Pat Cummins: ವಿಶ್ವಕಪ್ ಫೈನಲ್‌ನಲ್ಲಿ ಭಾರತವನ್ನು ಸೈಲೆಂಟ್ ಮಾಡಿದ್ದವ ಈಗ ಐಪಿಎಲ್‌ನ ದುಬಾರಿ ಆಟಗಾರ!
ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಇಡೀ ಭಾರತ ತಂಡದ ಅಭಿಮಾನಿಗಳನ್ನು ಸೈಲೆಂಟ್ ಮಾಡಿದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಈಗ ಐಪಿಎಲ್ ಇತಿಹಾಸದ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ದುಬೈನಲ್ಲಿ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಬರೋಬ್ಬರಿ 20.5 ಕೋಟಿ ರೂಪಾಯಿ ನೀಡಿ ಕಮ್ಮಿನ್ಸ್ ಅವರನ್ನು ಖರೀದಿಸಿದೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನ 16 ವರ್ಷಗಳ ಇತಿಹಾಸದಲ್ಲಿ ಇದು ಆಟಗಾರನೊಬ್ಬ ಪಡೆದ ಅತ್ಯಧಿಕ ಮೊತ್ತವಾಗಿದೆ. 2023ರ ಐಪಿಎಲ್ ಹರಾಜಿನಲ್ಲಿ 18.5 ಕೋಟಿ ರೂಪಾಯಿಗೆ ಇಂಗ್ಲೆಂಡ್‌ನ ಆಲ್‌ರೌಂಡರ್ ಸ್ಯಾಮ್ ಕರನ್ ಹರಾಜಾಗಿದ್ದು ಈವರೆಗಿನ ದಾಖಲೆಯಾಗಿತ್ತು. ಪಂಜಾಬ್ ಕಿಂಗ್ಸ್ ಸ್ಯಾಮ್ ಕರನ್ ಅವರನ್ನು ದುಬಾರಿ ಮೊತ್ತ ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು. ಆದರೆ ಇದೇ ಮೊದಲ ಬಾರಿಗೆ ಆಟಗಾರನೊಬ್ಬನ ಹರಾಜು ಮೊತ್ತ 20 ಕೋಟಿ ರೂಪಾಯಿ ದಾಟಿದೆ.

ಆರ್‌ಸಿಬಿ ತೀವ್ರ ಪೈಪೋಟಿ
ಆಸ್ಟ್ರೇಲಿಯಾ ಏಕದಿನ ತಂಡದ ನಾಯಕ ಪಾಟ್ ಕಮಿನ್ಸ್ 2 ಕೋಟಿ ಮೂಲ ಹೊಂದಿದ್ದರು. ಅವರ ಹೆಸರು ಹರಾಜಿಗೆ ಬಂದ ನಂತರ ಚೆನ್ನೈ ಸೂಪರ್ ಕಿಂಗ್ಸ್ ಮೊದಲು ಬಿಡ್ ಮಾಡಿತು. ನಂತರ ಮುಂಬೈ ಇಂಡಿಯನ್ಸ್ ಕಮ್ಮಿನ್ಸ್ ಅವರಿಗೆ ಬಿಡ್ ಮಾಡಿತು. ಮುಂಬೈ ಇಂಡಿಯನ್ಸ್ 4.80 ಕೋಟಿ ರೂಪಾಯಿವರೆಗೆ ಬಿಡ್ ಮಾಡಿ ಸುಮ್ಮನಾದರೆ, ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು 5 ಕೋಟಿ ರೂಪಾಯಿಗೆ ಬಿಡ್ ಮಾಡಿತು.
ಚೆನ್ನೈ ಸೂಪರ್ ಕಿಂಗ್ಸ್ 7.60 ಕೋಟಿ ರೂಪಾಯಿವರೆಗೆ ಪ್ಯಾಟ್ ಕಮ್ಮಿನ್ಸ್ ಅವರಿಗಾಗಿ ಬಿಡ್ ಮಾಡಿತು, ರಾಯಲ್ ಚಾಲೆಂಜರ್ಸ್ ಬೆಂಗಳೂರು 7.80 ಕೋಟಿ ರೂಪಾಯಿಗೆ ಬಿಡ್ ಮಾಡಿದ ಬಳಿಕ ಸಿಎಸ್‌ಕೆ ಸ್ಪರ್ಧೆಯಿಂದ ಹಿಂದೆ ಸರಿಯಿತು, ನಂತರ ಸನ್‌ರೈಸರ್ಸ್ ಹೈದರಾಬಾದ್ ತಂಡ ಬಿಡ್ ಮಾಡಲು ಆರಂಭಿಸಿತು.
ಎರಡೂ ತಂಡಗಳು ಆಸ್ಟ್ರೇಲಿಯಾ ತಂಡದ ನಾಯಕನಿಗಾಗಿ ತೀವ್ರ ಪೈಪೋಟಿ ನಡೆಸಿದವು. ಈ ಪೈಪೋಟಿಯನ್ನು ನೋಡಿ ಇತರ ಫ್ರಾಂಚೈಸಿಗಳು ಕೂಡ ಅಚ್ಚರಿಗೊಂಡವು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಕಾವ್ಯಾ ಮಾರನ್ ಛಲ ಬಿಡದೆ ಪೈಪೋಟಿ ಕೊಟ್ಟರು. 20.25 ಕೋಟಿ ರೂಪಾಯಿವರೆಗೆ ಬಿಡ್ ಮಾಡಿದ ಆರ್ ಸಿಬಿ ನಂತರ ಸ್ಪರ್ಧೆಯಿಂದ ಹಿಂದೆ ಸರಿಯಿತು. 20.5 ಕೋಟಿ ರೂಪಾಯಿಗೆ ಬಿಡ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ಸ್ಪರ್ಧೆಯಲ್ಲಿ ಗೆದ್ದಿತು.
ಉಳಿದಂತೆ ಆರ್ ಸಿಬಿ ಬಿಡುಗಡೆ ಮಾಡಿದ ಹರ್ಷಲ್ ಪಟೇಲ್ 11.75 ಕೋಟಿ ರೂಪಾಯಿ ನೀಡಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೇರಿದರು. ನ್ಯೂಜಿಲೆಂಡ್‌ನ ಆಲ್‌ರೌಂಡರ್ ಡೇರಿಲ್ ಮಿಚೆಲ್ 14 ಕೋಟಿ ರೂಪಾಯಿಗೆ ಸಿಎಸ್‌ಕೆ ತಂಡದ ಪಾಲಾಗಿದ್ದಾರೆ. ಅಚ್ಚರಿ ಎನ್ನುವಂತೆ ನ್ಯೂಜಿಲೆಂಡ್ ಆಲ್‌ರೌಂಡರ್ ರಚಿನ್ ರವೀಂದ್ರ 1.80 ಕೋಟಿ ರೂಪಾಯಿಗೆ ಸಿಎಸ್‌ಕೆ ಪಾಲಾಗಿದ್ದಾರೆ.












Click it and Unblock the Notifications