ಕ್ರಿಕೆಟ್‌ನಲ್ಲಿ ಕನ್ನಡಿಗ ರಾಹುಲ್ ದ್ರಾವಿಡ್ ಮಕ್ಕಳ ಮಿಂಚಿಂಗ್
Rahul Dravid Sons: ಭಾರತೀಯ ಕ್ರಿಕೆಟ್‌ನ ತಡೆಗೋಡೆ ಅಥವಾ ದಿ ವಾಲ್ ಅಂತಲೇ ಕರೆಯಲ್ಪಡುವ ಕನ್ನಡಿಗ ರಾಹುಲ್ ದ್ರಾವಿಡ್ ಅವರ ಇಬ್ಬರು ಪುತ್ರರು ಇದೀಗ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನದ ಮೂಲಕ ಮಿಂಚುತ್ತಿದ್ದಾರೆ. ಇದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಟೀಮ್ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಇಬ್ಬರು ಪುತ್ರರು ಕ್ರಿಕೆಟ್ ಮೈದಾನದಲ್ಲಿ ಮಿಂಚುತ್ತಿದ್ದಾರೆ. ಕಿರಿಯ ಮಗ ಅನ್ವಯ್ ದ್ರಾವಿಡ್ ಭಾರತದ ಅಂಡರ್-19 ತಂಡದಲ್ಲಿ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದರೆ, ಹಿರಿಯ ಮಗ ಸಮಿತ್ ದ್ರಾವಿಡ್ ಕೆಎಸ್ಸಿಎ ಮಹಾರಾಜ ಟಿ20 ಟ್ರೋಫಿಯಲ್ಲಿ ಆಲ್-ರೌಂಡ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ.

ಭಾರತ ತಂಡದ ಪರ ಅನ್ವಯ್ ದ್ರಾವಿಡ್ ಅಬ್ಬರದ ಆಟ
ಹಂಬನ್‌ತೋಟಾದಲ್ಲಿ ಶ್ರೀಲಂಕಾ ಅಂಡರ್-19 ತಂಡದ ವಿರುದ್ಧ ನಡೆದ ಎರಡನೇ ಯೂತ್ ಏಕದಿನ ಪಂದ್ಯದಲ್ಲಿ 17 ವರ್ಷದ ಅನ್ವಯ್ ದ್ರಾವಿಡ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಒಂದು ಹಂತದಲ್ಲಿ ಕೇವಲ 81 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು.
ಈ ವೇಳೆ ಕ್ರೀಸ್‌ಗೆ ಬಂದ ವಿಕೆಟ್ ಕೀಪರ್-ಬ್ಯಾಟರ್ ಅನ್ವಯ್, ಅರ್ಜುನ್ ರಜಪೂತ್ ಅವರೊಂದಿಗೆ ಸೇರಿ ತಂಡವನ್ನು ಅಪಾಯದ ಸುಳಿಯಿಂದ ಹೊರತಂದರು. ಈ ಜೋಡಿ ಕೇವಲ 126 ಎಸೆತಗಳಲ್ಲಿ 144 ರನ್‌ಗಳ ಜೊತೆಯಾಟವನ್ನು ಆಡಿತು. ಜವಾಬ್ದಾರಿಯುತ ಆಟ ಆಡಿದ ಅನ್ವಯ್ ದ್ರಾವಿಡ್ 67 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 87 ರನ್ ಚಚ್ಚಿದರು. ಅವರ ಈ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದ ಭಾರತ ತಂಡ 285 ರನ್‌ಗಳ ಸ್ಪರ್ಧಾತ್ಮಕ ಮೊತ್ತವನ್ನು ಕಲೆಹಾಕಿತು. ಅನ್ವಯ್ ಅವರ ಆಟದಲ್ಲಿ ತಂದೆ ರಾಹುಲ್ ದ್ರಾವಿಡ್ ಅವರ ಶೈಲಿ ಎದ್ದು ಕಾಣುತ್ತಿತ್ತು.
ಮಹಾರಾಜ ಟ್ರೋಫಿಯಲ್ಲಿ ಸಮಿತ್ ದ್ರಾವಿಡ್ ಮಿಂಚಿಂಗ್
ಮತ್ತೊಂದೆಡೆ ಅನ್ವಯ್ ಅವರ ಹಿರಿಯ ಸಹೋದರ ಸಮಿತ್ ದ್ರಾವಿಡ್ ಕರ್ನಾಟಕದ ಕೆಎಸ್ಸಿಎ ಮಹಾರಾಜ ಟಿ20 ಟ್ರೋಫಿಯಲ್ಲಿ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಪರ ಅಬ್ಬರಿಸಿದ್ದಾರೆ. ಭಾನುವಾರ ಸಂಜೆ ನಡೆದ ಪಂದ್ಯದಲ್ಲಿ ಸಮಿತ್ ಕೇವಲ 25 ಎಸೆತಗಳಲ್ಲಿ ಅಜೇಯ 40 ರನ್ ಗಳಿಸಿದ್ದಲ್ಲದೆ, ಬೌಲಿಂಗ್‌ನಲ್ಲೂ ಕೇವಲ 23 ರನ್ ನೀಡಿ 2 ಪ್ರಮುಖ ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾದರು.
ಅಪ್ಪ ದ್ರಾವಿಡ್‌ರಂತೆ ಬ್ಯಾಟಿಂಗ್ ಶೈಲಿ ಹೊಂದಿರುವ ಸಮಿತ್
ವೇಗದ ಬೌಲಿಂಗ್ ಆಲ್-ರೌಂಡರ್ ಆಗಿರುವ ಸಮಿತ್ ದ್ರಾವಿಡ್ ಅವರ ಬ್ಯಾಟಿಂಗ್ ಶೈಲಿ ಅವರ ತಂದೆ ರಾಹುಲ್ ದ್ರಾವಿಡ್ ಅವರ ಆಟದ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಇವರಿಬ್ಬರೂ ಪ್ರಸ್ತುತ ಕರ್ನಾಟಕ ತಂಡದ ಪರ ದೇಶೀಯ ಕ್ರಿಕೆಟ್ ಆಡುತ್ತಿದ್ದಾರೆ. ಕಿರಿಯ ಮಗ ಅನ್ವಯ್ ಇತ್ತೀಚೆಗೆ ವಿನೂ ಮಂಕಡ್ ಟ್ರೋಫಿಯಲ್ಲಿ ಕರ್ನಾಟಕದ ಅಂಡರ್-19 ತಂಡವನ್ನು ಮುನ್ನಡೆಸಿ 6 ಇನ್ನಿಂಗ್ಸ್‌ಗಳಲ್ಲಿ 220 ರನ್ ಗಳಿಸುವ ಮೂಲಕ ತಂಡದಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು.
20 ವರ್ಷದ ಸಮಿತ್ 2023-24ರ ಕೂಚ್ ಬೆಹಾರ್ ಟ್ರೋಫಿಯಲ್ಲಿ ಕರ್ನಾಟಕ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ ಟೂರ್ನಿಯಲ್ಲಿ ಅವರು 362 ರನ್ ಗಳಿಸಿ 16 ವಿಕೆಟ್ ಕಬಳಿಸಿದ್ದರು. ಈ ಅಮೋಘ ಪ್ರದರ್ಶನದ ಕಾರಣದಿಂದಾಗಿ ಅವರಿಗೆ 2024ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಭಾರತ ಅಂಡರ್-19 ತಂಡದಲ್ಲಿ ಸ್ಥಾನ ಸಿಕ್ಕಿತ್ತು. ಆದರೆ ಮೊಣಕಾಲಿನ ಗಾಯದ ಸಮಸ್ಯೆಯಿಂದಾಗಿ ಅವರು ಆಡಲು ಸಾಧ್ಯವಾಗಿರಲಿಲ್ಲ. ಇದೀಗ ಅವರ ಆ ಕನಸನ್ನು ಕಿರಿಯ ಸಹೋದರ ಅನ್ವಯ್ ನನಸು ಮಾಡಿದ್ದಾರೆ. ದ್ರಾವಿಡ್ ಕುಟುಂಬದ ಇಬ್ಬರು ಯುವ ತಾರೆಗಳು ಭಾರತೀಯ ಕ್ರಿಕೆಟ್‌ನ ಮುಂದಿನ ಭರವಸೆಯ ಆಟಗಾರರಾಗಿ ಹೊರಹೊಮ್ಮುತ್ತಿದ್ದಾರೆ.












Click it and Unblock the Notifications