India vs New Zealand: ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ: ಭಾರತ ತಂಡದಲ್ಲಿ ಮೂರು ಬದಲಾವಣೆ
ಭಾರತದ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದಿರುವ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಮೊದಲ ಟೆಸ್ಟ್ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ನ್ಯೂಜಿಲೆಂಡ್ ಎರಡನೇ ಟೆಸ್ಟ್ ಗೆದ್ದು ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ. ಮೊದಲ ಟೆಸ್ಟ್ ಸೋತ ಬಳಿಕ ವಾಪಸಾತಿ ಮಾಡುವ ವಿಶ್ವಾಸದಲ್ಲಿರುವ ರೋಹಿತ್ ಶರ್ಮಾ ಪಡೆ, ಈ ಟೆಸ್ಟ್ ಗೆದ್ದು ಸರಣಿ ಸಮಬಲಗೊಳಿಸುವ ಜೊತೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ತವಕದಲ್ಲಿದೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ನ್ಯೂಜಿಲೆಂಡ್ ಆಡುವ ಬಳಗದಲ್ಲಿ ಒಂದು ಬದಲಾವಣೆ ಮಾಡಿದ್ದರೆ, ಭಾರತ ಪ್ರಮುಖ ಮೂರು ಬದಲಾವಣೆಗಳನ್ನು ಮಾಡಿದೆ. ನ್ಯೂಜಿಲೆಂಡ್‌ನ ವೇಗದ ಬೌಲರ್ ಮ್ಯಾಟ್ ಹೆನ್ರಿ ಈ ಪಂದ್ಯದಲ್ಲಿ ಹೊರಗುಳಿದಿದ್ದು, ಆಲ್‌ರೌಂಡರ್ ಮಿಚೆಲ್ ಸ್ಯಾಂಟ್ನರ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಭಾರತ ತಂಡದಲ್ಲಿ ಪ್ರಮುಖವಾಗಿ ಮೂರು ಬದಲಾವಣೆಗಳನ್ನು ಮಾಡಲಾಗಿದೆ. ಬೆಂಗಳೂರು ಟೆಸ್ಟ್‌ನಲ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ ರನ್ ಗಳಿಸಲು ವಿಫಲವಾಗಿದ್ದ ಕೆಎಲ್ ರಾಹುಲ್ ಈ ಪಂದ್ಯದಲ್ಲಿ ಅವಕಾಶ ಕಳೆದುಕೊಂಡಿದ್ದಾರೆ. ಕುತ್ತಿಗೆ ನೋವಿನಿಂದ ಮೊದಲ ಟೆಸ್ಟ್‌ನಲ್ಲಿ ಹೊರಗುಳಿದಿದ್ದ ಶುಭಮನ್ ಗಿಲ್ ಎರಡನೇ ಟೆಸ್ಟ್‌ನಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಕುಲದೀಪ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ಕೂಡ ಎರಡನೇ ಟೆಸ್ಟ್‌ನಲ್ಲಿ ಬೆಂಚ್ ಕಾಯಲಿದ್ದು, ವಾಷಿಂಗ್ಟನ್ ಸುಂದರ್ ಮತ್ತು ಆಕಾಶ್ ದೀಪ್ ಅವಕಾಶ ಪಡೆದುಕೊಂಡಿದ್ದಾರೆ.
ಪಿಚ್ ವರದಿ
ಪುಣೆಯಲ್ಲಿ ಟೆಸ್ಟ್ ಪಂದ್ಯ ಆರಂಭಕ್ಕೆ ಮುನ್ನ ಮಳೆಯಾಗಿದೆ. ಮಧ್ಯಾಹ್ನದ ವೇಳೆ ಹೆಚ್ಚು ಬಿಸಿಲು ಕಾಯಲಿದೆ ಎಂದು ಹೇಳಲಾಗಿದೆ. ಪಿಚ್ ಶುಷ್ಕವಾಗಿದ್ದು ಸ್ಪಿನ್ನರ್ ಗಳಿಗೆ ಹೆಚ್ಚಿನ ನೆರವು ಸಿಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಕುಲದೀಪ್ ಯಾದವ್‌ರನ್ನು ಕೈಬಿಟ್ಟರೂ ವಾಷಿಂಗ್ಟನ್ ಸುಂದರ್ ಅವರಿಗೆ ಅವಕಾಶ ಸಿಕ್ಕಿದೆ.
ಉಭಯ ತಂಡಗಳ ಆಡುವ ಬಳಗ
ಭಾರತ : ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಸರ್ಫರಾಜ್ ಖಾನ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ರವಿಚಂದ್ರನ್ ಅಶ್ವಿನ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ.
ನ್ಯೂಜಿಲೆಂಡ್ : ಟಾಮ್ ಲ್ಯಾಥಮ್ (ನಾಯಕ), ಡೆವೊನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಅಜಾಜ್ ಪಟೇಲ್, ವಿಲಿಯಂ ಒರೂರ್ಕೆ.












Click it and Unblock the Notifications