ ಸಿಕ್ಕಿತು. ಟ್ರಾವಿಸ್ ಹೆಡ್ ಮೊದಲು ಬೌಂಡರಿ, ಸಿಕ್ಸರ್ ಮೂಲಕ ಅಫ್ಘಾನಿಸ್ತಾನದ ಕನಸಿಗೆ ಬರೆ ಎಳೆದರೆ, ಬಳಿಕ ಬಂದ ಮಳೆ ಕನಸನ್ನು ಸಂಪೂರ್ಣವಾಗಿ ಹಾಳು ಮಾಡಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 50 ಓವರ್ ಗಳಲ್ಲಿ 273 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಅಜ್ಮತುಲ್ಲಾ ಒಮರ್ ಜೈ ಮತ್ತು ಸೆಡಿಕುಲ್ಲಾ ಅಟಲ್ ಅವರ ಅರ್ಧಶತಕ ಅಫ್ಘಾನಿಸ್ತಾನ ಸವಾಲಿನ ಮೊತ್ತ ಕಲೆಹಾಕಲು ನೆರವಾಯಿತು. ಅಟಲ್ 95 ಎಸೆತಗಳಲ್ಲಿ 85 ರನ್ ಗಳಿಸಿದರೆ, ಅಜ್ಮತುಲ್ಲಾ 63 ಎಸೆತಗಳಲ್ಲಿ 67 ರನ್ ಗಳಿಸಿದರು. ಡ್ವಾರಿಷಸ್ 3 ವಿಕೆಟ್ ಪಡೆದರೆ, ಸ್ಪೆನ್ಸರ್ ಜಾನ್ಸನ್ ಮತ್ತು ಆಡಂ ಝಂಪಾ ತಲಾ 2 ವಿಕೆಟ್ ಪಡೆದರು. ನಾಥನ್ ಎಲ್ಲಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ತಲಾ 1 ವಿಕೆಟ್ ಪಡೆದುಕೊಂಡರು.
ಟ್ರಾವಿಸ್ ಹೆಡ್ ಅಬ್ಬರ
274 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡಕ್ಕೆ ಟ್ರಾವಿಸ್ ಹೆಡ್ ಸ್ಫೋಟಕ ಆರಂಭ ನೀಡಿದರು. 4.3 ಓವರ್ ಗಳಲ್ಲಿ ಮೊದಲ ವಿಕೆಟ್ ಕಳೆದುಕೊಳ್ಳುವ ವೇಳೆಗೆ 44 ರನ್ ಗಳಿಸಿತ್ತು. ಮ್ಯಾಥ್ಯೂ ಶಾರ್ಟ್ 15 ಎಸೆತಗಳಲ್ಲಿ 20 ರನ್ ಗಳಿಸಿ ಔಟಾದರು. ಟ್ರಾವಿಸ್ ಹೆಡ್ 40 ಎಸೆತಗಳಲ್ಲಿ 9 ಬೌಂಡರಿ 1 ಸಿಕ್ಸರ್ ಸಹಿತ ಅಜೇಯ 59 ರನ್ ಗಳಿಸಿದರೆ, ಸ್ಟೀವ್ ಸ್ಮಿತ್ 19 ರನ್ ಗಳಿಸಿದರು. 12.5 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 109 ರನ್ ಗಳಿಸಿ ಸುಲಭವಾಗಿ ಗುರಿಯನ್ನು ಬೆನ್ನಟ್ಟುವಾಗ ಮಳೆ ಆರಂಭವಾಯಿತು.
ಸುಮಾರು ಹೊತ್ತು ಜೋರು ಮಳೆಯಾದ ಕಾರಣ ಮೈದಾನದಲ್ಲಿ ನೀರು ನಿಲ್ಲುವಂತಾಗಿತ್ತು, 20 ಓವರ್ ಪಂದ್ಯ ನಡೆಸಲು ಕಾದರೂ ಮಳೆ ಅದಕ್ಕೆ ಅವಕಾಶ ಕೊಡಲಿಲ್ಲ ಅಂತಿಮವಾಗಿ ಪಂದ್ಯವನ್ನು ರದ್ದು ಮಾಡಿ ಎರಡೂ ತಂಡಗಳಿಗೂ ಒಂದೊಂದು ಅಂಕವನ್ನು ಹಂಚಿಕೆ ಮಾಡಲಾಯಿತು.
ಮಾರ್ಚ್ 1ರಂದು ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಪಂದ್ಯ ನಡೆಯಲಿದ್ದು ದಕ್ಷಿಣ ಆಫ್ರಿಕಾ ಗೆದ್ದರೆ ಬಿ ಗುಂಪಿನಲ್ಲಿ ಮೊದಲ ಸ್ಥಾನದೊಂದಿಗೆ ಸೆಮಿಫೈನಲ್ ತಲುಪಲಿದೆ. ಸೋತರೆ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿ ಸೆಮಿಫೈನಲ್ ಪ್ರವೇಶಿಸಲಿದ್ದು, ದಕ್ಷಿಣ ಆಫ್ರಿಕಾ ಎರಡನೇ ತಂಡವಾಗಿ ಸೆಮಿಫೈನಲ್‌ಗೆ ಲಗ್ಗೆಯಿಡಲಿದೆ.












Click it and Unblock the Notifications