Karnataka Team: 79 ವರ್ಷಗಳಲ್ಲಿ ಮೊದಲ ಬಾರಿ ಪ್ರಶಸ್ತಿ ಗೆದ್ದ ಕರ್ನಾಟಕ ತಂಡಕ್ಕೆ ಸಿಎಂ ಸಿದ್ದರಾಮಯ್ಯ ಅಭಿನಂದನೆ
ಪ್ರಖರ್ ಚತುರ್ವೇದಿ ಕೂಚ್ ಬೆಹಾರ್ ಟ್ರೋಫಿಯ ಫೈನಲ್‌ನಲ್ಲಿ 400 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ನಂತರ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ಲಾಘಿಸಿದ್ದು ಇದು ರಾಜ್ಯಕ್ಕೆ "ಹೆಮ್ಮೆಯ ವಿಷಯ" ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, 79 ವರ್ಷಗಳಲ್ಲಿ ಮೊದಲ ಬಾರಿಗೆ ಕೂಚ್ ಬಿಹಾರ್ ಟ್ರೋಫಿಯನ್ನು ಗೆದ್ದಿರುವ ಕರ್ನಾಟಕ ಅಂಡರ್ 19 ಕ್ರಿಕೆಟ್ ತಂಡವನ್ನು ಅಭಿನಂದಿಸಿದ್ದಾರೆ. ಯುವ ಆಟಗಾರರು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಂತಹ ಹೆಗ್ಗುರುತುಗಳನ್ನು ಸಾಧಿಸಲಿ ಎಂದು ಸಿಎಂ ಹಾರೈಸಿದರು.

ಟ್ವೀಟ್ ಮಾಡಿರುವ ಅವರು, 79 ವರ್ಷಗಳಲ್ಲಿ ಮೊದಲ ಬಾರಿಗೆ ಕೂಚ್ ಬಿಹಾರ್ ಟ್ರೋಫಿ ಗೆದ್ದಿರುವ ಕರ್ನಾಟಕದ 19 ವರ್ಷದೊಳಗಿನವರ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು. ಈ ಗೆಲುವು ಸಂಕ್ರಾಂತಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ.
ಆರಂಭಿಕ ಬ್ಯಾಟರ್ ಪ್ರಖರ್ ಚತುರ್ವೇದಿ ಅಜೇಯ 404 ರನ್ ಗಳಿಸಿ ದಾಖಲೆ ನಿರ್ಮಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.
ಕರ್ನಾಟಕ ತಂಡವು 890 ರನ್‌ಗಳ ದಾಖಲೆಯ ಮೊತ್ತವನ್ನು ಪೇರಿಸುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ. ಯುವ ಆಟಗಾರರು ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲಿ ಎಂದು ಮನಃಪೂರ್ವಕವಾಗಿ ಹಾರೈಸುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ದಾಖಲೆ ಬರೆದ ಚತುರ್ವೇದಿ
ಸೋಮವಾರದಂದು ಮುಂಬೈ ವಿರುದ್ಧ ಕೂಚ್ ಬೆಹಾರ್ ಟ್ರೋಫಿಯಲ್ಲಿ ಪ್ರಖರ್ ಚತುರ್ವೇದಿ ಅಂಡರ್ 19 ಕ್ರಿಕೆಟಿಗರ ವಾರ್ಷಿಕ ನಾಲ್ಕು ದಿನಗಳ ಪಂದ್ಯಾವಳಿಯ ಪ್ರಶಸ್ತಿ ಹಣಾಹಣಿಯ ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಗಳಿಸಿದರು.
ಆರಂಭಿಕರಾಗಿ ಕಣಕ್ಕಿಳಿದ ಅವರು ಕರ್ನಾಟಕ ಇನ್ನಿಂಗ್ಸ್ ಡಿಕ್ಲೇರ್ ಮಾಡುವವರೆಗೂ ಕ್ರೀಸ್‌ನಲ್ಲಿ ಅಜೇಯರಾಗಿ ನಿಂತರು. ಅವರ ದಾಖಲೆಯ ಇನ್ನಿಂಗ್ಸ್‌ನಲ್ಲಿ ಎದುರಿಸಿದ 638 ಎಸೆತಗಳಲ್ಲಿ 46 ಬೌಂಡರಿಗಳು ಮತ್ತು 3 ಸಿಕ್ಸರ್ ಸಹಿತ ಅಜೇಯ 404 ರನ್ ಗಳಿಸಿದರು.
ಚತುರ್ವೇದಿ ಅವರ ಅಮೋಘ ಬ್ಯಾಕ್‌ನಿಂದ ಕರ್ನಾಟಕ ತನ್ನ ಮೊದಲ ಇನಿಂಗ್ಸ್‌ನಲ್ಲಿ 223 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳ ನಷ್ಟಕ್ಕೆ 890 ರನ್ ಗಳಿಸಿ ಮುನ್ನಡೆ ಸಾಧಿಸುವ ಮೂಲಕ, ಕೂಚ್ ಬೆಹಾರ್ ಟ್ರೋಫಿಯನ್ನು ಗೆದ್ದುಕೊಂಡಿತು.
ಪ್ರಖರ್ ಚತುರ್ವೇದಿ ಭಾರತದ ಮಾಜಿ ಸ್ಟಾರ್ ಬ್ಯಾಟರ್ ಯುವರಾಜ್ ಸಿಂಗ್ ಅವರ ದೀರ್ಘಾವಧಿಯ 24 ವರ್ಷಗಳ 358 ರನ್‌ಗಳ ದಾಖಲೆಯನ್ನು ಮುರಿದರು, ಇದು ಪಂದ್ಯಾವಳಿಯ ಫೈನಲ್‌ನಲ್ಲಿ ಹಿಂದಿನ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿತ್ತು.












Click it and Unblock the Notifications