Rahul Dravid: ಕನ್ನಡಿಗ ರಾಹುಲ್ ದ್ರಾವಿಡ್‌ ಅಪ್ಪಟ ಅಪರಂಜಿ: ವಿಕ್ರಮ್ ರಾಥೋರ್ ಹಿಂಗ್ ಅಂದಿದ್ಯಾಕೆ?

Rahul Dravid: ಟೀಮ್ ಇಂಡಿಯಾದ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರ ಕೆಲಸದ ಶೈಲಿ ಮತ್ತು ಕಾರ್ಯಕ್ಷಮತೆ ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದ ಮೆಚ್ಚುಗೆಗೆ ಪಾತ್ರವಾಗಿದೆ. ಇತ್ತೀಚೆಗೆ ಯುರೋಪಿಯನ್ ಫ್ರಾಂಚೈಸಿ ತಂಡವೊಂದರ ತರಬೇತುದಾರರೊಬ್ಬರು ಕನ್ನಡಿಗ ದ್ರಾವಿಡ್ ಅವರ ವೃತ್ತಿಪರತೆ ಮತ್ತು ತಂಡವನ್ನು ನಡೆಸಿಕೊಳ್ಳುವ ಶೈಲಿಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.

ಯೂರೋಪಿಯನ್ ಟಿ20 ಪ್ರೀಮಿಯರ್ ಲೀಗ್‌ನಲ್ಲಿ ಭಾರತದ ಕ್ರಿಕೆಟ್ ದಂತಕಥೆ ರಾಹುಲ್ ದ್ರಾವಿಡ್ ಅವರು 'ಡಬ್ಲಿನ್ ಗಾರ್ಡಿಯನ್ಸ್' ಫ್ರಾಂಚೈಸಿಗಾಗಿ ಹೊಸ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತೀಯ ತಂಡ ಹಾಗೂ ಐಪಿಎಲ್‌ನಲ್ಲಿ ದ್ರಾವಿಡ್ ಅವರೊಂದಿಗೆ ಕೆಲಸ ಮಾಡಿರುವ ಫ್ರಾಂಚೈಸಿಯ ಮುಖ್ಯ ತರಬೇತುದಾರ ವಿಕ್ರಮ್ ರಾಥೋರ್ ಅವರಿಗೆ, ದ್ರಾವಿಡ್ ಅವರನ್ನು ಬೆಂಬಲ ಸಿಬ್ಬಂದಿಯ ಭಾಗವಾಗಿ ನೋಡಿ ಅಭ್ಯಾಸವಿತ್ತು.

Rahul Dravid Praised by Dublin Guardians s Vikram Rathour for His Professionalism Huge Viral

ದ್ರಾವಿಡ್‌ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡ ರಾಥೋರ್

ಆದರೆ ಈ ಬಾರಿ ಮಾಜಿ ನಾಯಕನನ್ನು 'ತಂಡದ ಮಾಲೀಕ'ನ ಪಾತ್ರದಲ್ಲಿ ನೋಡುವುದು ಅವರಿಗೆ ಸಂಪೂರ್ಣ ಹೊಸ ಹಾಗೂ ವಿಭಿನ್ನ ಅನುಭವವಾಗಿದೆ. ಡಬ್ಲಿನ್ ಫ್ರಾಂಚೈಸಿ ಸತತ ಐದು ಪಂದ್ಯಗಳಲ್ಲಿ ಜಯ ಗಳಿಸದಿದ್ದರೂ ಸಹ, ದ್ರಾವಿಡ್ ಅವರು ತಂಡ ಮತ್ತು ಸಿಬ್ಬಂದಿಗೆ ಸಂಪೂರ್ಣ ಬೆಂಬಲವಾಗಿ ನಿಂತಿದ್ದಾರೆ ಎಂದು ರಾಥೋರ್ ಬಹಿರಂಗಪಡಿಸಿದ್ದಾರೆ.

'ರಾಹುಲ್ ದ್ರಾವಿಡ್‌ ಒಬ್ಬ ನಿಜವಾದ ಮಾಲೀಕನಂತೆ ವರ್ತಿಸುತ್ತಿದ್ದಾರೆ. ಅಂದರೆ, ಅವರು ಕೋಚಿಂಗ್ ಅಥವಾ ಆಟದ ವಿಷಯಗಳಲ್ಲಿ ಅನಗತ್ಯವಾಗಿ ತಲೆಹಾಕುತ್ತಿಲ್ಲ. ಹೀಗಾಗಿ ಎಲ್ಲವೂ ಚೆನ್ನಾಗಿ ಸಾಗುತ್ತಿದೆ. ಅವರಂತಹ ವ್ಯಕ್ತಿ ತಂಡದ ಮಾಲೀಕರ ಸಾಲಿನಲ್ಲಿ ಇರುವುದು ಅತ್ಯಂತ ಹೆಮ್ಮೆಯ ವಿಷಯ. ಏಕೆಂದರೆ ಅವರು ಸುದೀರ್ಘ ಕಾಲ ತರಬೇತುದಾರರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಆದ್ದರಿಂದ ತಂಡಗಳು ಹೇಗೆ ಕಾರ್ಯಾಚರಣೆ ನಡೆಸುತ್ತವೆ ಮತ್ತು ಮೈದಾನದ ಫಲಿತಾಂಶಗಳು ಹೇಗೆ ಏರಿಳಿತ ಕಾಣುತ್ತವೆ ಎಂಬುದು ಅವರಿಗೆ ಚೆನ್ನಾಗಿ ಅರ್ಥವಾಗುತ್ತದೆ,' ಎಂದು ತಿಳಿಸಿದ್ದಾರೆ.

ಸೋಲಿನಲ್ಲೂ ಬೆಂಬಲಕ್ಕೆ ನಿಂತ ದ್ರಾವಿಡ್

'ಟೂರ್ನಿಯ ಆರಂಭಿಕ ಹಂತದಲ್ಲಿ ನಾವು ಒಂದೂ ಪಂದ್ಯ ಗೆಲ್ಲದಿದ್ದರೂ, ಅಂದರೆ ಆಡಿದ ಮೊದಲ ಐದಕ್ಕೆ ಐದೂ ಪಂದ್ಯಗಳನ್ನು ಸೋತಾಗಲೂ ಅವರು ನಮಗೆ ಸಂಪೂರ್ಣ ಬೆಂಬಲವಾಗಿ ನಿಂತರು. ಅವರು ನಿಜಕ್ಕೂ ಅತ್ಯಂತ ಸಹಕಾರಿಯಾಗಿದ್ದಾರೆ ಮತ್ತು ರಾಹುಲ್ ಅವರಂತಹ ವ್ಯಕ್ತಿಯಿಂದ ನಾವು ನಿರೀಕ್ಷಿಸುವುದೂ ಅದನ್ನೇ,' ಎಂದು ವರ್ಚುವಲ್ ಸಂವಾದದಲ್ಲಿ ರಾಥೋರ್ ಹೇಳುವ ಮೂಲಕ ಗಮನ ಸೆಳೆದಿದ್ದಾರೆ.

ಆರ್‌.ಅಶ್ವಿನ್ ಜವಾಬ್ದಾರಿಗಳೇನು?

ಈ ಫ್ರಾಂಚೈಸಿಯ ನಾಯಕತ್ವವನ್ನು ಕ್ರಿಕೆಟ್‌ನಿಂದ ಹೊರಗುಳಿದಿರುವ ರವಿಚಂದ್ರನ್ ಅಶ್ವಿನ್ ವಹಿಸಿಕೊಂಡಿದ್ದಾರೆ. ಎದುರಾಳಿಗಳ ವಿರುದ್ಧ ತಂತ್ರಗಳನ್ನು ಹೆಣೆಯುವುದು, ತಂಡದ ಆಯ್ಕೆ ಅಥವಾ ಇತರೆ ದಿನನಿತ್ಯದ ಕ್ರಿಕೆಟ್ ವ್ಯವಹಾರಗಳ ಸಂಪೂರ್ಣ ಜವಾಬ್ದಾರಿಯನ್ನು ಪ್ರಮುಖವಾಗಿ ಅಶ್ವಿನ್ ಅವರೇ ನಿರ್ವಹಿಸುತ್ತಿದ್ದಾರೆ. ಇನ್ನು ರಾಹುಲ್ ದ್ರಾವಿಡ್ ಅವರು ತಂಡದ ಮಾಲೀಕರಾಗಿದ್ದರೂ ಸಹ, ಇಂತಹ ಯಾವುದೇ ನಿರ್ಧಾರ ಕೈಗೊಳ್ಳುವ ವಿಷಯಗಳಲ್ಲಿ ಮೈದಾನದ ಕೆಲಸಗಳಿಗೆ ಹಸ್ತಕ್ಷೇಪ ಮಾಡಿಲ್ಲ ಎಂದು ರಾಥೋರ್ ಬಹಿರಂಗಪಡಿಸಿದ್ದಾರೆ.

ಅಶ್ವಿನ್‌ಗೆ ಕ್ರಿಕೆಟ್‌ ಬಗ್ಗೆ ಅಪಾರ ಜ್ಞಾನವಿದೆ

'ಅಶ್ವಿನ್ ವಿಷಯಕ್ಕೆ ಬರುವುದಾದರೆ, ನಿಸ್ಸಂದೇಹವಾಗಿ ಅವರಿಗೆ ಕ್ರಿಕೆಟ್ ಮತ್ತು ಕ್ರಿಕೆಟಿಗರ ಬಗ್ಗೆ ಅಪಾರ ಜ್ಞಾನವಿದೆ. ನಾನು ಅವರನ್ನು ಮೂಲತಃ ಒಬ್ಬ 'ಕ್ರಿಕೆಟ್ ಹುಚ್ಚ' ಎಂದೇ ಕರೆಯುತ್ತೇನೆ. ಅವರು ತುಂಬಾ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುತ್ತಾರೆ ಹಾಗೂ ಜಗತ್ತಿನಾದ್ಯಂತ ಇರುವ ಆಟಗಾರರ ಬಗ್ಗೆ ಅವರಿಗೆ ಮಾಹಿತಿಯಿದೆ. ಇದು ನಿಜಕ್ಕೂ ಅದ್ಭುತ,' ಎಂದು ರಾಥೋರ್ ಹೇಳಿದ್ದಾರೆ.

ತಂಡದಲ್ಲಿ ಅಶ್ವಿನ್ ಅವರ ಉಪಸ್ಥಿತಿಯಿಂದಾಗಿ ತಮ್ಮ ಕೆಲಸ ಇನ್ನಷ್ಟು ಸುಲಭವಾಗಿದೆ ಎಂದು ವಿಕ್ರಮ್ ರಾಥೋರ್ ಒಪ್ಪಿಕೊಂಡಿದ್ದಾರೆ. 'ಪರಿಸ್ಥಿತಿಗಳು ಮತ್ತು ಇಲ್ಲಿನ ಆಟಗಾರರ ಬಗ್ಗೆ ಅವರಿಗೆ ಎಷ್ಟು ಚೆನ್ನಾಗಿ ತಿಳಿದಿದೆ ಎಂಬುದನ್ನು ಗಮನಿಸಿದಾಗ, ಕೆಲವೊಮ್ಮೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಹಾಗಾಗಿ ಅವರಂತಹ ವ್ಯಕ್ತಿ ಜೊತೆಗಿರುವುದು ದೊಡ್ಡ ಸಹಾಯವಾಗಿದೆ. ಏಕೆಂದರೆ ನಾನು ಮುಂಚೆಯೇ ಹೇಳಿದಂತೆ, ನನ್ನ ಹೆಚ್ಚಿನ ಸಮಯ ಭಾರತೀಯ ಕ್ರಿಕೆಟ್‌ನಲ್ಲೇ ಕಳೆಯಿತು. ಆದ್ದರಿಂದ ನನಗೆ ಇದು ಅತ್ಯಂತ ಹೊಸ ಹಾಗೂ ವಿಭಿನ್ನ ಅನುಭವವಾಗಿತ್ತು. ಆದರೆ ಅಶ್ವಿನ್ ಅವರಂತಹ ವ್ಯಕ್ತಿ ಜೊತೆಗಿರುವುದು ನಿಜಕ್ಕೂ ತುಂಬಾ ನೆರವಾಗಿದೆ,' ಎಂದು ಅವರು ಹೇಳಿದರು. ಒಟ್ಟಿನಲ್ಲಿ ಇದೀಗ ರಾಹುಲ್‌ ದ್ರಾವಿಡ್‌ ಅವರ ಬಗ್ಗೆ ನೀಡಿದ ಮೆಚ್ಚುಗೆಯ ಹೇಳಿಕೆಗಳು ಇದೀಗ ಸಖತ್ ಸದ್ದು ಮಾಡುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+