ಪ್ರೊ.ಕಬ್ಬಡಿ 'ಯು ಮುಂಬಾ' ತಂಡದಲ್ಲಿದ್ದಾರೆ ಸುಳ್ಯದ ಪ್ರತಿಭೆ
ಮಂಗಳೂರು, ಡಿಸೆಂಬರ್ 23; ಕಬ್ಬಡಿ ಪ್ರೇಮಿಗಳ ಅತಿ ನಿರೀಕ್ಷೆಯ ಪ್ರೊ. ಕಬ್ಬಡಿ ಲೀಗ್ ಆರಂಭಗೊಂಡಿದೆ. ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ನಡುವೆ ನಡೆದಿದ್ದು, ಜಿದ್ದಾ ಜಿದ್ದಿನ ಪಂದ್ಯಾಟದಲ್ಲಿ ಯು ಮುಂಬಾ ಎದುರು ಬೆಂಗಳೂರು ಬುಲ್ಸ್ 30-46 ಅಂಕಗಳೊಂದಿಗೆ ಪರಾಭವಗೊಂಡಿದೆ. ಆದರೆ ಯು ಮುಂಬಾ ತಂಡದಲ್ಲಿ ಇದೇ ಮೊದಲ ಬಾರಿಗೆ ಕರಾವಳಿಯ ಪ್ರತಿಭೆಯೊಂದು ಅಂಕಣಕ್ಕಿಳಿದೆ.
ಆರ್ಥಿಕ ಬಡತನವಿದ್ದರೂ ಪ್ರತಿಭೆಗೆ ಬಡತನವಿಲ್ಲ ಎಂಬುವುದಕ್ಕೆ ನಿದರ್ಶನ ಎಂಬಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿಯ ಹುಡುಗ ಯು ಮುಂಬಾ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿಮ ಐವರ್ನಾಡು ಗ್ರಾಮದ ಪಾಲೆಪ್ಪಾಡಿಯ ಸಚಿನ್ ಪ್ರತಾಪ್ ಈ ಬಾರಿ ಪ್ರೊ. ಕಬಡ್ಡಿ ಪಂದ್ಯಾಟದಲ್ಲಿ ಯು ಮುಂಬಾ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗುವ ಮೂಲಕ ಸಾಧನೆ ಮೆರೆದಿದ್ದಾರೆ.
ಈಗಾಗಲೇ 50ಕ್ಕೂ ಅಧಿಕ ರಾಜ್ಯ ಮಟ್ಟದ ಕ್ರೀಡಾಕೂಟ, ದಕ್ಷಿಣ ವಲಯ ಕಬಡ್ಡಿ ಕೂಟದಲ್ಲಿ ಭಾಗವಹಿಸಿರುವ ಪ್ರತಾಪ್ ಸೀನಿಯರ್ ರಾಷ್ಟ್ರೀಯ ಕಬಡ್ಡಿ ಕೂಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಆ ಪಂದ್ಯಾವಳಿಯಲ್ಲಿ ರಾಜ್ಯ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ಪರಾಭವಗೊಂಡರೂ, ಪ್ರತಾಪ್ ಎರಡು ಪಂದ್ಯಗಳಲ್ಲಿ "ಅತ್ಯುತ್ತಮ ರೈಡರ್' ಎನಿಸಿಕೊಂಡಿದ್ದರು. ಅಲ್ಲಿನ ಪ್ರದರ್ಶನ ಇವರನ್ನು ಭಾರತ ತಂಡದ ಕದ ತಟ್ಟುವಂತೆ ಮಾಡಿದೆ. ಜತೆಗೆ ಪ್ರೊ. ಕಬಡ್ಡಿ ಹರಾಜಿನಲ್ಲಿಯೂ ಪಾಲ್ಗೊಳ್ಳಲು ಅರ್ಹತೆ ಪಡೆದಿದ್ದಾರೆ.

ಕೆಎಫ್ಡಿಸಿ ನೌಕರರಾದ ಸುಂದರಲಿಂಗಂ ಮತ್ತು ವಲ್ಲಿ ದಂಪತಿಯ ಮೂವರು ಮಕ್ಕಳಲ್ಲಿ ಸಚಿನ್ ಪ್ರತಾಪ್ ಎರಡನೆಯವರು. ಮನೆಯಲ್ಲಿ ಆರ್ಥಿಕ ಬಡತನವಿದ್ದರೂ, ಕಬಡ್ಡಿ ಆಟಗಾರರಾಗಬೇಕೆಂಬ ಆಸಕ್ತಿಗೆ ಹೆತ್ತವರು, ಬಂಧುಗಳು ಪ್ರೋತ್ಸಾಹ ನೀಡಿದರು. ಹಿರಿಯ ಸಹೋದರಿ ಶರ್ಮಿಳಾ ರಾಜ್ಯ ಮಟ್ಟದ ಕಬಡ್ಡಿ ಆಟಗಾರ್ತಿ. ಕಿರಿಯ ಸಹೋದರಿ ಸುಮಾ ಎನ್‌ಎಂಸಿ ಕಾಲೇಜಿನಲ್ಲಿ ಕ್ರೀಡಾ ಕೋಟಾದಡಿ ತರಬೇತಿ ಪಡೆಯುತ್ತಿದ್ದಾರೆ.
ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಐವರ್ನಾಡಿನಲ್ಲಿ ಪೂರೈಸಿದ್ದಾರೆ. ಸಚಿನ್ ಪ್ರತಾಪ್, 10ನೇ ತರಗತಿ ತನಕ ಖೋ-ಖೋ ಆಟಗಾರನಾಗಿದ್ದ. ಅನಂತರ ಕಬಡ್ಡಿ ಕ್ರೀಡೆಯತ್ತ ಆಸಕ್ತಿ ತೋರಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಜತೆಗೆ ಹರ್ಷಿತ್ ಬೇಂಗಮಲೆ, ವೀರನಾಥ, ಕುಮಾರ್ ಅವರು ಆರಂಭದಲ್ಲಿ ತರಬೇತಿ ನೀಡಿ ಪ್ರೋತ್ಸಾಹಿಸಿದರು. ಅನಂತರ ಉಜಿರೆ ಎಸ್‌ಡಿಎಂ ಕಾಲೇಜಿಗೆ ಕ್ರೀಡಾ ಕೋಟಾದಡಿ ಸೇರ್ಪಡೆಗೊಂಡು ಇಲ್ಲಿನ ಕಬಡ್ಡಿ ತರಬೇತುದಾರ ಕೃಷ್ಣಾನಂದ ಪೂರ್ಣ ಸಹಕಾರ ನೀಡಿ ಪ್ರತಾಪ್ ಪ್ರತಿಭೆಗೆ ಇನ್ನಷ್ಟು ನೀರೆರೆದು ಪೋಷಿಸಿದ್ದಾರೆ.
ವಿವೋ ಪ್ರೊ. ಕಬಡ್ಡಿ ಲೀಗ್ ಎರಡು ವರ್ಷಗಳ ನಂತರ ಮತ್ತೆ ರಂಜಿಸಲಿದ್ದು ಡಿಸೆಂಬರ್ 22ರಿಂದ ಟೂರ್ನಿ ಆರಂಭವಾಗಿದೆ. ದೇಶೀಯ ಅಂಗಳದ ಕಬಡ್ಡಿ ಕದನ ಪ್ರೊ. ಬೆಂಗಳೂರಿನ ವೈಟ್ ಫೀಲ್ಡ್ ಶೆರಾಟನ್ ಗ್ರ್ಯಾಂಡ್ ಹೋಟೆಲ್ ಮತ್ತು ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ.
ಈ ಬಾರಿ 12 ತಂಡಗಳ ನಡುವೆ ಚಾಂಪಿಯನ್ ಪಟ್ಟಕ್ಕಾಗಿ ಹೋರಾಟ ನಡೆಯಲಿದೆ. ಬೆಂಗಳೂರು ಬುಲ್ಸ್, ಯು ಮುಂಬಾ, ತಮಿಳ್ ತಲೈವಾಸ್, ತೆಲುಗು ಟೈಟಾನ್ಸ್, ಬೆಂಗಾಲ್ ವಾರಿಯರ್ಸ್, ಯುಪಿ ಯೋಧಾ, ಗುಜರಾತ್ ಜೈಂಟ್ಸ್, ದಬಾಂಗ್ ಡೆಲ್ಲಿ, ಪುಣೇರಿ ಪಲ್ಟನ್, ಜೈಪುರ ಪಿಂಕ್ ಪ್ಯಾಂಥರ್ಸ್, ಪಾಟ್ನಾ ಫೈರೇಟ್ಸ್ ಮತ್ತು ಹರಿಯಾಣ ಸ್ಟೀಲರ್ಸ್ ತಂಡಗಳ ನಡುವೆ ಸೆಣಸಾಟ ನಡೆಯಲಿದೆ.
ಡಿಸೆಂಬರ್ 22ರಿಂದ ಮೊದಲಾರ್ಧ ಆರಂಭವಾಗುತ್ತಿದ್ದು, ಮೊದಲಾರ್ಧವು ಜನವರಿ 20, 2022 ರಂದು ಮುಕ್ತಾಯಗೊಳ್ಳಲಿದೆ. ಆ ಬಳಿಕ 2ನೇ ಸುತ್ತಿನ ಪಂದ್ಯಗಳು ಶುರುವಾಗಲಿದೆ. 2ನೇ ಸುತ್ತಿನ ಪಂದ್ಯಗಳಿಗಾಗಿ ಇನ್ನೂ ಕೂಡ ವೇಳಾಪಟ್ಟಿ ನಿಗದಿ ಮಾಡಿಲ್ಲ. ಪ್ರತಿದಿನ ಮೂರು ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯವು ಸಂಜೆ 7:30 ಕ್ಕೆ ಶುರುವಾದರೆ, ಎರಡನೇ ಪಂದ್ಯವು ರಾತ್ರಿ 8:30ಕ್ಕೆ ಪ್ರಾರಂಭವಾಗುತ್ತದೆ. ಇನ್ನು ಕೊನೆಯ ಪಂದ್ಯವು ರಾತ್ರಿ 9:30 ಕ್ಕೆ ಆರಂಭವಾಗಲಿದೆ.












Click it and Unblock the Notifications