Ind vs Eng: ಅರ್ಹರಿಗೆ ಗೌರವ ಸಿಗಬೇಕು; ಅಶ್ವಿನ್ ಕೆಲಸಕ್ಕೆ ಭಾರಿ ಮೆಚ್ಚುಗೆ!
ರವಿಚಂದ್ರನ್ ಅಶ್ವಿನ್ ತಮ್ಮ 100ನೇ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವನ್ನಾಡುತ್ತಿದ್ದಾರೆ. ಧರ್ಮಶಾಲಾದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಆಡುತ್ತಿದೆ. ಇದು ಅಶ್ವಿನ್ ಅವರಿಗೆ 100ನೇ ಟೆಸ್ಟ್ ಪಂದ್ಯವಾಗಿದೆ.
ತಮ್ಮ 100ನೇ ಟೆಸ್ಟ್‌ನಲ್ಲಿ ಅವರು ಕುಲದೀಪ್ ಯಾದವ್ ಜೊತೆ ನಡೆದುಕೊಂಡ ರೀತಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮೊದಲನೇ ದಿನ ಟೀ ವಿರಾಮದ ನಂತರ 218 ರನ್‌ಗಳಿಗೆ ಆಲೌಟ್ ಆಯಿತು.

ಕುಲದೀಪ್ ಯಾದವ್ 5 ವಿಕೆಟ್ ಪಡೆಯುವ ಮೂಲಕ ಆಂಗ್ಲರಿಗೆ ಶಾಕ್ ಕೊಟ್ಟರು. ರವಿಚಂದ್ರನ್ ಅಶ್ವಿನ್ 4 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ 1 ವಿಕೆಟ್ ಪಡೆದರು. ಹೆಚ್ಚು ವಿಕೆಟ್ ಪಡೆದ ಬೌಲರ್ ತಂಡವನ್ನು ಪೆವಿಲಿಯನ್‌ಗೆ ಮುನ್ನಡೆಸುವುದು ವಾಡಿಕೆ. ಅದರಂತೆ ಕುಲದೀಪ್ ಯಾದವ್ ಅವರು ತಂಡವನ್ನು ಮೈದಾನದಲ್ಲಿ ಮುನ್ನಡೆಸಬೇಕಿತ್ತು.
THE MOST BEAUTIFUL MOMENT. 😍❤️
— Jersey no.1️⃣8️⃣ (@82Iconic) March 7, 2024
- Kuldeep giving the ball to Ashwin, but Ashwin denying and letting Kuldeep lead the team.#INDvENG #kuldeepyadav#RavichandranAshwin #RohitSharma #ShubmanGillpic.twitter.com/GMh5iR1ZT2
ಕ್ರೀಡಾಸ್ಪೂರ್ತಿ ಮೆರೆದ ಅಶ್ವಿನ್
ಆದರೆ ಕುಲದೀಪ್ ಯಾದವ್ 100ನೇ ಟೆಸ್ಟ್ ಆಡುತ್ತಿರುವ ರವಿಚಂದ್ರನ್ ಅಶ್ವಿನ್ ಅವರಿಗೆ ಚೆಂಡನ್ನು ನೀಡಿ ತಂಡವನ್ನು ಮುನ್ನಡೆಸುವಂತೆ ಕೇಳಿಕೊಂಡರು. ಈ ಮೂಲಕ ಅಶ್ವಿನ್ ಅವರಿಗೆ ಗೌರವ ಸಲ್ಲಿಸಲು ಕುಲದೀಪ್ ಯಾದವ್ ಯೋಜಿಸಿದ್ದರು. ಆದರೆ, ಕ್ರೀಡಾಸ್ಪೂರ್ತಿ ಮೆರೆದ ರವಿಚಂದ್ರನ್ ಅಶ್ವಿನ್ ಕುಲದೀಪ್ ಯಾದವ್ ಅವರಿಗೆ ಚೆಂಡನ್ನು ವಾಪಸ್ ನೀಡಿ ಹೆಚ್ಚು ವಿಕೆಟ್ ಪಡೆದ ನೀವು ತಂಡವನ್ನು ಲೀಡ್ ಮಾಡಿ ಎಂದರು. ಮೈದಾನದಲ್ಲಿ ಇಬ್ಬರು ಆಟಗಾರರು ಪರಸ್ಪರ ಗೌರವ ಕೊಟ್ಟಿದ್ದನ್ನು ನೋಡಿ ಕ್ರಿಕೆಟ್ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಬ್ಬರು ಸ್ಪಿನ್ನರ್‌ಗಳು ಒಂದೊಳ್ಳೆಯ ಕಾರಣಕ್ಕಾಗಿ ಜಗಳವಾಡಿದರು ಮತ್ತು ಕೊನೆಗೆ ಕುಲದೀಪ್ ಯಾದವ್ ಅವರೇ ತಂಡವನ್ನು ಮುನ್ನಡೆಸಿದರು. ಪ್ರೇಕ್ಷಕರು ಮತ್ತು ಅವರ ಸಹ ಆಟಗಾರರ ಚಪ್ಪಾಳೆಗಳ ಮೂಲಕ ಇಬ್ಬರನ್ನು ಅಭಿನಂದಿಸಿದರು. ಕುಲದೀಪ್ ಯಾದವ್ 12 ನೇ ಟೆಸ್ಟ್ ಪಂದ್ಯ ಆಡುತ್ತಿದ್ದು, ಅತ್ಯಂತ ವೇಗವಾಗಿ 50 ವಿಕೆಟ್‌ಗಳನ್ನು ಪಡೆದ ಭಾರತೀಯ ಬೌಲರ್ ಎನಿಸಿಕೊಂಡರು.
ಮೊದಲ ದಿನ ಭಾರತ ಮೇಲುಗೈ
ಧರ್ಮಶಾಲಾದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 218 ರನ್‌ಗಳಿಗೆ ಆಲೌಟ್ ಆಯಿತು. ಝಾಕ್ ಕ್ರಾಲಿ 79 ರನ್ ಗಳಿಸಿದ್ದು ಇಂಗ್ಲೆಂಡ್ ಪರ ಆಟಗಾರನೊಬ್ಬ ಗಳಿಸಿದ ಗರಿಷ್ಠ ರನ್‌ಗಳಾಗಿವೆ. ಉಳಿದ ಬ್ಯಾಟರ್ ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.
ಬಳಿಕ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಭಾರತ ಮೊದಲ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 135 ರನ್ ಗಳಿಸಿದೆ. ಜೈಸ್ವಾಲ್ 57 ರನ್ ಗಳಿಸಿ ಔಟಾದರೆ, ರೋಹಿತ್ ಶರ್ಮಾ ಅಜೇಯ 52 ರನ್ ಗಳಿಸಿದ್ದಾರೆ, ಶುಭಮನ್ ಗಿಲ್ ಅಜೇಯ 26 ರನ್ ಗಳಿಸಿದ್ದು, ಇಬ್ಬರೂ ಎರಡನೇ ದಿನ ಇನ್ನಿಂಗ್ಸ್ ಆರಂಭಿಸಲಿದ್ದಾರೆ. 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ 3-1 ರಲ್ಲಿ ಮುನ್ನಡೆ ಸಾಧಿಸಿರುವ ಭಾರತ ಸರಣಿ ಜಯವನ್ನು ಖಚಿತಪಡಿಸಿಕೊಂಡಿದೆ.












Click it and Unblock the Notifications